ಹೊಸಪೇಟೆ

ನಾಡಪ್ರಭು ಕೆಂಪೇಗೌಡರ 158ಅಡಿ ಎತ್ತರ ಕಂಚಿನ ಪ್ರತಿಮೆ ಅನಾವರಣ

ನಾಡಪ್ರಭು ಕೆಂಪೇಗೌಡರ 158ಅಡಿ ಎತ್ತರ ಕಂಚಿನ ಪ್ರತಿಮೆ ಅನಾವರಣ

ಹೊಸಪೇಟೆ(ವಿಜಯನಗರ) 04: ಕಂದಾಯ ಸಚಿವರಾದ ಆರ್‌.ಅಶೋಕ್, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ.ಸಿ.ಎನ್‌.ಆಶ್ವಥ್ ನಾರಾಯಣ್, ಗೃಹಸಚಿವ ಅರಗ ಜ್ಞಾನೇಂದ್ರ, ಕ್ರೀಡಾಸಚಿವ ನಾರಾಯಣಗೌಡ ಅವರು ಶುಕ್ರವಾರದಂದು ಶ್ರೀ ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡಿ ನಾಡಪ್ರಭು ಕೆಂಪೇಗೌಡರ ಭವ್ಯ 158 ಅಡಿ ಕಂಚಿನ ಪ್ರತಿಮೆ ಅನಾವರಣ ಪ್ರಯುಕ್ತ ಪವಿತ್ರ ಮೃತ್ತಿಕೆ ಸಂಗ್ರಹಿಸಿದರು. 

ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹಂಪಿ ಕನ್ನಡ ವಿಶ್ವವಿದ್ಯಾಲಯದ ಎಲಿಪ್ಯಾಡ್‌ನಲ್ಲಿ ಬಂದು ಇಳಿದ ನಾಲ್ವರು ಸಚಿವರು.  ಅಲ್ಲಿಂದ ಹಂಪಿ ವರೆಗೆ ಬೈಕ್ ಜಾಥಾ ಮೂಲಕ ಬಂದರು. ಅಲ್ಲಿ ವಿವಿಧ ಕಲಾ ತಂಡಗಳಾದ ಡೊಳ್ಳು ಕುಣಿತ, ನಂದಿಕೋಲು, ತಮಟೆ ವಾದನ, ಗೊಂಬೆ ಕುಣಿತ ಸೇರಿದಂತೆ ಜಾನಪದ ಕಲಾವಿದರೊಂದಿಗೆ ಸಚಿವರುಗಳು ವಿರೂಪಾಕ್ಷ ದೇಗುಲದ ವರೆಗೆ ಹೆಜ್ಜೆ ಹಾಕಿದರು. 

ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ಪ್ರವೇಶವಾಗುತ್ತಲೇ ಆನೆ ಲಕ್ಷ್ಮೀಗೆ ನಾಲ್ವರು ಸಚಿವರಿಗೆ ಹೂವಿನಹಾರ ಹಾಕಿ ಸನ್ಮಾನಿಸಿತು.  

ಹಂಪಿ ವಿರೂಪಾಕ್ಷೇಶ್ವರ, ತಾಯಿ ಪಂಪಾಂಬಿಕೆ ಹಾಗೂ ನಾಡದೇವತೆ ಭುವನೇಶ್ವರಿಯ ಪೂಜೆ ನೆರವೇರಿಸಿದ ಸಚಿವರು. ನಂತರ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದ ಮಂಟಪದಲ್ಲಿ ಹಂಪಿ ಪುಷ್ಕರಣೆಗಳಿಂದ 9 ತಾಮ್ರದ ಬಿಂದಿಗೆಗಳಿಗೆ ಸಂಗ್ರಹಿಸಿದ ಪವಿತ್ರ ಮೃತ್ತಿಕೆ ಪೂಜೆ ನೆರವೇರಿಸಿದರು. ನಂತರ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್ ಅವರು ಪವಿತ್ರ ಮೃತ್ತಿಕೆಗಳ ಬಿಂದಿಗೆಗಳನ್ನು ನಾಲ್ವರು ಸಚಿವರಿಗೆ ನೀಡಿದರು. 

ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ವಿದ್ಯುನ್ಮಾನ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ.ಸಿ.ಎನ್‌.ಆಶ್ವಥ್ ನಾರಾಯಣ್ ಅವರು ಮಾತನಾಡಿ ನಾಡಪ್ರಭು ಕೆಂಪೇಗೌಡರ ಭವ್ಯ ಕಂಚಿನ ಪ್ರತಿಮೆ ಅನಾವರಣ ಪ್ರಯುಕ್ತ ವಿಜಯನಗರ ಹಂಪಿಯ ಪವಿತ್ರ ಮೃತ್ತಿಕೆ, ಬಸವಣ್ಣನವರ ಜನ್ಮಸ್ಥಳದ ಮೃತ್ತಿಕೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಸಮಾಧಿಯ ಮೃತ್ತಿಕೆಯನ್ನ ಪಡೆಯಲಾಗುವುದು ಎಂದರು. ವಿಜಯನಗರ ಸಾಮಾಜ್ರಕ್ಕೂ ಬೆಂಗಳೂರಿಗೆ ಭಾವನಾತ್ಮಕ ಸಂಬಂಧ ಇದ್ದು, ಹಂಪಿಯ ಪವಿತ್ರ ಮೃತ್ತಿಕೆಯಿಂದ ಈ ಭಾವನಾತ್ಮಕ ಸಂಬಂಧ ವೃದ್ಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.  

ಕಂದಾಯ ಸಚಿವರಾದ ಆರ್‌.ಅಶೋಕ ಮತ್ತು ಗೃಹಸಚಿವ ಅರಗ ಜ್ಞಾನೇಂದ್ರ ಅವರು ಮಾತನಾಡಿದರು. ನಂತರ ಹಂಪಿಯಿಂದ ಕೂಡಲಸಂಗಮಕ್ಕೆ ತೆರಳಿದರು. 

 ಈ ಸಂದರ್ಭದಲ್ಲಿ ಕ್ರೀಡಾಸಚಿವ ನಾರಾಯಣಗೌಡ, ಸಂಸದ ವೈ.ದೇವೇಂದ್ರ​‍್ಪ, ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ತಹಶೀಲ್ದಾರ್ ವಿಶ್ವಜೀತ್ ಮೆಹತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗಣ್ಣನವರ್, ಮುಖಂಡ ಚನ್ನಬಸವನಗೌಡ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ