ಹಂತಿ ಹೊಡೆಯುತ್ತಾ ಪದ ಹಾಡಿ ಸಂಭ್ರಮಿಸಿದ ರೈತರು
ಹಂತಿ ಹೊಡೆಯುತ್ತಾ ಪದ ಹಾಡಿ ಸಂಭ್ರಮಿಸಿದ ರೈತರು
ಇಂಡಿ 21: ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿಯ ಮರುಳಸಿದ್ದೇಶ್ವರ ದೇವರ ಕಾರ್ತಿಕ ಮಾಸದ ಜಾತ್ರೆಯ ಅಂಗವಾಗಿ ಖ್ಯಾತ ಪುರಾಣಿಕ ಶಿವಾನಂದಯ್ಯ ಶಾಸ್ತ್ರಿಗಳು ನಡೆಸಿಕೊಂಡು ಬರುವ ತುಮಕೂರಿನ ವಿಶ್ವಾರಾಧ್ಯರ ಪುರಾಣದಲ್ಲಿ ಬರುವ ಸಾಂದರ್ಭಿಕ ಹಂತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಆಧುನಿಕ ಯಂತ್ರೋಪಕರಣಗಳ ಭರಾಟೆಯಲ್ಲಿ ಹಂತಿ ರಾಶಿ ನೇಪಥ್ಯಕ್ಕೆ ಸರಿಯುತ್ತಿದೆ. ಇದರ ಮಧ್ಯೆ ಬನ್ನಿ ಮರದ ಕೆಳಗೆ ಸ್ವಚ್ಛ ಮಾಡಿ ಜೋಳದ ತೆನೆಯ ಮೇಲೆ ಎತ್ತುಗಳನ್ನು ನಡೆಸುವ ಮೂಲಕ ಹಳೆಯ ಹಂತಿ ರಾಶಿಯನ್ನು ಮತ್ತೆ ಯುವ ಪೀಳಿಗೆಗೆ ನೆನಪಿಸುವ ಕೆಲಸವನ್ನು ತಡವಲಗಾ ಗ್ರಾಮದಲ್ಲಿ ಮಾಡಲಾಯಿತು. ಸಾಂಪ್ರದಾಯಿಕವಾಗಿ ಹಂತಿ ಹೊಡೆಯುವುದರ ಮೂಲಕ ಹಳೆ ಪದ್ಧತಿಗೆ ಮರುಜೀವ ತುಂಬಿಸುತ್ತಿದ್ದಾರೆ. ಹಂತಿ ಪದಗಳನ್ನು ಹಾಡುವುದರ ಮೂಲಕ ರೈತರು ಸುಗ್ಗಿ ಸಂಭ್ರಮದಲ್ಲಿ ಭಾಗವಹಿಸಿ ಖುಷಿ ಪಟ್ಟರು. ಎತ್ತುಗಳಿಗೆ ವಿಶೇಷ ಪೂಜೆ ಮಾಡಿದ ನಂತರ ಹಂತಿ ಕಣದಲ್ಲಿ ರಾಶಿ ಪ್ರಾರಂಭಿಸಲಾಯಿತು. ರಾತ್ರಿ 8 ರಿಂದ ಹಂತಿ ಮೂಲಕ ರಾಶಿ ಮಾಡಲಾಯಿತು.ರಾಶಿ ನಡೆಯುವ ಸಂದರ್ಭದಲ್ಲಿ ಕೋಲಾಟ, ಹಂತಿ ಪದ, ಭಜನೆಯಂತಹ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ತಡವಲಗಾ ಗ್ರಾಮವಷ್ಟೇ ಅಲ್ಲದೇ ನೆರೆಯ ಗ್ರಾಮದ ನೂರಾರು ರೈತರು ಹಂತಿ ಸಂಭ್ರಮ ಕಣ್ತುಂಬಿಕೊಂಡರು.ಹಂತಿ ರಾಶಿ ಮಾಡುವ ಮೂಲಕ ಮರು ಜೀವ ತುಂಬುವ ಕಾರ್ಯ ಕಳೆದ ಎರಡು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಸುಗ್ಗಿಕಾಲ ಅಂದ್ರೆ ಸಾಕು ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ವರ್ಷವೀಡೀ ಕಷ್ಟ ಪಟ್ಟು ಬೆಳೆದಂತಹ ಬೆಳೆಯನ್ನು ವಾರಗಳ ಕಾಲ ರಾಶಿ ಮಾಡಿ ಧವಸ, ಧಾನ್ಯಗಳನ್ನು ತಂದು ತಮ್ಮ ಮನೆಯಲ್ಲಿ ಶೇಖರಣೆ ಮಾಡುತ್ತಿದ್ದರು. ಕಾಲ ಕಳೆದಂತೆ ಅದೆಲ್ಲವೂ ಕಡಿಮೆಯಾಗುತ್ತಿದೆ. ಆಧುನಿಕ ಯಂತ್ರಗಳ ಭರಾಟೆಯಲ್ಲಿ ಸುಗ್ಗಿಯ ಹಿಗ್ಗು ರೈತರಿಂದ ದೂರವಾಗಿದೆ. ರೈತರ ಕೆಲಸಗಳನ್ನು ಯಂತ್ರಗಳು ಕಸಿದುಕೊಂಡಿರುವುದರಿಂದ ರೈತರು ಪರದಾಡುವಂತಾಗಿದೆ. ಆದ್ರೆ ತಡವಲಗಾ ಗ್ರಾಮದಲ್ಲಿ ಪ್ರತಿ ವರ್ಷ ಹಂತಿ ರಾಶಿ ಮಾಡುವುದರ ಮೂಲಕ ಯುವ ಪೀಳಿಗೆಗೆ ನೆನಪಿಸುವ ಕೆಲಸವನ್ನು ಮಾಡಲಾಗುತ್ತಿದೆ.