ಬೈಲಹೊಂಗಲ

900 ಕೋಟಿ ರೂ. ರೆಲ್ವೆ ಅಭಿವೃದ್ಧಿಗೆ ಬಜೆಟ್‍ನಲ್ಲಿ ಅನುದಾನ ಮೀಸಲು: ಶೆಟ್ಟರ

900 ಕೋಟಿ ರೂ. ರೆಲ್ವೆ ಅಭಿವೃದ್ಧಿಗೆ ಬಜೆಟ್‍ನಲ್ಲಿ ಅನುದಾನ ಮೀಸಲು: ಶೆಟ್ಟರ

ಬೈಲಹೊಂಗಲ,2: ರಾಜ್ಯದಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಹಾಗೂ ನೂತನ ಯೋಜನೆಗಳಿಗೆ 57 ಸಾವಿರ ಕೋಟಿ ಅನುದಾನ ಬಿಡುಗಡೆಗೊಳಿಸಿ ಅವುಗಳನ್ನು ಅನುಷ್ಟಾನಗೊಳಿಸಲು ದಿ. ಸುರೇಶ ಅಂಗಡಿ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಶುಕ್ರವಾರ ಬೈಲಹೊಂಗಲದ ಮುರುಗೋಡ ರಸ್ತೆಯ ಪೃಥ್ವಿ ಗಾರ್ಡನ್ ದಲ್ಲಿ ನಡೆದ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಪರ ಸಭೆಯಲ್ಲಿ ಮಾತನಾಡಿ, 900 ಕೋಟಿ ರೂ. ವೆಚ್ಚದ ಬೆಳಗಾವಿ-ಧಾರವಾಡ ರೆಲ್ವೆ ಅಭಿವೃದ್ಧಿಗೆ ಬಜೆಟ್‍ನಲ್ಲಿ ಅನುದಾನ ಮೀಸಲಿಡಲಾಗಿದೆ. ರಾಜ್ಯ ಸರಕಾರ ಭೂಸ್ವಾಧಿನ ಪ್ರಕ್ರೀಯೆ ನಡೆಸಿದೆ. ಪ್ರಯಾಣಿಕರ ಬೇಡಿಕೆಯನುಗುಣವಾಗಿ ಬೆಳಗಾವಿ-ಬೆಂಗಳೂರು ನೇರ ರೆಲ್ವೆ ಕೊಡುಗೆ ಅಂಗಡಿ ಅವರದು. ಕರೊನಾ ಸಂಕಷ್ಟ ಸಮಯದಲ್ಲಿ ತಮ್ಮ ಆರೋಗ್ಯ ಲೆಕ್ಕಿಸದೆ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಅವರ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಉಪಚುನಾವಣೆ ಜರುಗಿದ್ದು, ಅವರ ಪತ್ನಿ ಮಂಗಲಾ ಅಂಗಡಿ ಸ್ಪರ್ಧಿಸಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಬಿಜೆಪಿ ಅಭ್ಯರ್ಥಿಯನ್ನು ಅತ್ಯಂತ ಬಹುಮತದಿಂದ ಆಯ್ಕೆ ಮಾಡಲು ಶ್ರಮಿಸಬೇಕೆಂದರು.

ಅಧೋಗತಿಗೆ ಹೋಗುತ್ತಿರುವ ಕಾಂಗ್ರೆಸ್ ಪಕ್ಷದಿಂದ ದೇಶದ ಬದಲಾವಣೆ ಕಾಣಲಾಗದು. ಪ್ರಬುದ್ಧತೆಯಿಲ್ಲದ ರಾಹುಲ್ ಗಾಂಧಿ ದಿನದ 24 ಗಂಟೆ ಜನಸೇವೆ ಮಾಡುತ್ತಿರುವ ಮೋದಿಜಿಯವರಿಗೆ ಎಲ್ಲಿಯ ಹೋಲಿಕೆ ಒಳ ಜಗಳದ ಕಾಂಗ್ರೆಸ್ಸಿಗರಿಗೆ ಟೀಕೆ ಬಿಟ್ಟು ಕೇಂದ್ರದ ಸಾಧನೆ ತಿಳಿದುಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, 60 ವರ್ಷ  ದೇಶವನ್ನಾಳಿದ ಕಾಂಗ್ರೆಸ್ ಭಾರತಕ್ಕೆ ಶಾಪವಾಗಿ ಪರಿಣಮಿಸಿದೆ. ಅವರ  ದುರಾಡಳಿತ ಸ್ವಾರ್ಥದಿಂದ ದೇಶ ಅಧೋಗತಿಗೆ ತಲುಪಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ ಬದಲಾವಣೆ ಮೂಲೆ-ಮೂಲೆಗಳಲ್ಲಿ ಕಾಣಸಿಗುತ್ತಿದೆ. ಕಾಂಗ್ರೆಸ್ ಕುಟುಂಬ ರಾಜಕಾರಣವನ್ನು ಮುಂದಿಟ್ಟುಕೊಂಡು ನೆಹರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪ್ರಧಾನಿಗಳಾಗಿ ಈಗ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಹೊರಟಿರುವ ಕಾಂಗ್ರೆಸ್ ನೀತಿ ದುರಾದೃಷ್ಟಕರ ಎಂದರು.

ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ್ ಮಾತನಾಡಿ, ದೇಶದ ಸಮಸ್ತ ಜನತೆಯ ನೂರಾರು ವರ್ಷದ ಕನಸು ರಾಮಮಂದಿರ ನಿರ್ಮಾಣ, ಜಮ್ಮು-ಕಾಶ್ಮೀರದಲ್ಲಿ 370 ನೇ ವಿಧಿ ರದ್ಧತಿ ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸಿದ ಮೋದಿಜಿ ಅವರನ್ನು ಮೆಚ್ಚಿ ಎಲ್ಲರೂ ಬಿಜೆಪಿಗೆ ಮತ ನೀಡಬೇಕು. ಸುರೇಶ್ ಅಂಗಡಿ ಅವರ ಅಭಿವೃದ್ಧಿಪರ ಕಾರ್ಯವನ್ನು ಮುಂದುವರಿಸಲು ಮಂಗಲ ಅಂಗಡಿ ಅವರ ಆಯ್ಕೆ ಮಾಡಲೇಬೇಕು ಎಂದರು.

ವಿಧಾನ ಸಭೆ ಉಪಸಭಾಪತಿ ಆನಂದ್ ಮಾಮನಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರನಾಯಕರು ಪಕ್ಷ ಪದಾಧಿಕಾರಿಗಳ ಒಗ್ಗಟ್ಟಿನಿಂದ ಬೆಳಗಾವಿ ಲೊಕಸಭೆಯ ಪ್ರಗತಿಗೆ ಕಾರಣಿಕರ್ತರಾದ ಸುರೇಶ್ ಅಂಗಡಿ ಅವರ ಋಣ ತೀರಿಸಲು ಮಂಗಲಾ ಅಂಗಡಿಯವರ ಗೆಲುವಿಗಾಗಿ ಜನರ ಸಹಕಾರ ಅವಶ್ಯವೆಂದರು.

ಕಾಡಾ ಅಧ್ಯಕ್ಷ ಡಾ.ವಿಶ್ವನಾಥ್ ಪಾಟೀಲ್ ಮಾತನಾಡಿ, ಕಾರ್ಯಕರ್ತರು ಪ್ರಾಮಾಣಿಕವಾಗಿ ಮನೆಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಾಗೂ ಸುರೇಶ್ ಅಂಗಡಿ ಅವರ ಅಭಿವೃದ್ಧಿ ಪರ ವಿಷಯವನ್ನು ತಿಳಿಸಿ ಬೈಲಹೊಂಗಲ ಮತಕ್ಷೇತ್ರದಿಂದ 50 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆಯಿಂದ ಸಾಧಿಸಲಿದೆ ಎಂದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಸುರೇಶ್ ಅಂಗಡಿ ಅವರ ನಿಧನದ ನಂತರ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ 30 ಅಭ್ಯರ್ಥಿಗಳು ಆಕಾಂಕ್ಷಿಗಳಿದ್ದರೂ ಅವರೆಲ್ಲರ ಅಭಿಪ್ರಾಯ ಮಂಗಲಾ ಸುರೇಶ್ ಅಂಗಡಿಯವರಿಗೆ ಟಿಕೆಟ್ ನೀಡಿದರೆ ನಾವೆಲ್ಲರೂ ದುಡಿಯುವ ಭರವಸೆ ನೀಡಿದ್ದರು. ಅದರಂತೆ ಮಂಗಲಾ ಅವರಿಗೆ ಟೀಕೆಟ್ ನೀಡಲಾಗಿದೆ ಎಂದರು.

ಶಾಸಕ ಅಭಯ್ ಪಾಟೀಲ್ ಮಾತನಾಡಿ, ಕರೋನಾ ಸಮಯದಲ್ಲಿ ಮನೆಯಲ್ಲಿ ಕುಳಿತಿದ್ದರೆ ಸುರೇಶ್ ಅಂಗಡಿ ಅವರು ನಿಧನರಾಗುತ್ತಿರಲಿಲ್ಲ. ಕರೋನಾ ಸಂಕಷ್ಟ  ಸಮಯದಲ್ಲಿ ಕ್ಷೇತ್ರದ ಜನತೆಯ ಸೇವೆಗಾಗಿ ಸುತ್ತಿದ ಸಂದರ್ಭದಲ್ಲಿ ಅಸುನೀಗಿದ್ದಾರೆ. ಇವರ ಋಣ ತೀರಿಸಲು ಇದೊಂದು ನಮಗೆ ಬಂದಿರುವ ಅವಕಾಶವನ್ನು ಬಿಜೆಪಿ ಪರ ಪ್ರಚಾರ ಕೈಗೊಂಡು ಲಕ್ಷಾಂತರ ಮತಗಳನ್ನು ಅಭ್ಯರ್ಥಿ ಪರ ಹಾಕಿಸೊಣ ಎಂದರು.

ಸಚಿವರಾದ ಉಮೇಶ್ ಕತ್ತಿ, ರಾಮದುರ್ಗ ಶಾಸಕ ಮಾದೇವಪ್ಪ ಯಾದವಾಡ , ಲೋಕಸಭಾ ಅಭ್ಯರ್ಥಿ ಮಂಗಲ ಸುರೇಶ್ ಅಂಗಡಿ ಮಾತನಾಡಿದರು.

ಸಂಸದರಾದ  ಈರಣ್ಣ ಕಡಾಡಿ,  ಅಣ್ಣಾ ಸಾಹೇಬ್ ಜೊಲ್ಲೆ, ಶಾಸಕರಾದ  ಮಹಾಂತೇಶ ದೊಡ್ಡಗೌಡರ್, ವಿಧಾನಪರಿಷತ್ ಸದಸ್ಯರಾದ ಮಹಾಂತೇಶ್ ಕವಟಗಿಮಠ, ಮಾಜಿ ಸಚಿವ ಶಶಿಕಾಂತ್ ನಾಯಕ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ರಾಜ್ಯ ವಕ್ತಾರ ಎಂ.ಬಿ. ಜಿರಲಿ, ಮುಕ್ತಾರ ಪಠಾಣ, ಮಲ್ಲಿಕಾರ್ಜುನ ತುಬಾಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಭಾμï ಪಾಟೀಲ್, ಸಂದೀಪ್ ದೇಶಪಾಂಡೆ, ಗೂಳಪ್ಪ ಹೊಸಮನಿ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ್ ಮಾಧಮ್ಮನವರ ಜಿಲ್ಲಾ ಮಧ್ಯಮ ಸಂಚಾಲಕ  ಎಫ್.ಎಸ್.ಸಿದ್ದನಗೌಡರ, ಗುರುಪಾದ ಕಳ್ಳಿ, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ನಿತಿನ್ ಚೌಗುಲೆ, ಗುರು ಮೆಟಗುಡ್, ರತ್ನಾ ಗೋಧಿ,  ರುದ್ರಣ್ಣ ಚಂದರಗಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ್ ನೇಸರಗಿ, ಮಲ್ಲಿಕಾರ್ಜುನ ದೇಸಾಯಿ, ಲಕ್ಕಪ್ಪ ಕಾರಗಿ, ಇನ್ನಿತರರು  ಇದ್ದರು. ಬೈಲಹೊಂಗಲ ಮಂಡಲ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ ಸ್ವಾಗತಿಸಿದರು.  ಮಲ್ಲಿಕಾರ್ಜುನ ಗೌಡತಿ ನಿರೂಪಿಸಿದರು. ವೀರೇಶ್ ಹಲಕ್ಕಿ ವಂದಿಸಿದರು.

ಸುದ್ದಿ ಓದಿ