ಆ. 15ರಂದು ಹೊಸಪೇಟೆಯಲ್ಲಿ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ
ಹೊಸಪೇಟೆ (ವಿಜಯನಗರ) 19: ಅಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ದೇಶದ ಸ್ವಾತಂತ್ರ್ಯ ಹೋರಾಟ ಬಿಂಬಿಸುವ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮ ಆ.15ರಂದು ಸಂಜೆ 6ಕ್ಕೆ ವಿಜಯನಗರದ ಜಿಲ್ಲಾ ಕೇಂದ್ರವಾದ ಹೊಸಪೇಟೆಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ರಾಜ್ಯದ ವಿವಿಧ ಸ್ಥಳಗಳಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದ ಕಥನ ಬಿಂಬಿಸುವ ಮತ್ತು ಮೆಲುಕು ಹಾಕುವ ಹಾಗೂ ಯುವಜನರಲ್ಲಿ ದೇಶಪ್ರೇಮ ಬೆಳೆಸುವ ಉದ್ದೇಶದಿಂದ ಅತ್ಯಂತ ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ದೊಡ್ಡಪ್ರಮಾಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ, ಅದರಲ್ಲಿ ನಮ್ಮ ಹೊಸಪೇಟೆಯೂ ಸೇರಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ತಿಳಿಸಿದರು.
ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ವಿಜಯನಗರ ಜಿಲ್ಲೆ ನೀಡಿದ ಕೊಡುಗೆಯನ್ನು ಆಧಾರವಾಗಿಟ್ಟುಕೊಂಡು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು;ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮಕ್ಕೆ ಅನುದಾನವನ್ನು ಒದಗಿಸುವಂತೆ ಕೋರಿ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಕಳುಹಿಸಲು ನಿರ್ಧರಿಸಲಾಯಿತು.
ವನ್ಯಜೀವಿಗಳ ಕುರಿತು ಪ್ರವಾಸಿ ಮಾರ್ಗದರ್ಶಿಗಳಿಗೆ ಕಾರ್ಯಾಗಾರ: ಪ್ರವಾಸಿ ಮಾರ್ಗದರ್ಶಿಗಳು ವಿವಿಧೆಡೆಯಿಂದ ಆಗಮಿಸುವ ಪ್ರವಾಸಿಗರಿಗೆ ವಿಶ್ವಪಾರಂಪರಿಕ ತಾಣ ಹಂಪಿಯ ಸ್ಮಾರಕಗಳನ್ನು ತೋರಿಸಿ ಅದರ ಬಗ್ಗೆ ವಿವರಣೆ ನೀಡುತ್ತಾರೆ. ವಿಜಯನಗರ ಜಿಲ್ಲೆ ಎಂದಾಕ್ಷಣ ಕೇವಲ ಹಂಪಿ ಮಾತ್ರವಲ್ಲ; ಅದರ ಜೊತೆಗೆ ದರೋಜಿ ಕರಡಿ ಧಾಮ, ನೀರು ನಾಯಿಗಳು, ಕಮಲಾಪುರ ಜೂ,ಗುಡೇಕೋಟೆ ಕರಡಿಧಾಮ, ಅಂಕಸಮುದ್ರ ಪಕ್ಷಿಧಾಮ ಸೇರಿದಂತೆ ಇನ್ನೀತರ ಪ್ರಮುಖ ಸ್ಥಳಗಳೂ ಇವೆ ಎಂಬುದನ್ನು ಪ್ರವಾಸಿಗರಿಗೆ ಪ್ರಮಾಸಿ ಮಾರ್ಗದರ್ಶಿಗಳು ಮನದಟ್ಟು ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ತಿಳಿಸಿದರು.
ಈ ಕುರಿತು ಪ್ರವಾಸಿ ಮಾರ್ಗದರ್ಶಿಗಳಿಗಾಗಿಯೇ ವಿಜಯನಗರದಲ್ಲಿ ವನ್ಯಜೀವಿಗಳ ಕುರಿತು ಕಾರ್ಯಾಗಾರ ಏರಿ್ಡಸಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಮಾರ್ಗದರ್ಶಿಗಳಿಗೆ ತಿಳಿಸಿದರೇ ಅನುಕೂಲವಾಗಲಿದೆ ಎಂದರು. ಪ್ರವಾಸಿ ಮಾರ್ಗದರ್ಶಿಗಳ ಸಭೆ ಕರೆದು ಪ್ರವಾಸಿ ಮಾರ್ಗದರ್ಶಿಗಳಿಗೆ ಗುರುತಿನ ಚೀಟಿ ಹಾಗೂ ಇನ್ನೀತರ ಅವರ ಸಮಸ್ಯೆಗಳನ್ನು ಆಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಇನ್ನೀತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಸೇರಿದಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಸದಸ್ಯರು ಇದ್ದರು.