ರಾಷ್ಟ್ರೀಯ

ಈದ್ಗಾದಲ್ಲಿ ಹನುಮಾನ್ ಚಾಲೀಸ ಪಠಣ: ನಾಲ್ವರ ಬಂಧನ

ಈದ್ಗಾದಲ್ಲಿ ಹನುಮಾನ್ ಚಾಲೀಸ ಪಠಣ: ನಾಲ್ವರ ಬಂಧನ

ಲಕ್ನೋ, ನವೆಂಬರ್.4: ಮಥುರಾ ಈದ್ಗಾದಲ್ಲಿ ಹನುಮಾನ್ ಚಾಲೀಸ್ ಪಠಿಸಿದ ಆರೋಪದಲ್ಲಿ ಮಂಗಳವಾರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ವಾರ ಇಬ್ಬರು ಮುಸ್ಲಿಂ ವ್ಯಕ್ತಿಗಳು ಸ್ಥಳೀಯ ದೇವಾಲಯದಲ್ಲಿ ನಮಾಜ್ ನಿರ್ವಹಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಸೌರಭ್ ಲಂಬಾರ್ದರ್, ಕನ್ಹಾ, ರಾಘವ್ ಮತ್ತು ಕೃಷ್ಣ ಠಾಕೂರ್ ಎಂಬವರು ಈ ಕೆಲಸ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಇಲ್ಲಿನ ಗೋವರ್ದನ್ ಪ್ರದೇಶದ ಈದ್ಗಾದಲ್ಲಿ ಹನುಮಾನ್ ಚಾಲೀಸ್ ಪಠಿಸುತ್ತಿರುವ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದುದನ್ನು ಗಮನಿಸಿದೆವು, ಈ ಕೆಲಸ ಶಾಂತಿಯನ್ನು ಪ್ರೇರಿಸುವ ಕೆಲಸ ಎಂದು ಹೇಳಲಾದರೂ ಇದನ್ನು ತಪ್ಪಾದ ರೀತಿಯಲ್ಲಿ ಮಾಡಲಾಗಿದೆ. ನಾಲ್ವರ ವಿರುದ್ಧ ಸಿಆರ್ ಪಿಸಿ ಸೆಕ್ಷನ್ 151ರಡಿ ಪ್ರಕರಣ ದಾಖಲಿಸಲಾಗಿದೆ. ಆದಾಗ್ಯೂ ಅವರ ವಿರುದ್ಧ ಯಾರೂ ದೂರು ನೀಡಿಲ್ಲ ಎಂದು ಮಥುರಾ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಶಿರಿಷ್ ಚಂದ್ರ ತಿಳಿಸಿದ್ದಾರೆ.

ಈ ನಾಲ್ವರು ಗೋವರ್ಧನ್ ಪ್ರದೇಶದಿಂದ ಬಂದಿದ್ದು, ಯಾವುದೇ ಧಾರ್ಮಿಕ ಸಂಘಟನೆಯೊಂದಿಗೆ ಸಂಬಂಧ ಹೊಂದಿಲ್ಲ. ಅವರು ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈದ್ಗಾಕ್ಕೆ ಪ್ರವೇಶಿಸಿ ಇತರ ಸ್ತೋತ್ರಗಳೊಂದಿಗೆ ಹನುಮಾನ್ ಚಾಲಿಸಾವನ್ನು ಪಠಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದರ ವಿಡಿಯೋವನ್ನು ನಂತರ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅದು ವೈರಲ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಅಕ್ಟೋಬರ್ 29 ರಂದು ಮಥುರಾದ ನಂದ ಬಾಬಾ ದೇವಸ್ಥಾನದಲ್ಲಿ ನಮಾಜ್ ಮಾಡಿದ ಘಟನೆಗೆ ನಾಲ್ವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಮಾಜ್ ಮಾಡಿದ ಪ್ರಕರಣದಲ್ಲಿ ಖುದಾಯಿ ಕಿದ್ಮತ್ ಗಾರ್ ಎಂಬ ಎನ್ ಜಿಒನ ಸದಸ್ಯ ಫೈಸಲ್ ಖಾನ್ ಸೇರಿದಂತೆ ಮೂವರ ವಿರುದ್ಧ ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಸುದ್ದಿ ಓದಿ