ಶಿಕ್ಷಕ ಶಿಕ್ಷಕಿಯರಿಗೆ ಪುನಶ್ಚೇತನ ಶಿಬಿರ
ಬೈಲಹೊಂಗಲ22: ಭಾರತ ಸೇವಾದಳ ಜಿಲ್ಲಾ ಸಮಿತಿ ಬೆಳಗಾವಿ, ತಾಲೂಕು ಸಮಿತಿ ಬೈಲಹೊಂಗಲ ಮತ್ತು ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಬೆಳಗಾವಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇವರುಗಳ ಸಂಯುಕ್ತ ಆಶ್ರಯದಲ್ಲಿ ಭಾರತ ಸೇವಾದಳದ ಒಂದು ದಿನದ ಶಿಕ್ಷಕ ಶಿಕ್ಷಕಿಯರಿಗೆ ಪುನಶ್ಚೇತನ ಶಿಬಿರ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ1 ರಲ್ಲಿ ಮಂಗಳವಾರ ಜರುಗಿತು.
ಶಿಬಿರವನ್ನು ಜಿಲ್ಲಾ ಸಮಿತಿ ಸದಸ್ಯ ಚಿತ್ರನಟ ಶಿವರಂಜನ ಬೋಳನ್ನವರ ಉದ್ಘಾಟಿಸಿ ಭಾರತ ಸೇವಾದಳ ಶಿಕ್ಷಕರಿಗೆ ರಾಷ್ರ್ಟಪ್ರೇಮದ ಮತ್ತು ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸದೃಡವಾಗುವ ನಿಟ್ಟಿನಲ್ಲಿ ತರಬೇತಿಗೊಳಿಸಿ ಶಿಕ್ಷಕರ ಮುಖಾಂತರ ಶಾಲಾ ಮಕ್ಕಳಿಗೆ ಹಾಗೂ ಯುವಕರಿಗೆ ತರಬೇತಿ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಜಿಲ್ಲಾ ಸಮಿತಿ ಅಧ್ಯಕ್ಷ ಮಹಾಂತೇಶ ತುರಮರಿ ಮಾತನಾಡಿ, ನಾ. ಸು. ಹರ್ಡೀಕರ ಸಂಸ್ಥಾಪಿಸಿದ ಭಾರತ ಸೇವಾದಳ ರಾಷ್ರ್ಟಪಿತ ಮಹಾತ್ಮಾ ಗಾಂಧೀಜಿ ಅವರ ತತ್ವ ಮತ್ತು ಕಾರ್ಯಕ್ರಮಗಳ ತಳಹದಿಯ ಮೇಲೆ ಯುವಕರನ್ನು ಸಂಘಟಿಸಿ ರಾಷ್ರ್ಟೀಯ ಸೇವೆಗಾಗಿ ತರಬೇತಿ ನೀಡುತ್ತಿದೆ. ಯುವಕರನ್ನು ಭಾರತದ ಆದರ್ಶ ನಾಗರೀಕರನ್ನಾಗಿ ಮಾಡಲು ಅವರಲ್ಲಿ ಸಂಯಮ, ಧೈರ್ಯ, ತ್ಯಾಗ, ಸರಳತೆ, ಸೇವೆ, ತಾಳ್ಮೆ, ಸಹಕಾರ ಮತ್ತು ಪೂರ್ಣಸೇವಾ ಮನೋಭಾವನೆಯನ್ನು ಮೂಡಿಸುತ್ತಿದೆ. ಸೇವಾದಳದ ಶಿಕ್ಷಕರ ಮೂಲಕ ಜನರ ಆರೋಗ್ಯ ಮತ್ತು ಶಾರೀರಿಕ ಧೃಡತೆಯನ್ನು ಬಲಗೊಳಿಸುತ್ತಿದೆ. ಜಾತಿಯ ಮತ್ತು ವರ್ಣಿಯ ಭಾವನೆಗಳನ್ನು ತ್ಯಜಿಸಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ರಾಷ್ರ್ಟೀಯತೆಯನ್ನು ಹೆಚ್ಚಿಸುತ್ತಿದೆ ಎಂದರಲ್ಲದೆ ಜಿಲ್ಲೆಯಾದ್ಯಾಂತ ಪ್ರತಿ ತಾಲೂಕಿನಲ್ಲಿ ಜಿಲ್ಲಾ ಸೇವಾದಳದ ಸಂಘಟಿಕರಾದ ಅನಿಲ ಪತ್ತಾರ ಅವರ ನೇತೃತ್ವದಲ್ಲಿ ಪುನಶ್ವೇತನ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದರು.
ಅತಿಥಿಗಳಾಗಿ ತಾಲೂಕಾಧ್ಯಕ್ಷ ಸುಭಾಸ ತುರಮರಿ, ತಾಲೂಕು ಕಾರ್ಯದರ್ಶಿ ಹಾಗೂ ನ್ಯಾಯವಾದಿ ಮಂಜುನಾಥ ಸೋಮನ್ನವರ, ತಾಲೂಕಾ ದೈಹಿಕ ಶಿಕ್ಷಣ ಪರೀವೀಕ್ಷಕ ಎಸ್.ಜಿ.ಹೊರಟ್ಟಿ, ಜಿಲ್ಲಾ ಸಮಿತಿ ಸದಸ್ಯ ಬಿ ಬಿ ಬಸಕ್ರಿ, ಮುಖ್ಯೋಪಾಧ್ಯಾಯ ಬಿ ಡಿ ತಮ್ಮನ್ನವರ ಆಗಮಿಸಿದ್ದರು.
ಜಿಲ್ಲಾ ಸಂಘಟಿಕ ಎ.ಆರ್.ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ ಬಿ ಕಮ್ಮಾರ ಸ್ವಾಗತಿಸಿದರು. ವೀರಣ್ಣ ಅಡಕಿ ನಿರೂಪಿಸಿದ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಎಸ್.ಬಿ.ಮಲಗೌಡ್ರ ವಂದಿಸಿದರು.