ಶನೈಶ್ಚರ ಸ್ವಾಮಿಯ 9ನೇ ವಾರ್ಷಿಕೋತ್ಸವ: ವಿವಿಧ ಧಾರ್ಮಿಕ ಕಾರ್ಯಕ್ರಮ
ರಾಣಿಬೆನ್ನೂರ 20: ಇಲ್ಲಿನ ಹಿರೇಮಠದ ಶನೈಶ್ಚರ ಮಂದಿರದ ಆವರಣದಲ್ಲಿ ರಾಜ್ಯದ ಮೊದಲನೆಯದಾಗಿರುವ ಶನೈಶ್ಚರ ಸ್ವಾಮಿಯ 9ನೇ ವಾರ್ಷಿಕೋತ್ಸವ ಮತ್ತು ಲೋಕ ಕಲ್ಯಾಣಾರ್ಥವಾಗಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ತನ್ನಿಮಿತ್ತ ಸೋಮವಾರದಂದು ಶನೈಶ್ಚರ ಮಂದಿರದ ಶಿವಯೋಗಿ ಸ್ವಾಮಿಗಳು ತಾಲೂಕಿನ ಕುದರಿಹಾಳ ಬಳಿಯಿರುವ ತುಂಗಭದ್ರ ನದಿಯಿಂದ ಸುಮಾರು 14 ಕಿಮಿ ಪಾದಯಾತ್ರೆಯ ಮೂಲಕ ಕುಂಭದೊಂದಿಗೆ ನೀರು ತರುವ ಕಾರ್ಯಕ್ರಮ ನೆರವೇರಿತು.
ಹಿರೇಮಠ ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಅಂದು ಬೆಳಗಿನ ಜಾವ 6ಗಂಟೆಗೆ ತಾಲೂಕಿನ ತುಂಗಭದ್ರ ನದಿಯಿಂದ ಕುಂಭದಲ್ಲಿ ನೀರನ್ನು ತುಂಬಿಕೊಂಡು, ಮಹಿಳೆಯರ ಕುಂಭೋತ್ಸವ ಹಾಗೂ ಭಕ್ತರ ಸಮೂಹದ ಮೂಲಕ ಶ್ರೀಗಳೇ ಒದ್ದೆ ಬಟ್ಟೆಯೊಂದಿಗೆ ಪಾದಯಾತ್ರೆಯ ಮೂಲಕ ಮಂದಿರದವರೆಗೆ ಹೊತ್ತೊಯ್ದು ಆಗಮಿಸಿದರು.
ಸುಮಾರು 4 ಘಂಟೆಗಳ ಕಾಲ ಪಾದಯಾತ್ರೆಯಲ್ಲಿ ಆಗಮಿಸಿ ಶನೈಶ್ಚರ ಸ್ವಾಮಿಗೆ ರುದ್ರಾಭಿಷೇಕ ಮತ್ತಿತರ ಪೂಜೆಗಳನ್ನು ಶ್ರೀಗಳು ನೆರವೇರಿಸಿದರು. ಪಾದಯಾತ್ರೆಯಲ್ಲಿ ಸಿದ್ದಣ್ಣ ಚಿಕ್ಕಬಿದರಿ, ಶಿವಯೋಗಿ ರಾಮಾಳದ ಸೇರಿದಂತೆ ಭಕ್ತರು, ಶಾಸ್ತ್ರೀಗಳು, ವಟುಗಳು, ಮಹಿಳೆಯರು ಮತ್ತಿತರರು ಭಾಗವಹಿಸಿದ್ದರು. ಪಾದಯಾತ್ರೆಯಲ್ಲಿ ಆಗಮಿಸಿದ ಶ್ರೀಗಳಿಗೆ ಕುದರಿಹಾಳ, ಗಂಗಾಪುರ ಗ್ರಾಮಸ್ಥರು ಸ್ವಾಗತಿಸಿ ಬೀಳ್ಕೊಟ್ಟರು.
ಈ ವರ್ಷದ ವಿಶೇಷ ಈ ಕಾರ್ಯಕ್ರಮವು 384 ದಿನಗಳ ಕಾಲ ನಿರಂತರ ವೈವಿಧ್ಯಮಯ ಪೂಜಾ ಹಾಗೂ ಧರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಡಿ.4ರಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ: ವೀರಸೋಮೇಶ್ವರ ರಾಜದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮಂಗಲೋತ್ಸವ ಜರುಗಲಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಶ್ರೀಗಳು ವಿನಂತಿಸಿದರು.