ಕ್ಯಾಂಪುಗಳಲ್ಲಿನ ಕನ್ನಡ : ಸಮಾಜೋ-ಭಾಷಿಕ ಅಧ್ಯಯನದ ಪ್ರಶ್ನಾವಳಿ ಕುರಿತು ಚರ್ಚೆ
ಹಂಪಿ 19: ‘ಪ್ರತಿಯೊಂದು ಭಾಷಿಕ ನೆಲೆಯಲ್ಲಿ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ ಅಂಶಗಳನ್ನು ಅಧ್ಯಯನ ಮಾಡುವಲ್ಲಿ ಪ್ರಶ್ನಾವಳಿಯ ಪಾತ್ರ ಬಹುಮುಖ್ಯ’ ಎಂದು ಸಂಶೋಧಕರಾದ ಪಂಪಾಪತಿ ಅವರು ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಜುಲೈ 18 ಗುರುವಾರದಂದು ಹಮ್ಮಿಕೊಂಡಿದ್ದ 259ನೇ ಆನ್ಲೈನ್ ವಾರದ ಮಾತು ಕಾರ್ಯಕ್ರಮದಲ್ಲಿ “ಕ್ಯಾಂಪುಗಳಲ್ಲಿನ ಕನ್ನಡ : ಸಮಾಜೋ - ಭಾಷಿಕ ಅಧ್ಯಯನದ ಪ್ರಶ್ನಾವಳಿ ಕುರಿತು ಚರ್ಚೆ” ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು. ಏಕಭಾಷಿಕ, ದ್ವಿಭಾಷಿಕ, ಭಾಷಾಪ್ರಭೇದ, ಭಾಷಾ ಮಿಶ್ರಣ ಮುಂತಾದ ಭಾಷಿಕಾಂಶಗಳನ್ನು ಭಾಷಾಧ್ಯಯನದ ನೆಲೆಯಲ್ಲಿ ಅಧ್ಯಯನ ಮಾಡುವವರಿಗೆ ಕ್ಷೇತ್ರಕಾರ್ಯ ಮತ್ತು ಪ್ರಶ್ನಾವಳಿ ಮಾಹಿತಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂದರು. ರಾಯಚೂರು ಪರಿಸರದ ಕ್ಯಾಂಪುಗಳಲ್ಲಿ ತಮಿಳು, ತೆಲುಗು, ಬೆಂಗಾಲಿ ಭಾಷಿಕರು ವಾಸವಾಗಿರುವುದರಿಂದ ಅವರ ಸಾಮಾಜಿಕ, ಸಾಂಸ್ಕೃತಿಕ ಆಚರಣೆಗಳ ಪದಕೋಶವು ಕನ್ನಡ ಭಾಷಿಕ ಸಮುದಾಯದ ಮೇಲೆ ಬೀರಿದ ಪ್ರಭಾವವನ್ನು ಭಾಷಿಕ ನೆಲೆಯಲ್ಲಿ ಸೂಕ್ಷ್ಮವಾಗಿ ಗಮನಿಸಲು ಪ್ರಶ್ನಾವಳಿಯ ಮಹತ್ವವಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಭಾಷಾಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ. ಪಿ. ಮಹಾದೇವಯ್ಯ ಅವರು, ವಿಭಾಗದ ಪ್ರಾಧ್ಯಾಪಕರಾದ ಡಾ.ಅಶೋಕಕುಮಾರ ರಂಜೇರೆ ಅವರು, ಸಂಶೋಧನಾರ್ಥಿಗಳಾದ ಬಸಪ್ಪ, ವಿಶ್ವನಾಥ ಟಿ. ಅವರು ಪ್ರತಿಕ್ರಿಯೆ ನೀಡಿದರು. ಕಾರ್ಯಕ್ರಮದ ಸಂಚಾಲಕರಾದ ಚೌಡಪ್ಪ ಪಿ ಉಪಸ್ಥಿತರಿದ್ದರು. ವಿಭಾಗದ ಆಂತರಿಕ ಮತ್ತು ಬಾಹ್ಯ ಸಂಶೋಧನಾ ವಿದ್ಯಾರ್ಥಿಗಳು ಅಂತರ್ಜಾಲ ವೇದಿಕೆಯಲ್ಲಿ ಭಾಗವಹಿಸಿದ್ದರು.