ಸದ್ದಿಲ್ಲದೆ ಸಾಧನೆ ಮಾಡಿದ ಸಮಾಜ ಸೇವಾ ಸಾಧಕ ಪುನೀತ್: ಸಂತೋಷಕುಮಾರ್
ರಾಣೀಬೆನ್ನೂರ 23: ಇತ್ತೀಚಿಗೆ ನಡೆದ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ ಅವರ ಹುಟ್ಟು ಹಬ್ಬವನ್ನು ಇಲ್ಲಿನ ಸಂತೋಷಕುಮಾರ ಪಾಟೀಲ ಅವರ ಅಭಿಮಾನಿ ಬಳಗ ಪವರ್ ಸ್ಟಾರ್ ಪುನೀತ್ ರಾಜ್ ಆಟೋ ಚಾಲಕ ಮಾಲಕರ ಸಂಘ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಡಾ. ರಾಜ್ ಕುಮಾರ ಅಭಿಮಾನಿಗಳ ಸಂಘವು ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸುವುದರ ಮೂಲಕ ವಾಣಿಜ್ಯ ನಗರೀಯಲ್ಲಿ ಸಾಂಸ್ಕೃತಿಕ ವಾತಾವರಣ ಮೂಡಿಸುವಲ್ಲಿ ಯಶಸ್ವಿಯಾಯಿತು.
ಇಲ್ಲಿನ ಅಂಬೇಡ್ಕರ್ ನಗರದ ಉದ್ಯಾನವನವನದಿಂದ ಆರಂಭಗೊಂಡ ಮೆರವಣಿಗೆಯನ್ನು ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದ ಸಂತೋಷಕುಮಾರ ಪಾಟೀಲ ಅವರು, ಪುನೀತ್ ರಾಜ್ ಕುಮಾರ್ ಅವರ ಸಾಧನೆ ಅಪಾರವಾದುದ್ದು, ಗಳಿಸಿದ್ದನ್ನು ಬಡ ಬಗ್ಗರಿಗೆ ದಾನ ನೀಡುವುದರ ಜೊತೆಗೆ ಅಂಧರಿಗೆ, ಅನಾಥರಿಗೆ, ವೃದ್ಧರಿಗೆ, ಅನಾಥ ಮಕ್ಕಳಿಗೆ, ಸ್ಪರ್ಧಾತ್ಮಕ ಪರಿಕ್ಷಾರ್ಥಿಗಳಿಗೆ ತರಬೇತಿ ನೀಡುವ ಸಂಸ್ಥೆ ಆರಂಭಿಸುವ ಮೂಲಕ ಈ ನಾಡಿನ ಮತ್ತು ಈ ದೇಶದ ಸಮಗ್ರ ಅಭಿವೃದ್ಧಿಗೆ ಮುಂದಾದ ಮಹಾನ್ ಚೇತನ ಅವರಾಗಿದ್ದಾರೆ ಎಂದರು.
ಇದ್ದಾಗ ಇಲ್ಲದವರಿಗೆ ಸಹಾಯ ಹಸ್ತ ನೀಡುವುದೇ ನಿಜವಾದ ಮಾನವೀಯ ಧರ್ಮವಾಗಿದೆ ಎನ್ನುವ ಧರ್ಮ ಮಾರ್ಗದ ವಾಣಿಯಂತೆ ಪುನೀತ್ ರಾಜ್ ಅವರು ತಮ್ಮ ಜೀವನದುದ್ದಕ್ಕೂ ಬದುಕಿ ಬಾಳಿದವರು. ಹಿಗೇಯೆ ಬದುಕಬೇಕು. ಬಾಳಬೇಕು ಬಾಳನ್ನು ಸಮನಾಗಿ ಸ್ವೀಕರಿಸಿ ಸರ್ವರಿಗೂ ಹಂಚಿ ಸಮಾನತೆಯಿಂದ ಜೀವನವನ್ನು ಸಾಗಿಸಬೇಕು ಎನ್ನುವ ಮಹಾದಾಸೆ ಹೊಂದಿದ್ದ ರಾಜರತ್ನ ಇಂದು ನಮ್ಮೊಂದಿಗೆ ಅವರಿಲ್ಲದೇ ಇದ್ದರೂ ಸಹ ಅವರು ಮಾಡಿದ ಅಪ್ರತಿಮ ಸಾಮಾಜಿಕ ಸಾಂಸ್ಕೃತಿಕ ಸೇವೆ ಸೂರ್ಯ ಚಂದ್ರರು ಈ ಭೂಮಿಯ ಮೇಲೆ ಬೆಳಗುವ ವರೆಗೂ ಇರುತ್ತದೆ ಎಂದರು.
ಸಂಘಟನೆಯ ನೇತೃತ್ವ ವಹಿಸಿದ್ದ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಅವರು, ಮಾತನಾಡಿ ವಾಣಿಜ್ಯ ನಗರದ ಎಲ್ಲಾ ಸಂಘ ಸಂಸ್ಥೆಗಳ ಅಪೇಕ್ಷೆ ಒಮ್ಮತ, ಮತ್ತು ಪುನೀತ್ ರಾಜ್ ಅವರ ಮೇಲಿರುವ ಅತ್ಯಂತ ಅಭಿಮಾನದಿಂದಾಗಿ ಎಲ್ಲಾ ಸಂಘ ಸಂಸ್ಥೆಗಳು ಸೇರಿ ಸಿದ್ದತೆಯೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನಗರದಲ್ಲಿ 2 ದಿವಸಗಳ ಕಾಲ ನಾಭೂತೋ ನಾ ಭವಿಷ್ಯತೋ ಎನ್ನುವ ರೀತಿಯಲ್ಲಿ ಹುಟ್ಟು ಹಬ್ಬ ನೆರವೇರಿದ್ದು ಸಂಘಟಿಕರಿಗೆ ಅತ್ಯಂತ ಸಂತೋಷ ತಂದಿದೆ ಎಂದ ಅವರು, ಹಾವೇರಿ ಜಿಲ್ಲೆಯ ವಾಣಿಜ್ಯ ನಗರ ರಾಣೇಬೆನ್ನೂರು ಹಳೇ ಮೈಸೂರಿನಿಂದ ಉತ್ತರ ಕರ್ನಾಟಕದ ಹೆಬ್ಬಾಗಿಲು ಪ್ರಮುಖ ಕೇಂದ್ರವಾಗಿದೆ. ಆದರೆ, ತಾಲೂಕಿನಲ್ಲಿ ಕಲಾವಿದರು. ಕುಸ್ತಿ ಪೈಲ್ವಾನರು ನಾಟಕಕಾರರು ಜನಪದ ಲಾವಣಿ ಗೀಗೀ ಸೇರಿದಂತೆ ಸಮಾಜಕ್ಕಾಗಿ ತಾಲೂಕಿನ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾಕಷ್ಟು ಜನ ತಮ್ಮ ಪ್ರಾಣವನ್ನು ತೊರೆದಿದ್ದಾರೆ. ಆದರೆ, ನಗರದ ಯಾವುದೇ ಭಾಗದಲ್ಲಿ, ಯಾವುದೇ ವೃತ್ತದಲ್ಲಿ ಸಾಧಕರ ನಾಮಕರಣ ಮಾಡದೆ ಇರುವುದು ಅತ್ಯಂತ ವಿಷಾಧಕರ ಸಂಗತಿಯಾಗಿದ್ದು, ಕೂಡಲೇ ನಗರ ಸಭೆ ಆಡಳಿತ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಮತ್ತು ನಾಮಕರಣಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿದ್ದನಗೌಡ ಪಾಟೀಲ, ಎ.ಬಿ.ಪಾಟೀಲ, ಕೋಟ್ರೇಶಪ್ಪ ಎಮ್ಮಿ, ನಾಗರಾಜ್ ಅಯ್ಯಜ್ಜನವರ, ತಿಪ್ಪೇಶಕುಮಾರ ಮುಕ್ತೇನಹಳ್ಳಿ, ಭಾಷಾಸಾಬ್ ಹಂಪಣ್ಣನವರ, ನಾಗರಾಜ್ ದಾವಣಗೇರಿ, ವೆಂಕಟೇಶ್ ಕಾಕಿ, ಶಂಕರ್ ಕಾಕಿ, ಶಿವಕುಮಾರ್ ಜಾಧವ್, ಕೆ.ಎಸ್.ನಾಗರಾಜ್, ವಿಶ್ವನಾಥ್ ಕುಂಬಳೂರು, ಕೃಷ್ಣಮೂರ್ತಿ ಎಸ್ ಲಮಾಣಿ, ಪ್ರಕಾಶ ಪೂಜಾರ, ಹನುಮಂತಪ್ಪ ಕಬ್ಬಾರ, ಯುವರಾಜ್ ಬಾರಟಕ್ಕೆ, ಕುಬೇರ್ಪ ಅಟವಾಳಗಿ, ರಾಘು ಕೆಂಚಮ್ಮನವರ, ವಿನಯ್ ಬಿ.ಕೆ, ಗೋಪಿ ಕುಂದಾಪುರ, ದೇವರಾಜ್ ಕಲಾಲ್, ಸಿದ್ದಾರೂಢ ಗುರುಂ, ಪಾಲಾಕ್ಷಪ್ಪ ಕಡೇಮನಿ, ನವೀನ್ ಹೆಚ್.ಎಸ್, ಶಿವಕುಮಾರ ಹಿರೇಬಿದರಿ, ಸೋಮಶೇಖರ ಗುಂಡಗಟ್ಟಿ, ಅಲ್ತಾಫ್ ಹಲಗೇರಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಅಪ್ಪು ಅಭಿಮಾನಿಗಳು, ಆಟೋ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಅಪ್ಪು ತೈಲ ಭವ್ಯ ಭಾವಚಿತ್ರದ ಸಾರೋಟ ಮೆರವಣಿಗೆಯು ಸಾರ್ವಜನಿಕರ ಗಮನ ಸೆಳೆಯಿತು.