ಭಾರತೀಯ ಸಂಸ್ಕೃತಿಯಲ್ಲಿ ರಂಗ ಭೂಮಿಗೆ ವಿಶೇಷ ಸ್ಥಾನ: ಸೌರವ ಚೋಪ್ರಾ
ಲೋಕದರ್ಶನ ವರದಿ
ಸವದತ್ತಿ 31: ಜೀವನದ ನೈಜ ಸ್ಥಿತಿಯನ್ನು ಬಿಂಬಿಸುವಲ್ಲಿ ರಂಗ ಭೂಮಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದ್ದು, ಅತ್ಯಂತ ಉತ್ಕೃಷ್ಟ ಸಂಸ್ಕೃತಿಯಾಗಿರುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರಂಗ ಭೂಮಿಗೆ ವಿಶೇಷ ಸ್ಥಾನವಿದೆ ಎಂದು ಕಾಂಗ್ರೆಸ್ ಮುಖಂಡ ಸೌರವ ಚೋಪ್ರಾ ಹೇಳಿದರು.
ಪಟ್ಟಣದ ದೇಸಾಯಿ ಕೋಟೆಯಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಆಶ್ರಯದಲ್ಲಿ ನಡೆಯುತ್ತಿರುವ ಪರಸಗಡ ನಾಟಕೋತ್ಸವ-2023ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೋಟೆಯ ಆವರಣದಲ್ಲಿ ಪ್ರಸಕ್ತ ಸಾಲಿನಲ್ಲಿ ನಡೆದ ನಾಟಕೋತ್ಸವದಲ್ಲಿ 9 ದಿನಗಳ ನಾಟಕಗಳು ಜನಮನ್ನಣೆ ಪಡೆದುಕೊಂಡಿದ್ದು, ಸಂಸ್ಕೃತಿ ಮತ್ತು ಸಂಪ್ರದಾಯದ ಉಳಿವಿನ ಜೊತೆಗೆ ಜಾತಿವಾದವನ್ನು ಹೋಗಲಾಡಿಸುವ ಕೆಲಸವನ್ನು ಮಾಡುವಲ್ಲಿ ರಂಗಭೂಮಿ ಕಲಾವಿದರು ಪ್ರಮುಖ ಪಾತ್ರವಹಿಸಿರುವುದು ಶ್ಲಾಘನೀಯ ಎಂದರು.
ಡಾ.ವೈ.ಎಮ್.ಯಾಕೊಳ್ಳಿ ಮಾತನಾಡಿ, ಮೂರಾ್ನಲ್ಕು ದಶಕಗಳ ಹಿಂದೆ ರಂಗಭೂಮಿ ಕಲಾವಿದರಿಗೆ ವಿಶೇಷವಾದಂತ ಗೌರವಗಳು ದೊರಕಿದ್ದು, ಆ ಗೌರವಕ್ಕೆ ನಮ್ಮ ದಿ.ಏಣಗಿ ಬಾಳಪ್ಪನವರು ಪ್ರಮುಖರಾಗಿದ್ದಾರೆ ಎಂದರು. ಅಂದು ಅವರು ಮಾಡುತಿದ್ದ ಬಸವಣ್ಣನವರ ಪಾತ್ರಕ್ಕೆ ಜನರು ಬಾಳಪ್ಪಜ್ಜನವರ ಕಾಲು ಮುಗಿದು ಗೌರವ ಸಲ್ಲಿಸುತ್ತಿದ್ದರು ಎಂದರು. ಬಾಳಪ್ಪಜ್ಜನವರು ರಂಗಭೂಮಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಸಮಯ ಪ್ರಜ್ಞೆಯನ್ನು ಇಂದು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಕಲಾವಿದರು ಪಾಲನೆ ಮಾಡಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ ಎಂದರು.
ಪ್ರತಿವರ್ಷ ಪರಸಗಡ ನಾಟಕೋತ್ಸವದಲ್ಲಿ ದಿ.ಚಂದ್ರಕಾಂತ ಸುಳ್ಳದವರ ಸ್ಮರಣಾರ್ಥ ನೀಡಲಾಗುವ ರಂಗ ಚಂದ್ರ ಪ್ರಶಸ್ತಿಯನ್ನು ಬೆಳಗಾವಿಯ ಹಿರಿಯ ಸಾಹಿತಿ ಡಾ.ರಾಮಕೃಷ್ಣ ಮಾರಾಠೆಯವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ರಾಮಕೃಷ್ಣ ಮರಾಠೆಯವರು ಕರ್ನಾಟಕದ ಇತಿಹಾಸದಲ್ಲಿ ತಾಲೂಕು ಕೇಂದ್ರದಲ್ಲಿ ನಾಟಕೋತ್ಸವದ ಅತ್ಯಂತ ಸಂಭ್ರಮದೊಂದಿಗೆ ರಂಜಿಸುತ್ತಿರುವುದು ಸವದತ್ತಿಯಲ್ಲಿ ಎಂಬುದನ್ನು ನಾವು ಹೆಮ್ಮೆಪಡಬೇಕಿದೆ ಎಂದರು.
ನಾಟಕೋತ್ಸವದ ಸಮಾರೋಪದ ಅಂಗವಾಗಿ ನಾಡೋಜ ನಾಟ್ಯಭೂಷಣ ಏಣಗಿ ಬಾಳಪ್ಪನವರ ಸ್ಮರಣಾರ್ಥ ರಂಗಾಯಣ ಕಲಬುರ್ಗಿ ಇವರಿಂದ ಸಿರಿಪುರಂದರ ನಾಟಕ ಪ್ರದರ್ಶನಗೊಂಡಿತು.
ಬಸವರಾಜ ಕಾರದಗಿ, ಮೋಹನ ಏಣಗಿ, ಶೀರೀಷ ಜೋಶಿ, ನಾಗೇಶ ನಾಯಕ, ಆನಂದ ಭೋವಿ, ಅಶೋಕ ಹಂಪಣ್ಣವರ, ಜಗದೀಶ ಹಂಪಣ್ಣವರ, ಅಮೃತ ಸುಳ್ಳದ ಉಪಸ್ಥಿತರಿದ್ದರು. ಝಕೀರ ನದಾಫ ಸ್ವಾಗತಿಸಿದರು. ಶಿವಾನಂದ ತಾರಿಹಾಳ ನಿರೂಪಿಸಿದರು. ಗೋಪಾಲ ಪಾಸಲಕರ ವಂದಿಸಿದರು.