ಧಾರವಾಡ - ಹುಬ್ಬಳ್ಳಿ

ಉತ್ತಮ ಗುಣಗಳಿಂದಲೇ ವ್ಯಕ್ತಿ ಶ್ರೇಷ್ಠನಾಗುತ್ತಾನೆ : ಡಾ. ಅಜಿತ ಪ್ರಸಾದ

ಉತ್ತಮ ಗುಣಗಳಿಂದಲೇ ವ್ಯಕ್ತಿ ಶ್ರೇಷ್ಠನಾಗುತ್ತಾನೆ : ಡಾ. ಅಜಿತ ಪ್ರಸಾದ

ಲೋಕದರ್ಶನ ವರದಿ 

          ಧಾರವಾಡ 27:  ಜನ್ಮದಿಂದ ಯಾರೂ ಶ್ರೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ. ವ್ಯಕ್ತಿಯ ಉತ್ತಮ ಗುಣ, ನಡತೆ ಮತ್ತು ಆದರ್ಶಗಳೇ ಆತನ ಶ್ರೇಷ್ಠತೆಯನ್ನು ನಿರ್ಧರಿಸುತ್ತವೆ. ಆದ್ದರಿಂದ ಜಾತಿ, ಧರ್ಮಗಳ ಭೇದವಿಲ್ಲದೆ ಎಲ್ಲರೊಂದಿಗೆ ಸ್ನೇಹ, ಪ್ರೀತಿ ಮತ್ತು ಸೌಹಾರ್ದದಿಂದ ಬದುಕಬೇಕು ಎಂದು ಜೆ.ಎಸ್‌.ಎಸ್‌. ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು. 

               ನಗರದ ಜೆ.ಎಸ್‌.ಎಸ್‌. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

              ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಬೀರ​‍್ಪ ಮತ್ತು ಬಚ್ಚಮ್ಮ ದಂಪತಿಗೆ ತಿರುಪತಿ ತಿಮ್ಮಪ್ಪನ ವರ​‍್ರಸಾದದಿಂದ ಕನಕದಾಸರು ಜನಿಸಿದರು. ಆರಂಭದಲ್ಲಿ ದಂಡನಾಯಕರಾಗಿ ಬಂಕಾಪುರದಲ್ಲಿ ಸೇವೆ ಸಲ್ಲಿಸಿದ ಅವರು, ಯುದ್ಧದಲ್ಲಿ ಗಾಯಗೊಂಡು ಕಾಗಿನೆಲೆ ಆದಿಕೇಶವನ ಕೃಪೆಯಿಂದ ಗುಣಮುಖರಾದ ಬಳಿಕ ಆಧ್ಯಾತ್ಮಿಕ ಬದುಕಿನತ್ತ ಒಲವು ಬೆಳೆಸಿಕೊಂಡರು.                                       ವ್ಯಾಸರಾಯರಿಂದ ದೀಕ್ಷೆ ಪಡೆದು ಅವರ ಶಿಷ್ಯರಾದರು. ಉಡುಪಿಯ ಶ್ರೀಕೃಷ್ಣನ ದರ್ಶನವನ್ನು ತಮ್ಮ ಭಕ್ತಿಗೀತೆ ಮತ್ತು ಭಜನೆಯ ಮೂಲಕ ಪಡೆದುಕೊಂಡರು. ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ ಹಾಗೂ ರಾಮಧಾನ್ಯ ಚರಿತ್ರೆ ಕನಕದಾಸರ ಪ್ರಮುಖ ಕೃತಿಗಳಾಗಿವೆ. ತಮ್ಮ ಸಾಹಿತ್ಯದ ಮೂಲಕ ವಿಜಯನಗರ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಸ್ಥಿತಿಗತಿಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.

                ಅವರ ಕೀರ್ತನೆಗಳು ಕೇವಲ ಭಕ್ತಿಯ ಅಭಿವ್ಯಕ್ತಿಗಳಾಗಿರದೆ, ಬದುಕಿಗೆ ಮಾರ್ಗದರ್ಶನ ನೀಡುವ ಮೌಲ್ಯಯುತ ಸಂದೇಶಗಳಾಗಿವೆ. 'ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ', 'ತಲ್ಲಣಿಸದಿರು ಕಂಡ್ಯ ತಾಳು ಮನವೆ', 'ಕುಲ ಕುಲವೆಂದು ಹೊಡೆದಾಡದಿರಿ', 'ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ' ಮೊದಲಾದ ಕೀರ್ತನೆಗಳು ಮಾನವೀಯತೆ, ಸಮಾನತೆ ಹಾಗೂ ಜೀವನದರ್ಶನವನ್ನು ಸಾರುತ್ತವೆ ಎಂದು ಹೇಳಿದರು. 

                    ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧ್ಯಾಪಕ ಪ್ರೊ. ಮಹಾಂತ ದೇಸಾಯಿ ಅವರು ಕನಕದಾಸರ ಬದುಕು ಮತ್ತು ಬರಹಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ತಿಮ್ಮಪ್ಪ ನಾಯಕನಿಂದ ಕನಕಪ್ಪನಾಗಿ, ನಂತರ ಕನಕದಾಸರೆಂಬ ದಾಸಶ್ರೇಷ್ಠರಾಗಿ ರೂಪುಗೊಂಡ ಅವರ ಜೀವನ ಪಯಣ, ಭಕ್ತಿ, ಸಾಮಾಜಿಕ ಕಳಕಳಿ ಹಾಗೂ ಸಾಹಿತ್ಯಿಕ ಕೊಡುಗೆಗಳನ್ನು ವಿವರಿಸಿದರು. 

                    ಡಾ. ಆರ್‌.ವಿ. ಚಿಟಗುಪ್ಪಿ ಕಾರ್ಯಕ್ರಮ ನಿರೂಪಿಸಿದರು. ಡಾ. ಶಿಲ್ಪಾ ನಾಯಕ, ಡಾ. ಜ್ಯೋತಿ ಅಕ್ಕಿ, ಶ್ರೀ ಮುರಳೀಧರ ಹೆಗಡೆ, ಡಾ. ರೋನಿಲ್ ಮನೋಹರ, ಶ್ರೀ ಉಮೇಶ ಅಂಬಿಗೇರ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ