ಬೂತ್ ಮಟ್ಟದ ಪ್ರಜಾ ಪ್ರತಿನಿಧಿಗಳ ಆಯ್ಕೆ: ಪೂರ್ವಭಾವಿ ಸಭೆ
ಲೋಕದರ್ಶನ ವರದಿ
ಶಿಗ್ಗಾವಿ 22: ಎಲ್ಲವನ್ನೂ ದುಡ್ಡಿನಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ, ಈಗಾಗಲೇ ಬಿಜೆಪಿಯವರ ಧಮ್ಮು, ತಾಕತ್ತಿಗೆ ರಾಜ್ಯದ ಜನತೆ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಂಸದ ಮಂಜುನಾಥ ಕುನ್ನೂರ ಹರಿಹಾಯ್ದರು.
ಪಟ್ಟಣದ ಶಾದಿ ಮಹಲ್ನಲ್ಲಿ ಶಿಗ್ಗಾವಿ, ಸವಣೂರ ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಕಾಂಗ್ರೇಸ್ ಪಕ್ಷದ ಗ್ಯಾರಂಟಿ ಕಾರ್ಡ್ ಯೋಜನೆಯ ಬೂತ್ ಮಟ್ಟದ ಪ್ರಜಾ ಪ್ರತಿನಿಧಿಗಳ ಆಯ್ಕೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬೊಮ್ಮಾಯಿ ಗೆದ್ದು, ಸೋತಿದ್ದಾರೆ, ಆದರೆ ನಮ್ಮ ಕಾಂಗ್ರೇಸ್ ಅಭ್ಯರ್ಥಿ ಪಠಾಣ್ ಅವರು ಸೋತು, ಗೆದ್ದಿದ್ದಾರೆ, ನಮ್ಮ ಕಾಂಗ್ರೇಸ್ ಕಾರ್ಯಕರ್ತರು ತಾಲೂಕಿನಲ್ಲಿ ಆಗುತ್ತಿರುವ ಕೆಲಸ ಕಾರ್ಯಗಳನ್ನ ಪ್ರಶ್ನಿಸುವಂತವರಾಗಬೇಕು ಎಂದು ಸಲಹೆ ನೀಡಿದ ಅವರು ಕ್ಷೇತ್ರದಲ್ಲಿ ಬೊಮ್ಮಾಯಿಯವರು ಲೋಕಸಭೆಗೆ ನಿಂತು, ಗೆದ್ದು ಬಂದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಸವಾಲು ಹಾಕಿದರು.
ಮುಖಂಡ ಯಾಸೀರ್ ಅಹ್ಮದ್ ಖಾನ್ ಪಠಾಣ್ ಮಾತನಾಡಿ, ಪಕ್ಷದಲ್ಲಿ ನಿಷ್ಠಾವಂತಿಕೆ ಮುಖ್ಯ ನಿಷ್ಟಾವಂತಿಕೆಯಿಂದ ಇದ್ದರೆ ಎಲ್ಲವೂ ಸಾದ್ಯವಿದೆ, ಜಿಲ್ಲೆಯಲ್ಲಿ 5 ಜನ ಕಾಂಗ್ರೇಸ್ ಪಕ್ಷದ ಶಾಸಕರಿದ್ದಾರೆ, ಗ್ಯಾರಂಟಿ ಯೋಜನೆಗಳಲ್ಲಿ 5 ಮುಖ್ಯ ಯೋಜನೆಗಳಿವೆ, ಆ ಯೋಜನೆಗಳನ್ನ ಅನುಷ್ಠಾನಗೊಳಿಸುವ ಕಾರ್ಯವನ್ನ ಆಯ್ಕೆಯಾದವರು ಮಾಡಬೇಕು, ಯಾರು ಚನ್ನಾಗಿ ಮಾಡುತ್ತಾರೆ ಅವರಿಗೆ ಪ್ರೋತ್ಸಾಹಧನ ಹಾಗೂ ನಾಮನಿರ್ದೇಶಿತ ಹುದ್ದೆಗಳಿಗೆ ನಿರ್ದೇಶನ ನೀಡುವ ಅವಕಾಶವಿದೆ, ನಾವು ಕ್ಷೇತ್ರದಲ್ಲಿ ಮಾತ್ರ ನಾವು ಸೋತಿದ್ದೇವೆಯೇ ಹೊರತು ಸತ್ತಿಲ್ಲ, ರಾಜ್ಯದಲ್ಲಿ ನಾವೇ ಅಧಿಕಾರದಲ್ಲಿದ್ದೇವೆ, ಯಾರೂ ಎದೆಗುಂದುವ ಅವಶ್ಯಕತೆಯಿಲ್ಲ, 5 ಯೋಜನೆಗಳನ್ನ ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಿದ್ದೇ ಆದರೆ ಬರುವ ಲೋಕಸಭೆಯಲ್ಲಿ ನಮ್ಮ ಅಭ್ಯರ್ಥಿಯೇ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು.
ವಿಪ ಮಾಜಿ ಸದಸ್ಯ ಸೊಮಣ್ಣ ಬೇವಿನಮರದ ಮಾತನಾಡಿ ಕ್ಷೇತ್ರದಲ್ಲಿ ಕಾಂಗ್ರೇಸ್ ಸೊತಿದೆ ಹೀಗಾಗಿ ಸೋತ ಕ್ಷೇತ್ರದ ಕಡೆಗೆ ತಾವು ಗಮನ ಹರಿಸಬೇಕು ಎಂದು ರಾಜ್ಯ ನಾಯಕರಿಗೆ ಮನವಿ ಮಾಡಲಾಗಿದೆ, ಕಾರ್ಯಕರ್ತರು ಅಂಜಬೇಡಿ, ಸ್ವಜನಪಕ್ಷಪಾತ, ತಾರತಮ್ಯವನ್ನ ತೊರೆದು ನಮ್ಮ ತಾಲೂಕಿನ ಅಧಿಕಾರಿಗಳು ಬದಲಾಗಬೇಕು ಎಂದು ತಾಕೀತು ಮಾಡಿದ ಅವರು ದಮ್ಮು, ತಾಕತ್ತು ಎಂದು ಮಾತನಾಡುವ ಬೊಮ್ಮಾಯಿಯವರೇ 2014 ರ ಚುನಾವಣೆಯಲ್ಲಿ ಘೋಷಣೆ ಮಾಡಿದ ಪ್ರಣಾಳಿಕೆಯನ್ನು ಈಡೇರಿಸಿ ಎಂದು ಸವಾಲು ಹಾಕಿದರು.
ಜಿಲ್ಲಾ ಮಹಿಳಾ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷೆ ಪ್ರೇಮಾ ಪಾಟೀಲ, ಜಿಲ್ಲಾ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಎಂ ಎಂ ಹಿರೇಮಠ ಮಾತನಾಡಿದರು.
ಸಭೆಯಲ್ಲಿ ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶಂಬುಲಿಂಗಪ್ಪ ಆಜೂರ, ಸವಣೂರ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಎಂ ಎಂ ಮುಲ್ಲಾ, ಮುಖಂಡರಾದ ಪ್ರಕಾಶ ಹಾದಿಮನಿ, ಶಿವಾನಂದ ರಾಮಗೇರಿ, ಗುರುನಗೌಡ ಪಾಟೀಲ, ಬಾಬರ್ ಭೋವಾಜಿ, ಮಹೇಶ ತಳವಾರ, ಬಿ ಸಿ ಪಾಟೀಲ, ಅಬ್ದುಲ್ ಕರಿಂ ಮೊಗಲಲ್ಲಿ, ಗುಡ್ಡಪ್ಪ ಜಲದಿ, ಸುಭಾಸ್ ಮಜ್ಜಗಿ, ಬಸವರಾಜ ರಾಗಿ, ಸಂತೋಷ ಚಾಕಲಬ್ಬಿ, ಎಸ್ ಎಫ್ ಮಣಕಟ್ಟಿ, ಮಲ್ಲಮ್ಮ ಸೋಮನಕಟ್ಟಿ, ಮಲ್ಲೇಶಪ್ಪ ಹೊನ್ನಕೇರಿ ಸೇರಿದಂತೆ ಮುಖಂಡರು ಕಾರ್ಯಕರ್ತರು ಇದ್ದರು