ರಾಣೆಬೆನ್ನೂರ

ಭಕ್ತರ ಸದಿಚ್ಚೆ, ರಂಭಾಪುರಿ ಶ್ರೀಗಳ ಆರ್ಶಿವಾದ; ಕನಸು ನನಸಾಗುತ್ತಲಿದೆ

ಭಕ್ತರ ಸದಿಚ್ಚೆ, ರಂಭಾಪುರಿ ಶ್ರೀಗಳ ಆರ್ಶಿವಾದ; ಕನಸು ನನಸಾಗುತ್ತಲಿದೆ

ರಾಣಿಬೆನ್ನೂರ 19: ಉತ್ತರ ಕರ್ನಾಟಕದ ಹೆಬ್ಬಾಗಿಲು ಕುಮಾರಪಟ್ಟಣಂ ಬಳಿಯ ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ತುಂಗಭದ್ರಾ ನದಿ ತಟದಡಿಯಲ್ಲಿ ಐತಿಹಾಸಿಕ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಪುಣ್ಯಕೋಟಿ ಮಠದಲ್ಲಿ ಬಾಳೇಹೊನ್ನೂರು ರಂಭಾಪುರಿ ಜಗದ್ಗುರುಗಳಾದ ವೀರಸೋಮಶೇಖರ ಶಿವಾಚಾರ್ಯರು ಸದಿಚ್ಚೆಯಂತೆ ಏಪ್ರಿಲ್ ತಿಂಗಳು 8 ರಂದು ಸಂಜೆ 4 ಗಂಟೆಗೆ ತುಂಗಾತೀರದಲ್ಲಿ ಮೂರನೇ ವರ್ಷದ ತುಂಗಾರತಿ ಜ್ಯೋತಿ ಪೂಜಾ ಪ್ರಜ್ವಲ ಧಾರ್ಮಿಕ ಕಾರ್ಯಕ್ರಮವು ಜರುಗಲಿದೆ ಎಂದು ಪುಣ್ಯಕೋಟಿ ಮಠದ ಜಗದೀಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ. 

ಅವರು ಈ ಕುರಿತಂತೆ ಮಾಧ್ಯಮದೊಂದಿಗೆ ಮಾತನಾಡಿ, ಪುಣ್ಯಕೋಟಿ ಮಠದ ಭಕ್ತರ ಸದಿಚ್ಚೆಯಂತೆ ಈ ತುಂಗಾರತಿಯೂ ಮೂರನೇ ವರ್ಷದಲ್ಲಿ ಸಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ನಡೆಯುತ್ತಲಿದೆ. ದಕ್ಷಿಣ ಭಾರತದಲ್ಲಿ ಈ ಕಾರ್ಯಕ್ರಮವು ಪ್ರಥಮವಾಗಿ ನಡೆಯಲ್ಪಡುತ್ತದೆ. ತುಂಗಾರತಿ ಮಂಟಪದ ಶಾಶ್ವತ ನಿರ್ಮಾಣಕ್ಕಾಗಿಯೇ ಒಟ್ಟು 9 ಕೋಟಿ 93 ಲಕ್ಷ ರೂಗಳನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಇದರಲ್ಲಿ ತುಂಗಾರತಿ ಮಂಟಪ, ತಡೆಗೋಡೆ, ಆರತಿ ಮಂಟಪಗಳನ್ನು ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.  

ಪ್ರೇರಣೆ: ಅಂದು ದೊಡ್ಡೇರಿ ದತ್ತಾವದೂತ ಆಶ್ರಮದ ಶ್ರೀಸತ್ ಉಪಾಸಿ ಸದ್ಗುರುಗಳೊಂದಿಗೆ ತಾವು ಕೇದಾರನಾಥಯಾತ್ರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಋಷಿಕೇಶದ ಗಂಗಾನದಿ ತೀರದ ಆಶ್ರಮದಲ್ಲಿ ಎರಡು ದಿವಸಗಳ ಕಾಲ ವಾಸ್ತವ್ಯ ಮಾಡಿದ್ದೇವೆ. ತ್ರೀವೇಣಿ ಘಾಟ್‌ನಲ್ಲಿ ನಡೆಯುತ್ತಿರುವ  ಗಂಗಾರತಿಯನ್ನು ಕಂಡ ಸದ್ಗುರುಗಳು ತಮ್ಮತ್ತ ಕರೆದು ಈ ಪುಣ್ಯಮಯ ಕ್ಷೇತ್ರದಲ್ಲಿ ಹರಿಯುತ್ತಿರುವುದು ಗಂಗಾನದಿ, ಇಲ್ಲಿ ಗಂಗಾರತಿ ಮಾಡುತ್ತಾರೆ. ಹಾಗೆಯೇ ನಿಮ್ಮ ಪುಣ್ಯಕೋಟಿ ಮಠದ ಹತ್ತಿರ ಇರುವುದು ಸಹ ತುಂಗಭದ್ರಾ ನದಿ ಆದ್ದರಿಂದ ಪ್ರತಿವರ್ಷ ನೀವು ತುಂಗಾರತಿಯನ್ನು ಮಾಡಿ “ಗಂಗಾಸ್ನಾನಂ-ತುಂಗಾಪಾನಂ” ಎಂಬ ಐತಿಹಾಸಿಕವಾದ ಸಮಾರಂಭಕ್ಕೆ ಮುನ್ನುಡಿಯನ್ನು ಬರೆಯುವಂತಾಗಲಿ ಎಂದು ಅಭಯದ ಆಶೀರ್ವಾದ ಮಾಡಿದ್ದರ ಫಲವಾಗಿ ಈ ಪಾವನ ಕ್ಷೇತ್ರದಲ್ಲಿ ಮೂರು ವರ್ಷಗಳಿಂದ ತುಂಗಾರತಿ ಸಾಗುತ್ತಲಿದೆ ಎಂದರು.  

ಪ್ರತಿವರ್ಷವೂ ಸಮಾರಂಭವನ್ನು ನಾಭೂತು, ನಾ ಭವಿಷ್ಯತೋ ಎನ್ನುವಂತೆ ಭಕ್ತರ ಭಕ್ತಿಯ ತುಂಗಾರತಿಯನ್ನು ಸಾಂಗವಾಗಿ ನಡೆಸಿಕೊಂಡು ಬರಲಾಗುತ್ತದೆ ಎಂದ ಶ್ರೀಗಳು, ಈಗಾಗಲೇ ಪುಣ್ಯಕೋಟಿ ಶ್ರೀಮಠದ ಶ್ರೀಗಳ ಕನಸು ನನಸಾಗುತ್ತಲಿದೆ. 2020ರಲ್ಲಿ ಉಜ್ಜಯಿನಿ ಜಗದ್ಗುರುಗಳವರು ತುಂಗಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. 2021 ರಲ್ಲಿ ಶ್ರೀ ಶೈಲ ಜಗದ್ಗುರುಗಳ ಪಾವನ ಸಾನಿಧ್ಯದಲ್ಲಿ ನೂರಾರು ಮಠಾಧೀಶರ ದಿವ್ಯ ಸಮ್ಮುಖದಲ್ಲಿ ನಡೆದ ಅದ್ದೂರಿ ತುಂಗಾರತಿಯಲ್ಲಿ ಸಾವಿವಾರು ಭಕ್ತರು ಸಾಕ್ಷಿಯಾಗಿದ್ದರು ಎಂದರು.  

ರಂಭಾಪುರಿ ಜಗದ್ಗುರುಗಳ ಸದಿಚ್ಚೆಯಂತೆ ಈ ಬಾರಿ ಕಾರ್ಯಕ್ರಮ ನಡೆಸಲು ಸಿದ್ದತೆ ನಡೆದಿದ್ದು, ಏಪ್ರಿಲ್ 7, 2022 ರಂದು ಜರುಗಲಿದೆ. ಈಗಾಗಲೇ ಸಕಲ ಸಿದ್ಧತೆ ಭರದಿಂದ ಸಾಗಿದ್ದು, ಕಾರ್ಯಕ್ರಮ ವೇಳೆಗಾಗಲೇ ಇದೊಂದು ಈ ಕ್ಷೇತ್ರ ಸುಂದರ ಧಾರ್ಮಿಕ ತಾಣವಾಗಿ ಪ್ರಜ್ವಲಿಸಲಿದೆ ಎಂದು ತಮ್ಮ ಹರ್ಷವನ್ನು ಶ್ರೀಗಳು ವ್ಯಕ್ತಪಡಿಸಿದರು.  

ಅಂದು ಏಪ್ರಿಲ್ 7 ರಂದು ಹರಿಹರದ ಹರಿಹರೇಶ್ವರ ದೇವಸ್ಥಾನದಿಂದ ಕೋಡಿಯಾಲ ಹೊಸಪೇಟೆ ವರೆಗೂ ರಂಭಾಪುರಿ ಜಗದ್ಗುರುಗಳವರ ಸಾರೋಟೋತ್ಸವ, ಗೋಮಾತಾ ಸಂರಕ್ಷಣಾ, ವಿಜಯ ಸಂಕಲ್ಪ ಯಾತ್ರೆ, ಪರಂಪರೆ ಸಂರಕ್ಷಣೆ, ಇಳಕಲ್ ಸೀರೆಯನ್ನು ಧರಿಸುವ 1008 ಜನ ಮಾತೆಯರು ವಾಧ್ಯ ವೈಭವಗಳ ಧರ್ಮ ಸಂಗಮದಲ್ಲಿ ಭಾವೈಕ್ಯತೆಯೊಂದಿಗೆ ತುಂಗಾರತಿ ಧರ್ಮ ಜಾಗೃತಿ ಕಾರ್ಯಕ್ರಮವು ನರೆವೇರಲಿದ್ದು, ನಾಡು ಸೇರಿದಂತೆ ಇತರೆ ರಾಜ್ಯಗಳ ಹತ್ತಾರು ಸಾವಿರ ಭಕ್ತರು ಮತ್ತು ನೂರಾರು ಶ್ರೀಗಳು ಭಾಗವಹಿಸಲಿದ್ದಾರೆ ಎಂದು ಜಗದೀಶ್ವರ ಮಹಾಸ್ವಾಮಿಗಳು ಹೇಳಿದರು. 


ಸುದ್ದಿ ಓದಿ