ವಿಜಯಪುರ

ಶ್ರೀ ಸಂಗನಬಸವ ಶಿವಾಚಾರ್ಯರ 115ನೇ ಪುಣ್ಯಾರಾಧನೆ

ಶ್ರೀ ಸಂಗನಬಸವ ಶಿವಾಚಾರ್ಯರ 115ನೇ ಪುಣ್ಯಾರಾಧನೆ


ವಿಜಯಪುರ, 7: ಇಬ್ರಾಹಿಂಪುರದ ಹಿರೇಮಠದಲ್ಲಿ ಲಿಂ. ಶ್ರೀ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ 115ನೇ ಪುಣ್ಯಾರಾಧನೆ ಅಂಗವಾಗಿ ಅ.8ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  

ತಾಳಿಕೋಟೆ ತಾಲ್ಲೂಕಿನ ಹಿರೂರ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಗುರುಜಯಸಿದ್ಧೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶ್ರೀ ಸಂಗನಬಸವ ಶಿವಾಚಾರ್ಯರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಕುಂಭಮೇಳ ಆಯೋಜಿಸಲಾಗಿದೆ.  

ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ವಿವಿಧ ವಾದ್ಯಮೇಳಗಳೊಂದಿಗೆ ಹೊರಡುವ ಸುಮಂಗಲೆಯರ ಕುಂಭಮೇಳದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಿರೇಮಠಕ್ಕೆ ಆಗಮಿಸಲಿದೆ. ಬಳಿಕ ಮಹಾಪ್ರಸಾದ ನಡೆಯಲಿದೆ.  

ಪುಣ್ಯಾರಾಧನೆ ಅಂಗವಾಗಿ ಹಿರೇಮಠದಲ್ಲಿ ನಡೆದ ಒಂಬತ್ತು ದಿನಗಳ ವಿಭೂತಿ ಪುರುಷರ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಬುಧವಾರ ಸಂಜೆ ಮಂಗಲಗೊಂಡಿತು. ಹಿರೂರ ಅನ್ನದಾನೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಗುರುಜಯಸಿದ್ಧೇಶ್ವರ ಶಿವಾಚಾರ್ಯರು ಪ್ರವಚನ ನಡೆಸಿದರು.

ಸಿದ್ಧಾರೂಢ ಅವರಹಳ್ಳಿ ಹಾರ್ಮೋನಿಯಂ ಹಾಗೂ ಕಲಾವಿದ ಸಿದ್ದೇಶ ಲಿಂಗನಬಂಡಿ ತಬಲಾ ಸಾಥ್ ನೀಡಿದರು.  

ಮಂಗಲೋತ್ಸವದಲ್ಲಿ ಹಿರೇಮಠದ ಶ್ರೀ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ ವಂಶಸ್ಥರಾದ ವಿರೂಪಾಕ್ಷಿ ಹಿರೇಮಠ, ಪ್ರಭು ಹಿರೇಮಠ, ಉಮೇಶ ಹಿರೇಮಠ, ಮಹೇಶ ಹಿರೇಮಠ, ಶಿವಲಿಂಗಯ್ಯ ಹಿರೇಮಠ ಸೇರಿದಂತೆ ಹಿರಿಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ