ರಾಷ್ಟ್ರೀಯ

ಪ್ರವಾಹ ಪರಿಹಾರ, ಕೇಂದ್ರದಿಂದ ಕರ್ನಾಟಕಕ್ಕೆ 577.84 ಕೋಟಿ ಬಿಡುಗಡೆ

ಪ್ರವಾಹ ಪರಿಹಾರ,  ಕೇಂದ್ರದಿಂದ ಕರ್ನಾಟಕಕ್ಕೆ 577.84 ಕೋಟಿ ಬಿಡುಗಡೆ

ನವದೆಹಲಿ, ನವೆಂಬರ್ 13: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ  ಉನ್ನತ ಮಟ್ಟದ ಸಮಿತಿ   ನೈಸರ್ಗಿಕ  ವಿಕೋಪಗಳಿಗೆ  ತುತ್ತಾಗಿರುವ   ಆರು ರಾಜ್ಯಗಳಿಗೆ ಹೆಚ್ಚುವರಿ ವಿಪತ್ತು ಪರಿಹಾರವಾಗಿ  4,381.88 ಕೋಟಿ ರೂ. ಬಿಡುಗಡೆ ಮಾಡಿದೆ. 

ಉಂಪನ್ ಚಂಡಮಾರುತದಿಂದ  ತೀವ್ರ ಸಂಕಷ್ಟಕ್ಕೊಳಗಾಗಿದ್ದ  ಪಶ್ಚಿಮ ಬಂಗಾಳ  ರಾಜ್ಯಕ್ಕೆ  ಅತ್ಯಧಿಕ ರೂ. 2,707.77 ಕೋಟಿ ರೂ., ಅಸ್ಸಾಂಗೆ 128.23 ಕೋಟಿ ರೂ  ಮಂಜೂರು ಮಾಡಿದೆ.  ಜೂನ್ ನಲ್ಲಿ   ನಿಸರ್ಗ ಚಂಡಮಾರುತಕ್ಕೆ ಒಳಗಾಗಿದ್ದ  ಮಹಾರಾಷ್ಟ್ರಕ್ಕೆ ., 268.59 ಕೋಟಿ ರೂ.,  ಪ್ರವಾಹದಿಂದ ತೀವ್ರ  ಹಾನಿ ಅನುಭವಿಸಿರುವ  ಕರ್ನಾಟಕಕ್ಕೆ 577.84 ಕೋಟಿ ರೂ., ಮಧ್ಯಪ್ರದೇಶಕ್ಕೆ 611.61 ಕೋಟಿ ರೂ.  ಹಾಗೂ  ಸಿಕ್ಕಿಂಗೆ 87.84 ಕೋಟಿ ರೂ  ಪರಿಹಾರ ಪ್ರಕಟಿಸಿದೆ. 

ಈ ಎಲ್ಲ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮೂಲಕ  ರಾಜ್ಯಗಳಿಗೆ  ಬಿಡುಗಡೆಮಾಡಲಾಗುವುದು ಎಂದು  ಅವರು ತಿಳಿಸಿದ್ದಾರೆ. 

ಈ ವರ್ಷ ಉಂಪನ್,  ನಿಸರ್ಗ ಚಂಡಮಾರುತ,  ಪ್ರವಾಹ,  ಭೂ ಕುಸಿತ   ಮತ್ತಿತರ  ನೈಸರ್ಗಿಕ  ವಿಕೋಪಗಳಿಗೆ ಹಲವು  ರಾಜ್ಯಗಳು  ತುತ್ತಾಗಿದ್ದವು  ಈ ಪೈಕಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಮೇ ತಿಂಗಳಲ್ಲಿ ಸಂಭವಿಸಿದ ಉಂಪನ್ ಚಂಡಮಾರುತದಲ್ಲಿ 100 ಮಂದಿ ಸಾವನ್ನಪ್ಪಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ  6 ​​ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು.  ಮೇ 20 ರಂದು ಪೂರ್ವ ಕರಾವಳಿಯ ಸುಂದರಬನ   ಅರಣ್ಯ  ಪ್ರದೇಶದ 20 ಕಿ.ಮೀ  ಪ್ರದೇಶ ಮುಳುಗಡೆಗೊಂಡಿತ್ತು.  185 ಕಿ.ಮೀ ವೇಗದಲ್ಲಿ  ಬೀಸಿದ ಗಾಳಿಯಿಂದ ದೂರಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ಹಾನಿಗೊಳಗಾಯಿತು. ಕೆಲವು ಸ್ಥಳಗಳಲ್ಲಿ ರಸ್ತೆಗಳು ನಾಶಗೊಂಡಿದ್ದವು. ಚಂಡಮಾರುತದ ಮರು ದಿನ, ಪ್ರಧಾನಿ ಪರಿಸ್ಥಿತಿಯನ್ನು   ವೈಮಾನಿಕ ಪರಾಮರ್ಶೆ ನಡೆಸಿ   ಪಶ್ಚಿಮ ಬಂಗಾಳಕ್ಕೆ  1000 ಕೋಟಿ, ಒಡಿಶಾಗೆ  500 ಕೋಟಿ  ನೆರವು ಘೋಷಿಸಿದ್ದರು.  ಚಂಡಮಾರುತದಿಂದ  ಮೃತಪಟ್ಟ ಕುಟುಂಬಗಳಿಗೆ  2ಲಕ್ಷ, ಗಾಯಗೊಂಡವರಿಗೆ  50 ಸಾವಿರ  ಪರಿಹಾರ  ಪ್ರಕಟಿಸಿದ್ದರು. 

ಸುದ್ದಿ ಓದಿ