ಅವ್ಯವಸ್ಥೆಯ ಆಗರವಾಗಿರುವ ಮುಕ್ತಿಧಾಮ; ಶವಸಂಸ್ಕಾರಕ್ಕಾಗಿ ಪರದಾಟ
ಲೋಕದರ್ಶನ ವರದಿ
ಸಂತೊಷಕುಮಾರ ಕಾಮತ
ಮಾಂಜರಿ ದಿ 3: ಜೀವನ ಎಂಬ ಜಾತ್ರೆ ಮುಗಿಸಿ ಚಿರನಿದ್ರೆಗೆ ಜಾರುವ ಪ್ರತಿಯೊಬ್ಬ ವ್ಯಕ್ತಿಯ ಅಂತಿಮ ಸಂಸ್ಕಾರ ನಡೆಸುವ ಮುಕ್ತಿಧಾಮ, ಆ ಜೀವಿಗೆ ಚಿರಶಾಂತಿ ನೀಡುವ ಪವಿತ್ರ ತಾಣ. ಆದರೆ, ಮುಕ್ತಿಧಾಮವೇ ಅವ್ಯವಸ್ಥೆಯ ಆಗರವಾಗಿರುವುದರಿಂದ ತಾಲೂಕಿನ ಸದಲಗಾ ಪಟ್ಟಣದಲ್ಲಿ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಜನ ಪರದಾಡುವಂತಾಗಿದೆ.
ಪುರಸಭೆ ಸ್ಥಾನಮಾನ ಹೊಂದಿರುವ ತಾಲೂಕಿನ ಸದಲಗಾ ಪಟ್ಟಣವು ಸುಮಾರು 35 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಜೈನರು, ಮರಾಠಾ, ಲಿಂಗಾಯತ, ಹಾಲುಮತ ಸೇರಿದಂತೆ ಇತರೆ ಉಪಜಾತಿಗಳ ಜನರು ವಾಸಿಸುತ್ತಾರೆ. ಸಾಮಾನ್ಯವಾಗಿ ಜೈನರು ಮತ್ತು ಮರಾಠ, ಬ್ರಾಹ್ಮಣ, ದೈವಜ್ಞ ಬ್ರಾಹ್ಮಣ ಸಮಾಜದವರು ಪಾರ್ಥಿವ ಶರೀರಗಳನ್ನು ದಹನ ಮಾಡಿ ಪಂಚಮಹಾಭೂತಗಳಲ್ಲಿ ಲೀನ ಮಾಡುವುದು ಈ ಭಾಗದ ವಾಡಿಕೆ.
ಸದಲಗಾ ಪಟ್ಟಣದ ಉತ್ತರದಲ್ಲಿ ಹರಿದಿರುವ ದೂಧಗಂಗಾ ನದಿದಂಡೆಯಲ್ಲಿ ಸ್ಮಶಾನವಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಕಳೆದೆರೆಡು ವರ್ಷಗಳ ಆಚೆ ಸಂಭವಿಸಿದ ದೂಧಗಂಗಾ ನದಿ ಪ್ರವಾಹದಲ್ಲಿ ಮುಕ್ತಿಧಾಮದ ಶೆಡ್ ಕಿತ್ತುಕೊಂಡು ಹೋಗಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕರು ಮಳೆಗಾಲ, ಬೇಸಿಗೆಯಲ್ಲಿ ಪಾರ್ಥಿವ ಶರೀರಗಳ ಅಂತ್ಯಸಂಸ್ಕಾರಕ್ಕೆ ಪರದಾಡುವಂತಾಗಿದೆ. ಬೇಸಿಗೆಯಲ್ಲಿ ನೆರಳಿನ ವ್ಯವಸ್ಥೆಯಿಲ್ಲ. ಮಳೆಗಾಲದಲ್ಲಂತೂ ಮೃತದೇಹಗಳನ್ನು ದಹನ ಮಾಡುವುದೇ ಸವಾಲಾಗಿದೆ ಎಂಬುದು ಸ್ಥಳೀಯರ ಅಳಲು.
ವ್ಯಕ್ತಿ ಮೃತಪಟ್ಟಾಗ ಸಂಪ್ರದಾಯದಂತೆ ಹೂಳುವ ಲಿಂಗಾಯತ, ಹಾಲುಮತ ಸಮಾಜದ ಕೆಲವರೂ, ಮಳೆಗಾಲದಲ್ಲಿ ಗುಂಡಿ ಅಗೆಯಲು ಸಾಧ್ಯವಾಗದೇ ಇರುವುದರಿಂದ ದೂಧಗಂಗಾ ನದಿಯ ದಂಡೆಯಲ್ಲಿಯೇ ಅಗ್ನಿಸ್ಪರ್ಷ ನೀಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಾರೆ ಎಂದು ಸದಲಗಾದ ಏಕವೀರಿ ಫೌಂಡೇಷನ್ ಅಧ್ಯಕ್ಷ ರಾಜಕುಮಾರ ಡಾಂಗೆ ಹೇಳುತ್ತಾರೆ.
ಸದಲಗಾ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸುಮಾರು 3 ಕಿ.ಮೀ.ಸುತ್ತಳತೆಯಲ್ಲಿ ವಿಸ್ತಾರಗೊಂಡಿದೆ. ದೂರದ ಬಡಾವಣೆ ಅಥವಾ ತೋಟಪಟ್ಟಿಯಲ್ಲಿ ವ್ಯಕ್ತಿ ಮೃತಪಟ್ಟಾಗ ಮುಕ್ತಿಧಾಮದ ವರೆಗೆ ಶವವನ್ನು ಸಾಗಿಸಲು ತೊಂದರೆಯಾಗುತ್ತಿದೆ. ಬಹುತೇಕ ಜನ ಬೈಕ್ ಅಥವಾ ವಾಹನಗಳ ಮೂಲಕ ಸ್ಮಶಾನಕ್ಕೆ ತೆರಳುತ್ತಾರೆ. ಶವ ಸಾಗಿಸುವ ದಾರಿಯುದ್ದಕ್ಕೂ ಹೆಚ್ಚಿನ ಜನರು ಶವದ ಜೊತೆಗೆ ಇರುವುದಿಲ್ಲ. ಪುರಸಭೆಯಿಂದ ಶವವಾಹಿಕಾ ವಾಹನ ವ್ಯವಸ್ಥೆ ಕಲ್ಪಿಸಬೇಕು ಮತ್ತು ಸ್ಮಶಾನಕ್ಕೆ ಸುಸಜ್ಜಿತವಾದ ಶೆಡ್ ನಿರ್ಮಿಸಿ, ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಏಕವೀರಿ ಫೌಂಡೇಷನ್ ಮತ್ತು ಸಾರ್ವಜನಿಕರ ಪರವಾಗಿ ಪುರಸಭೆಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
**ಅವ್ಯವಸ್ಥೆಯ ಆಗರವಾಗಿರುವ ಸದಲಗಾ ಪಟ್ಟಣದ ಸ್ಮಶಾನಕ್ಕೆ ಶೆಡ್ ನಿರ್ಮಾಣ ಮಾಡುವ ಜೊತೆಗೆ ಶವವಾಹಿಕಾ ವಾಹನ ವ್ಯವಸ್ಥೆಯನ್ನೂ ಕಲ್ಪಿಸಬೇಕು
- ರಾಜಕುಮಾರ ಡಾಂಗೆ, ಅಧ್ಯಕ್ಷ ಏಕವೀರಿ ಫೌಂಡೇಷನ್ ಸದಲಗ