ಒಳಿತನ್ನೆ ಬಯಸುವ ಕವಿ ಮನಸ್ಸು ಶ್ರೇಷ್ಠ ಕಾವ್ಯ ಸೃಜಿಸಲು ಸಾಧ್ಯ
ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಬೈಲಹೊಂಗಲ ಕಸಾಪ ಘಟಕದ ಅಧ್ಯಕ್ಷ ಎನ್.ಆರ್.ಠಕ್ಕಾಯಿ
ಸವದತ್ತಿ 06: ಸದಾ ಒಳಿತನ್ನೆ ಬಯಸುವ ಕವಿ ಮನಸ್ಸು ಶ್ರೇಷ್ಠ ಕಾವ್ಯ ಸೃಜಿಸಲು ಸಾಧ್ಯವಿದ್ದು, ಕವಿತೆಗಳು ಆತ್ಮ ತೃಪ್ತಿಯ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಬೇಕೆಂದು ಬೈಲಹೊಂಗಲ ಕಸಾಪ ಘಟಕದ ಅಧ್ಯಕ್ಷ ಎನ್.ಆರ್.ಠಕ್ಕಾಯಿ ಹೇಳಿದರು.
ಪಟ್ಟಣದ ಡಿ. ದೇವರಾಜ್ ಅರಸು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಸಹೃದಯ ಸಾಹಿತ್ಯ ಪ್ರತಿಷ್ಠಾನ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ನಿರ್ಲಿಪ್ತ ಭಾವದಲ್ಲಿ ಜನಿಸಿದ ಕವಿತೆ ಜನಮನ ತಲುಪುವುದಲ್ಲದೇ ಎಲ್ಲ ಕಾಲಕ್ಕೂ ಜೀವಂತವಾಗಿರಬಲ್ಲದು ಎಂದರು.
ಬಾಗಲಕೋಟೆಯ ಹಿರಿಯ ಕವಿ, ಕಥೆಗಾರ ಡಾ. ಪ್ರಕಾಶ್ ಖಾಡೆ ಮಾತನಾಡಿ, ರಾಜ್ಯಮಟ್ಟದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳುವ ಮೂಲಕ ನಾಡಿನ ಯುವ ಕವಿಗಳಿಗೆ ವೇದಿಕೆ ಒದಗಿಸಿಕೊಟ್ಟು ಅವರ ಪ್ರತಿಭೆಯನ್ನು ಬೆಳಕಿಗೆ ತರುವ ಸಹೃದಯ ಸಾಹಿತ್ಯ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು. ಕವಿಯಾದವನಿಗೆ ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸುವ ದೃಷ್ಟಿಕೋನವಿರಬೇಕು. ಧ್ಯಾನದಿಂದಲೇ ಕಾವ್ಯ ಕುಡಿಯೊಡೆಯಲು ಸಾಧ್ಯವಾಗಿದ್ದು, ಕವಿತೆ ಎಂಬುದು ಶೃದ್ಧೆ, ತಪಸ್ಸು, ದೀರ್ಘ ಓದಿನ ಮೂಲಕ ಒಲಿಯುತ್ತದೆ ಎಂದರು.
ನಾಗೇಶ್ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಸುತ್ತಮುತ್ತಣ ಸಂಗತಿಗಳಿಗೆ ಸ್ಪಂದಿಸುವ ಹೊಣೆಗಾರಿಕೆಯನ್ನು ಕವಿ ಹೊಂದಿರಬೇಕಿದ್ದು, ಹೆಚ್ಚಿನ ಅಧ್ಯಯನ ಮಾಡುವುದರ ಮೂಲಕ ಯುವಕವಿಗಳು ಉತ್ತಮ ಕವಿತೆಯ ರಚನೆಯಲ್ಲಿ ತೊಡಗಿಕೊಳ್ಳಬೇಕೆಂದರು.
ಗಜಲ್ ಕವಿ ಅಲ್ಲಾಗಿರಿರಾಜ್, ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಆರ್.ಎಸ್.ಪಾಟೀಲ, ಬೆಳಗಾವಿಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ವಿಠಲ ತಡಸಲೂರ, ನಿಲಯಪಾಲಕ ಹಾಶೀಮ್ ತಹಶೀಲ್ದಾರ, ಮಾಜಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮೋಹನ ಪಾಟೀಲ ಮಾತನಾಡಿದರು.
ದಾವಣಗೆರೆ ಜಿಲ್ಲೆಯ ರೇವಣಸಿದ್ದಪ್ಪ ಜಿ. ಆರ್, ಬೆಳಗಾವಿಯ ರಮೇಶ ಮಡಿವಾಳರ, ರಾಯಭಾಗದ ಸಾಗರ ಝೆಂಡೆನ್ನವರ ರಚಿಸಿದ ಕವಿತೆಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ನೀಡಿ ನಗದು ಪುರಸ್ಕಾರಗಳಿಂದ ಗೌರವಿಸಲಾಯಿತು.
ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಎಸ್. ನಾಗಪ್ರಸಾದ್, ಮಹಾಂತೇಶ ಕಮತ, ರತ್ನಾ ರಾಯಚೂರಕರ್, ಸರಸ್ವತಿ ಬನ್ನಿಗಿಡದ, ಸುಖದೇವಾನಂದ ಚವತ್ರಿಮಠ, ಬಸವರಾಜ ಗುಡೆನ್ನವರ, ಪ್ರಶಾಂತ ಪಾಟೀಲ, ಶಿವಾನಂದ ತೋರಣಗಟ್ಟಿ, ಅಯ್ಯಪ್ಪ ಕಂಬಾರ, ಶಕುಂತಲಾ ನಾಯಕ, ರಂಜಿತಾ ಮಹಾಜನ, ಕಿರಣ ಯಲಿಗಾರ, ಜ್ಯೋತಿ ಸಿ. ಎಂ, ಸಂತೋಷ ಹುಬ್ಬಳ್ಳಿ, ರೇವಣಸಿದ್ಧಪ್ಪ ಜಿ. ಆರ್., ಶ್ರೀಶೈಲ ಕಂಬಾರ, ದುಂಡು ಎಮ್. ಪೂಜೇರಿ, ಮಂಜುಳಾ ಎಮ್. ಕಾಡನ್ನವರ, ಶೈಲಜಾ ತಳವಾರ, ಸೌಮ್ಯ ನಾವಲಗಿ, ಚೇತನ್ ಪಕಾಲಿ, ಅನಸೂಯಾ ಮೇಟ್ಯಾಲ, ಸೌಮ್ಯ ಕೋಟಗಿ ಕವಿ-ಕವಯತ್ರಿಯರು ಕವಿತೆ ವಾಚಿಸಿದರು.
ಕು. ಜಯಶ್ರೀ ಕೀಲಿ ಹಾಗೂ ಸಂಗಡಿಗರು ಪ್ರಾರ್ಥನೆ ಮಾಡಿದರು. ಪ್ರವೀಣ ಭೀ. ಶೆಟ್ಟೆಪ್ಪನವರ ಸ್ವಾಗತಿಸಿದರು. ಎಸ್. ಬಿ. ಗರಗದ ಗ್ರಂಥ ಸಮರ್ಪಣೆ ಮಾಡಿದರು. ಎಮ್.ಪಿ.ಪಾಟೀಲ ನಿರೂಪಿಸಿದರು. ಸಂತೋಷ ಹುಬ್ಬಳ್ಳಿ ವಂದಿಸಿದರು.