ಚಂಡಮಾರುತ ಹಿನ್ನೆಲೆ: ಚೆನ್ನೈ ಮಾರ್ಗದ 12 ವಿಮಾನಗಳ ಸಂಚಾರ ರದ್ದು
ಚೆನ್ನೈ,
ನ 25: ‘ನಿವಾರ್’ ಚಂಡಮಾರುತ ಹಿನ್ನೆಲೆಯಲ್ಲಿ ಚೆನ್ನೈಯಿಂದ ನಿರ್ಗಮಿಸುವ ಮತ್ತು ಚೆನ್ನೈಗೆ
ಹೋಗುವ 12 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.
ಚೆನ್ನೈನಿಂದ ನಿರ್ಗಮಿಸಬೇಕಿದ್ದ ಆರು ವಿಮಾನಗಳು ಮತ್ತು ಚೆನ್ನೈಗೆ ಆಗಮಿಸಬೇಕಿದ್ದ ಆರು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಕಣ್ಣೂರು, ಕೊಜಿಕೋಡ್, ವಿಜಯವಾಡ, ತಿರುಚಿ, ತೂತ್ತುಕುಡಿ, ಬೆಂಗಳೂರು, ಮಂಗಳೂರು ಮತ್ತು ಹುಬ್ಬಳ್ಳಿ ವಿಮಾನಗಳ ಸಂಚಾರ ಸದ್ಯ ರದ್ದಾಗಿದೆ.
ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಮತ್ತಷ್ಟು ವಿಮಾನಗಳ ಮಾರ್ಗ ಬದಲಾವಣೆ, ವಿಳಂಬ ಇಲ್ಲವೇ ಸಂಚಾರ ರದ್ದು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ರಾಷ್ಟ್ರೀಯ ಹವಾಮಾನ ಇಲಾಖೆ, ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಚಂಡಮಾರುತದ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುತ್ತಿವೆ.
ಚಂಡಮಾರುತ ಬೀಸಿದಾಗ ಹಾನಿಯಾಗಬಹುದೆಂಬ ಭಯದಿಂದ ವಿಮಾನ ನಿಲ್ದಾಣದಲ್ಲಿದ್ದ ಸಣ್ಣ ಎಟಿಆರ್ ವಿಮಾನವನ್ನು ದೊಡ್ಡ ವಿಮಾನದ ಸಹಾಯದಿಂದ ದೂರಕ್ಕೆ ಸ್ಥಳಾಂತರಿಸಲಾಗಿದೆ.