ಬೆಳಗಾವಿ

ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 327 ಪ್ರಕರಣಗಳ ಇತ್ಯರ್ಥ ಎರಡು ಜೋಡಿ ದಂಪತಿಗಳ ಪುನರ್ಮಿಲನ

ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 327 ಪ್ರಕರಣಗಳ ಇತ್ಯರ್ಥ ಎರಡು ಜೋಡಿ ದಂಪತಿಗಳ ಪುನರ್ಮಿಲನ

ಸವದತ್ತಿ 11 : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ತಾಲೂಕಾ ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಸ್ಥಳೀಯ ನ್ಯಾಯಾಲಯಗಳಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಯಶಸ್ವಿಯಾಗಿ ಜರುಗಿತು. ಸವದತ್ತಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಒಟ್ಟು 7,263 ಪ್ರಕರಣಗಳ ಪೈಕಿ, 1,437 ಪ್ರಕರಣಗಳನ್ನು ವಿಚಾರಣೆಗೆ ಪರಿಗಣಿಸಲಾಗಿತ್ತು. ಈ ಪೈಕಿ ರಾಜಿ-ಸಂಧಾನದ ಮೂಲಕ 327 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಯಿತು. ಲೋಕ್ ಅದಾಲತ್ ವಿಶೇಷ ಆಕರ್ಷಣೆಯಾಗಿ, ವೈವಾಹಿಕ ಮನಸ್ತಾಪದಿಂದಾಗಿ ಬೇರ​‍್ಪಟಟಿದ್ದ ಎರಡು ಜೋಡಿ ದಂಪತಿಗಳನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಸಂಧಾನದ ಮೂಲಕ ಮತ್ತೆ ಒಂದಾಗಿಸಲಾಯಿತು.

ಇದು ಕಾರ್ಯಕ್ರಮದ ಪ್ರಮುಖ ಸಾಧನೆಯಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಸಿದ್ದರಾಮ ಅವರು ಮಾತನಾಡಿ, ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ ಪಕ್ಷಗಾರರ ಸಮಯ ಮತ್ತು ಹಣ ಉಳಿಯುತ್ತದೆ. ಇದು ನ್ಯಾಯಾಲಯದ ಮೇಲಿನ ಹೊರೆಯನ್ನು ಕಡಿಮೆ ಮಾಡುವುದಲ್ಲದೆ, ದಾವೆದಾರರಿಗೆ ತ್ವರಿತ ಹಾಗೂ ಸುಲಭ ನ್ಯಾಯ ಒದಗಿಸುತ್ತದೆ ಎಂದು ಹೇಳಿದರು. ಅಪರ ಸಿವಿಲ್ ನ್ಯಾಯಾಧೀಶರಾದ ಅರ​‍್ಿತಾ ಬೆಲ್ಲದ ಅವರು ಮಾತನಾಡಿ, ಲೋಕ್ ಅದಾಲತ್‌ನಲ್ಲಿ ಉಭಯ ಪಕ್ಷಗಾರರ ಒಪ್ಪಿಗೆಯಿಂದ ರಾಜಿ ಮಾಡಿಕೊಳ್ಳುವುದರಿಂದ ಪರಸ್ಪರ ಬಾಂಧವ್ಯ ಉಳಿಯುತ್ತದೆ.

ಕಡಿಮೆ ಖರ್ಚಿನಲ್ಲಿ ಶೀಘ್ರ ನ್ಯಾಯ ಪಡೆಯಲು ಇದು ಉತ್ತಮ ಅವಕಾಶ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ  ಮಂಜುನಾಥ ನಾಯಕ, ವಕೀಲರ ಸಂಘದ ಅಧ್ಯಕ್ಷ ಜಗದೀಶ ಮುನವಳ್ಳಿ, ಉಪಾಧ್ಯಕ್ಷ ಎಮ್‌.ಎಸ್‌. ಹುಬ್ಬಳ್ಳಿ, ಕಾರ್ಯದರ್ಶಿ ಎಸ್‌.ಎಸ್‌. ಕಾಳಪ್ಪನವರ, ಆರಿ​‍್ವ. ಹುಂಬಿ, ಮಹಿಳಾ ಪ್ರತಿನಿಧಿ ಎಸ್‌.ವಾಯ್‌. ಶಿಬಾರಗಟ್ಟಿ ಸೇರಿದಂತೆ ಹಲವು ವಕೀಲರು, ಸಂಧಾನಕಾರರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ