ಗ್ರಾಮೀಣ ಭಾಗದ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೂ ಇಂಗ್ಲಿಷ್ ಶಿಕ್ಷಣ ದೊರಕಿಸಿರುವ ದಿ. ಶ್ರೀದತ್ತ ಶೆಟ್ಟಿ ಕಾರ್ಯ ಶ್ಲಾಘನೀಯ: ಪಾಂಡುರಂಗ ಮದಭಾಂವಿ
ಕಾಗವಾಡ 02: ಇಂಗ್ಲಿಷ್ ಮಾಧ್ಯಮ ಕೇವಲ ನಗರ ಪ್ರದೇಶಗಳಿಗೆ ಮತ್ತು ಶ್ರೀಮಂತರಿಗೆ ಸೀಮಿತಗೊಂಡ ಕಾಲದಲ್ಲಿ ಶಿರಗುಪ್ಪಿಯಂತಹ ಚಿಕ್ಕ ಹಳ್ಳಿಯಲ್ಲಿ 1980 ರಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದ ದಿ. ಶ್ರೀದತ್ತ ಶೆಟ್ಟಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಭಾಂವಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು, ಶುಕ್ರವಾರ ದಿ. 30 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದ ಜ್ಞಾನಪೀಠ ಶಿಕ್ಷಣ ಸಮಿತಿಯ ಆಚಾರ್ಯ ಶ್ರೀ ವಿದ್ಯಾಸಾಗರ ಇಂಗ್ಲಿಷ್ ಮಾಧ್ಯಮ ಶಾಲೆ, ಎಸ್.ವ್ಹಿ.ಎ.ಎಸ್. ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ 46ನೇ ಜ್ಞಾನಶ್ರೀ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ದಿ. ಶ್ರೀದತ್ತ ಶೆಟ್ಟಿ ಅವರ ದೂರದೃಷ್ಟಿಯ ಫಲದಿಂದಾಗಿ ಇಂದು ಗ್ರಾಮೀಣ ಭಾಗದ ಮಧ್ಯಮ ವರ್ಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಇಂಗ್ಲಿಷ್ ಮಾಧ್ಯಮ ಶಿಕ್ಷಣ ದೊರಕುತ್ತಿದ್ದು, ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು. ಕಾರ್ಯಕ್ರಮವನ್ನು ಗಣ್ಯರ ವಿದ್ಯಾಮಾತೆ ಸರಸ್ವತಿ ದೇವಿ ಭಾವಚಿತ್ರದ ಪೂಜೆಯೊಂದಿಗೆ ದೀಪ ಬೆಳಗಿಸಿ, ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಡಬಿದರಿಯ ವಿದ್ಯಾಶಾರದಾ ಅಕೆಡಿಮೆಯ ಜಮಖಂಡಿ ಶಾಖೆಯ ಕಾರ್ಯದರ್ಶಿ ಸುದರ್ಶನ ತೇಜಸ್ವಿ, ದಾನ ಚಿಂತಾಮಣಿ ಪುರಸ್ಕೃತ ಮಹಾವೀರ ಪಡನಾಡ, ಶಿಕ್ಷಣ ಸಂಯೋಜಕ ಭರತ ಭಿಲವಡಿ, ಮಿರಜ್ ಪಟ್ಟಣದ ಅಜೀತ ಶೆಟ್ಟಿ, ಜ್ಞಾನಪೀಠ ಶಿಕ್ಷಣ ಸಮಿತಿಯ ಅಧ್ಯಕ್ಷ ಯು.ಎಸ್. ಶೆಟ್ಟಿ, ಕಾರ್ಯದರ್ಶಿ ವ್ಹಿ.ಎಸ್. ಶೆಟ್ಟಿ, ಪ್ರೌಢಶಾಲೆಯ ಮುಖ್ಯೋದ್ಯಾಪಕ ಎಸ್.ಎಸ್. ವಂಟಗೂಡೆ, ಪ್ರಾಥಮಿಕ ಶಾಲೆಯ ಎಸ್.ಕೆ. ಮಾಂಜರೆ, ಮುಖಂಡರಾದ ದರೆಪ್ಪಾ ಕುಸನಾಳೆ, ಭಾವುಸಾಬ ಕಾಗವಾಡೆ, ಶ್ರೇಯಾಂಶ ನಾಂದಣಿ ಸೇರಿದಂತೆ ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಸ್.ಕೆ. ಮಾಂಜರೆ ಸ್ವಾಗತಿಸಿದರು. 10 ನೇ ತರಗತಿ ವಿದ್ಯಾರ್ಥಿಗಳು ನಿರೂಪಿಸಿದರು. ಶಿಕ್ಷಕಿ ಎನ್.ವ್ಹಿ ಅಕಿವಾಟೆ ವಂದಿಸಿದರು.