24*7 ಕುಡಿಯುವ ನೀರಿನ ಯೋಜನೆ; ಹಗ್ಗ - ಜಗ್ಗಾಟ ನಡೆಸಿದ ಸದಸ್ಯರುಗಳು
ರಾಣೇಬೆನ್ನೂರು.ಜು.26: ಸ್ಥಳೀಯ ಬಸಪ್ಪ ಗುಡ್ಡದ ಸ್ಮಾರಕ ಭವನದಲ್ಲಿ ಇಂದು ಬೆಳಗ್ಗೆ 11.30ಕ್ಕೆ ನಗರಸಭಾ ಸದಸ್ಯರುಗಳ ವಿಶೇಷ ಸಾಮಾನ್ಯ ಸಭೆಯು ಶ್ರೀಮತಿ ರೂಪಾ ಆರ್. ಚಿನ್ನಿಕಟ್ಟಿ ಅಧ್ಯಕ್ಷರು, ನಗರಸಭೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಭೆಯಲ್ಲಿ 18 ವಿಷಯಗಳು ಮಂಡನೆಗೊಂಡು ಒಂದು ವಿಷಯ ಮುಂದಕ್ಕೆ ಹೋಗಿ ಉಳಿದ 17 ವಿಷಯಗಳಿಗೆ ಸಭೆಯು ಒಪ್ಪಿಗೆ ನೀಡಿತು. ನಗರಸಭೆಯ ಅನುದಾನದಲ್ಲಿ 24/7 ಕುಡಿಯುವ ನೀರು ಯೋಜನೆಯ ಶುದ್ಧೀಕರಣಕ್ಕಾಗಿ 49.90 ಲಕ್ಷ ರೂ. ವೆಚ್ಚದಲ್ಲಿ ಓಷಧ ಖರೀದಿಸಲು ಅಂದಾಜು ಪತ್ರಿಕೆಗೆ ಆಡಳಿತಾತ್ಮಕ ಮಂಜೂರಿ ನೀಡುವ ವಿಷಯ ಪ್ರಸ್ತಾಪಗೊಂಡಾಗ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರುಗಳು ಹಗ್ಗ ಹಿ ಜಗ್ಗಾಟ ನಡೆಸಿ ಯಾವುದೇ ಕಾರಣಕ್ಕೂ ಮಂಜೂರಿ ನೀಡುವುದು ಬೇಡ. 24/7 ಯೋಜನೆಯು ಪೂರ್ಣಗೊಂಡಿಲ್ಲ. ಹಾಗೂ ಅನೇಕ ವಾರ್ಡಗಳಲ್ಲಿ ಕಾಮಗಾರಿಯು ಕಳಪೆಯಿಂದ ಕೂಡಿದೆ. ನಗರಸಭೆಯ ಕಬ್ಜಾಕ್ಕೆ ನೀಡದೆ ಇರುವುದರಿಂದ ಈ ಎಲ್ಲ ಲೋಪದೋಷ ಸರಿಪಡಿಸುವವರೆಗೆ ಅನುದಾನ ನೀಡಬಾರದೆಂದು ಹಿರಿಯ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಬಲವಾಗಿ ಒತ್ತಾಯಿಸಿದಾಗ ಶೇಖಪ್ಪ ಹೊಸಗೌಡ್ರ, ಶಶಿಧರ ಬಸೇನಾಯ್ಕರ್, ಪ್ರಕಾಶ್ ಬುರಡಿಕಟ್ಟಿ, ಮಲ್ಲಣ್ಣ ಅಂಗಡಿ, ನಾಗರಾಜ ಪವಾರ ಅವರುಗಳು ಬೆಂಬಲ ವ್ಯಕ್ತಪಡಿಸಿ ಕಾಮಗಾರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನಗರಸಭೆ ಕಬ್ಜಾಕ್ಕೆ ಕೊಡುವವರೆಗೆ ಅವರೇ ಓಷಧಿ ಖರೀದಿಸಬೇಕೆಂದು ಒತ್ತಾಯಿಸಿದರು.
ಸದಸ್ಯರುಗಳ ನಡುವೆ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದಾಗ ನಗರಸಭಾ ಅಧ್ಯಕ್ಷರು ಮಧ್ಯ ಪ್ರವೇಶಿಸಿ ಆಡಳಿತಾತ್ಮಕ ಮಂಜೂರಿ ನೀಡಬೇಕಾಗುತ್ತದೆ. ಹಾಗೆ ತಡೆಹಿಡಿಯಲು ಬರುವುದಿಲ್ಲ. ಸದಸ್ಯರುಗಳ ವಾದ ಒಪ್ಪುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಬೇಕೆಂದು ಸೂಚಿಸಿದಾಗ, ಅಭಿಯಂತರ ಹಾದಿಮನಿ ಉತ್ತರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕಳಪೆಯಾಆಗಿರುವುದನ್ನು ಸರಿಪಡಿಸುತ್ತೇವೆ. ಓಷಧ ಖರೀದಿ ಅವಶ್ಯವಿದ್ದು, ಮಂಜೂರಾತಿ ನೀಡಬೇಕೆಂದು ವಿನಂತಿಸಿದಾಗ ಸದಸ್ಯರುಗಳು ಆಕ್ಷೇಪ ವ್ಯಕ್ತಪಡಿಸಿ ಮಂಜೂರಾತಿಗೆ ವಿರೋಧಿಸಿದಾಗ ಮಧ್ಯ ಪ್ರವೇಶಿಸಿದ ನೂತನ ಪೌರಾಯುಕ್ತ ಉದುಕುಮಾರ ಅವರು, ಈ ಬಗ್ಗೆ ಸದಸ್ಯರ ಕಾಳಜಿಯನ್ನು ಪ್ರಶಂಸಿಸಿ ನಿಮ್ಮ ಕಾಳಜಿಗೆ ಸ್ಪಂದನೆಯನ್ನು 24/7 ಯೋಜನೆಯ ಏಜೆನ್ಸಿಯವರು ಮಾಡಬೇಕು. ಕಾಮಗಾರಿಯನ್ನು ಪೂರ್ಣಗೊಳಿಸಿ ಕಳಪೆಯನ್ನು ಸರಿಪಡಿಸಿ ಶೀಘ್ರವಾಗಿ ನಗರಸಭೆಯ ತಾಬಾಕ್ಕೆ ಕೊಡಬೇಕು ಎಂದರು.ಇದನ್ನು ಅಭಿಯಂತರರು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಹಾಗೆಯೇ ಓಷಧಿ ಖರೀದಿಗಾಗಿ ಆಡಳಿತಾತ್ಮಕ ಮಂಜೂರಾತಿ ನೀಡಬೇಕಾದ್ದು ನಗರಸಭೆಯ ಕರ್ತವ್ಯವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಶುದ್ಧವಾದ ನೀರು ಪೂರೈಸಬೇಕಾಗಿದೆ. ಓಷಧಿ ಖರೀದಿಸದೆ ಹೋದಲ್ಲಿ ಮಳೆಯಾಗಿರುವುದರಿಂದ ಕಲುಷಿತ ನೀರು ಪೂರೈಕೆಯಾಗಬಹುದು. ಇದರಿಂದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಆಡಳಿತಾತ್ಮಕ ಮಂಜೂರಿ ನೀಡಬೇಕೆಂದಾಗ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.ಬೀದಿ ದೀಪದ ನಿರ್ವಹಣೆಯ ವಿಷಯ ಪ್ರಸ್ತಾಪಗೊಂಡಾಗ ಆಡಳಿತ ಪಕ್ಷದ ಸದಸ್ಯರೇ ತಕರಾರು ಎತ್ತಿ ಬೀದಿ ದೀಪದ ನಿರ್ವಹಣೆ ಸಮರ್ಪಕವಾಗಿಲ್ಲ. ಎಲ್ಇಡಿ ಬಲ್ಬ ಹಾಳಾಗದಂತೆ ನೋಡಿಕೊಳ್ಳಲು ಹೆಸ್ಕಾಂಗೆ 4.50 ಲಕ್ಷ ರೂ. ಆಮಾ ಮಾಡಲಾಗಿತ್ತು. ಅದರ ವ್ಯವಸ್ಥೆಯನ್ನು ಹೆಸ್ಕಾಂನವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿ ಹಣಾ ಜಮಾವಣೆ ಮಾಡಿದ್ದರೂ ಸಹ, ಯಾವುದೇ ಕ್ರಮ ಕೈಗೊಳ್ಳದ್ದರಿಂದ ಎಲ್ಇಡಿ ಬಲ್ಬ್ಗಳು ಹಾಳಾಗುತ್ತಿವೆ. ಇದರಿಂದ ನಗರಸಭೇಗೆ ನಷ್ಟ ಸಂಭವಿಸುತ್ತಿದೆ. ಈ ಬಗ್ಗೆ ಅಧ್ಯಕ್ಷರು, ಪೌರಾಯುಕ್ತರು ಕ್ರಮ ಕೈಗೊಳ್ಳಬೇಕೆಂದು ಮಲ್ಲಿಕಾರ್ಜುನ ಅಂಗಡಿ ಒತ್ತಾಯಿಸಿದಾಗ ವಿರೋಧ ಪಕ್ಷದ ಸದಸ್ಯರೂ ಸಹ ದ್ವನಿಗೂಡಿಸಿ ಬೆಂಬಲಿಸಿದರು.ಬಸಪ್ಪ ತೋಟಪ್ಪನವರ ವಸತಿ ವಿನ್ಯಾಸದ ಸಿವಿಲ್ ಅಭಿವೃದ್ಧಿ ಕಾಮಗಾರಿ ವಿಷಯ ಪ್ರಸ್ತಾಪಗೊಂಡಾಗ ಕಾಮಗಾರಿಯು ಪೂರ್ಣಗೊಂಡಿಲ್ಲ. ಅಲ್ಲಿ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲವೆಂದು ಸದಸ್ಯ ನಿಂಗರಾಜ ಕೋಡಿಹಳ್ಳಿ ತಕರಾರು ಮಾಡಿದಾಗ, ಈ ವಿಷಯವನ್ನು ಮುಂದಕ್ಕೆ ಹಾಕಲಾಗಿದೆ ಎಂದು ಅಧ್ಯಕ್ಷರು ಹೇಳಿದರು. ಈ ಸಭೆಯಲ್ಲಿ ಒಟ್ಟು 6 ಕೋಟಿ 27 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಪ್ಪಿಗೆ ಸೂಚಿಸಲಾಯಿತು.ವೇದಿಕೆಯಲ್ಲಿ ನೂತನ ಪೌರಾಯುಕ್ತ ಉದಯಕುಮಾರ, ಉಪಾಧ್ಯಕ್ಷೆ ಕಸ್ತೂರೆವ್ವ ಸಿ. ಚಿಕ್ಕಬಿದರಿ ಉಪಸ್ಥಿತರಿದ್ದರು. ಮಧು ಸಾತೇನಹಳ್ಳಿ ಸ್ವಾಗತಿಸಿ ವಂದಿಸಿದರು.