ಶಿಕ್ಷಕ ವೃತ್ತಿ ಪರಮ ಪವಿತ್ರವಾದದ್ದು: ಮಂಜುನಾಥ ಕುನ್ನೂರ
ಲೋಕದರ್ಶನ ವರದಿ
ಶಿಗ್ಗಾವಿ 28: ಶಿಕ್ಷಕರು ಸಮಾಜದ ನಿರ್ಮಾತೃಗಳು ಒಂದು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಗುರುತರವಾದುದು. ಶಿಷ್ಯನಿಗೆ ಸರಿಯಾದ ಮಾರ್ಗದರ್ಶನ ಮಾಡುವ ಮೂಲಕ ಕಗ್ಗಲ್ಲಿನಂತ ಶಿಷ್ಯನನ್ನು ಸುಂದರ ಶಿಲ್ಪವನ್ನಾಗಿಸುವ ಪರಮ ಪವಿತ್ರ ವೃತ್ತಿಯೇ ಶಿಕ್ಷಕ ವೃತ್ತಿಯಾಗಿದೆ ಎಂದು ಮಂಜುನಾಥ ಕುನ್ನೂರ ಅಭಿಪ್ರಾಯಪಟ್ಟರು.
ಪಟ್ಟಣದ ಚನ್ನಪ್ಪ ಕುನ್ನೂರ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಸಿ. ಟಿ. ಪಾಟೀಲ ಅವರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಶಿಕ್ಷಕರ ಮಕ್ಕಳಿಗೆ ಆ ಭಗವಂತ ಒಳ್ಳೆಯ ಅವಕಾಶಗಳನ್ನು ಕಲ್ಪಿಸುತ್ತಾನೆ. ಹಾಗಾಗಿ ಎಲ್ಲ ಶಿಕ್ಷಕ ಸಮುದಾಯ ನಿಸ್ವಾರ್ಥ ಸೇವೆಗೆ ಮುಂದಾಗಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ ಶಿಕ್ಷಕರ ದೂರದೃಷ್ಟಿಯ ಫಲವಾಗಿ ಸರ್ವಾಂಗ ಸುಂದರ ಸಮಾಜ ನಿರ್ಮಾಣ ಸಾಧ್ಯವಾಗಿದೆ. ಇತ್ತಿಚಿಗೆ ಗುರು-ಶಿಷ್ಯ ಸಂಬಂಧದ ಪರಿಕಲ್ಪನೆ ಅರ್ಥ ಕಳೆದುಕೊಳ್ಳುತ್ತಿದೆ. ಆ ಸಂಬಂಧವನ್ನು ಗಟ್ಟಿಗೊಳಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.
30 ವರ್ಷಗಳ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾದ ಸಿ. ಟಿ. ಪಾಟೀಲರನ್ನು ಗೌರವಪೂರ್ಣವಾಗಿ ಸನ್ಮಾನಿಸಿದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ, ಮುಖ್ಯೋಪಾಧ್ಯಾಯಿನಿ ಜಿ. ಎಂ. ಅರಗೋಳ, ಸಂಸ್ಥೆಯ ನಿರ್ದೇಶಕ ವೀರಣ್ಣ ಬಡ್ಡಿ, ಮುಖ್ಯೋಪಾಧ್ಯಾಯರಾದ ಎಂ. ಎ. ಗಾಣಿಗೇರ, ಎಂ. ಬಿ. ನೀರಲಗಿ ಮುಂತಾದವರು ಪಾಲ್ಗೊಂಡು ಮಾತನಾಡಿದರು. ಪ್ರಾರಂಭದಲ್ಲಿ ಶಿಕ್ಷಕ ಈಶ್ವರ ತಾಡಪತ್ರಿಮಠ ಸ್ವಾಗತಿಸಿದರು. ಶಿಕ್ಷಕಿ ಆಸ್ಮಾ ಕಲಾಯಗಾರ ವಂದಿಸಿದರು. ಶಿಕ್ಷಕ ಜೆ. ಎಂ. ದೇವರಮನಿ ಕಾರ್ಯಕ್ರಮ ನಿರೂಪಿಸಿದರು