ಕಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳ: ಪೋಲಿಸ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗಲಿ
ಬಳ್ಳಾರಿ 09: ನಗರದಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಆತಂಕದಲ್ಲೇ ದಿನಗಳನ್ನು ಕಳೆಯುವ ಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಪೊಲೀಸ್ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ನಗರದ ವಿಶಾಲ್ ನಗರ ಪ್ರದೇಶ, ವೆಂಕಟೇಶ್ವರ ಕಾಲೋನಿ, ದುರ್ಗಾ ಕಾಲೋನಿ, ಮಾರುತಿ ಶೋ ರೂಂ, ಕೃಷ್ಣಾ ನಗರ ಕಾಲೋನಿ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚು ನಡೆದಿದ್ದು, ಜನರು ಭಯ ಭೀತರಾಗಿದ್ದಾರೆ, ಹಾಗೂ ಮಹಿಳೆಯರು ಒಂಟಿಯಾಗಿ ತಿರುಗಾಡದ ಭಯ ಭ್ರಾಂತಿಯಿಂದ ಕೂಡಿದ್ದಾರೆ ಎಲ್ಲಿಗೂ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಕೆಲ ಕಡೆ ಸರ್ವೇ ಮಾಡುವ ನೆಪದಲ್ಲಿ ಮನೆಗೆ ನುಗ್ಗಿ ಬೆಳ್ಳಂ ಬೆಳಿಗ್ಗೆ, ಸಂಜೆ ವೇಳೆ ಕಳ್ಳತನ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ, ಯುನೋವಾ ಕಾರು ಸೇರಿದಂತೆ ಚಿನ್ನ, ಬೆಳ್ಳಿ, ನಗದು ಸೇರಿದಂತೆ ಇತರೇ ವಸ್ತುಗಳನ್ನು ದೋಚಿ ಪರಾರಿಯಾಗಿದ ಉದಾಹರಣೆಗಳಿವೆ, ಭಯದ ವಾತಾವರಣದಲ್ಲಿ ಜನರು ಕಾಲ ಕಳೆಯುವಂತಾಗಿದೆ.
ಮನೆಯಲ್ಲಿ ಒಬ್ಬರೇ ಇರಲು ದೇವಸ್ಥಾನಗಳಿಗೆ ದರ್ಶನಕ್ಕೆ ಹೋಗಲು ಬಹಳ ಕಷ್ಟವಾಗಿದೆ, ಆದುದರಿಂದ ಕೂಡಲೇ ಈ ಕುರಿತು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು, ನಿರ್ಲಕ್ಷ್ಯ ವಹಿಸಿದರೇ ಜೆಡಿಎಸ್ ಆಶ್ರಯದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಜನತೆಯ ಸಾಮಾಜಿಕ ಭೌತಿಕವಾಗಿ ಕಾಳಜಿ ಬಗ್ಗೆ ತಿಳಿಸಿದರು ನಂತರ ಮುಂದಿನ ದಿನಗಳಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದರೆ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು