ಲೇಖನಗಳು

ಮನುಕುಲದ ಉದ್ದಾರಕ್ಕಾಗಿ ಬದುಕಿದ ಸಂತ ಸೇವಾಲಾಲ್

ಮನುಕುಲದ ಉದ್ದಾರಕ್ಕಾಗಿ ಬದುಕಿದ ಸಂತ ಸೇವಾಲಾಲ್

ಲೇಖಕರು: ಡಾ. ಜಗದೀಶ ಮಾನೆ  

ಭಾರತ ಇದೊಂದು ಪುಣ್ಯಭೂಮಿ, ತೀರ್ಥಕ್ಷೇತ್ರ. ಈ ಮಣ್ಣಿನಲ್ಲಿ ಅದೆಂತಹದ್ದೋ ಪರಿಮಳವಿದೆ. ಇಲ್ಲಿ ಹುಟ್ಟಿದ ಅನೇಕರು ತಮ್ಮ ಕಾರ್ಯ ಸಾಧನೆಯ ಮೂಲಕ ಮಹಾತ್ಮ ರಾಗಿದ್ದಾರೆ. ಈ ಕರುನಾಡಿನಲ್ಲಿ ಆದಿ ಶಂಕರಾಚಾರ್ಯರ ಹೆಜ್ಜೆ ಗುರುತುಗಳು, ಮಧ್ವಾಚಾರ್ಯರ ನೆರಳು, ರಾಮಾನುಜಾಚಾರ್ಯರ ತತ್ವ ಸಿದ್ಧಾಂತಗಳಿವೆ. ಕನಕದಾಸರ ಭಕ್ತಿ, ಪುರಂದರ ದಾಸರ ಕೀರ್ತನೆಗಳ ಗಮಕ ಕೇಳುತ್ತದೆ. ಬಸವಣ್ಣನವರ ವಚನಗಳು, ಸಂತ ಶಿಶುನಾಳ ಶರೀಫರ ಭಾವೈಕ್ಯತೆಯ ಸಂದೇಶಗಳಿವೆ. ಶರಣ ಸಾಹಿತ್ಯ ನಮ್ಮ ಅದ್ಭುತ ಸಂಪತ್ತು. ಕರುನಾಡಲ್ಲಿ ಸಾಮಾಜಿಕ ಕ್ರಾಂತಿಗಾಗಿ ಅನೇಕರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ.

ಜಾತಿ ವ್ಯವಸ್ಥೆಯ ನಿರ್ಮೂಲನೆಗಾಗಿ ಬಸವಣ್ಣನವರು ತಮ್ಮ ಪ್ರಾಣವನ್ನೇ ಅರ​‍್ಿಸಿದ್ದರು. ವಚನಕಾರರು ಈ ಸಮಾಜದಲ್ಲಿ ಸಮಾನತೆಯನ್ನು ತರಲು ಹಗಲಿರುಳು ಪ್ರಯತ್ನಿಸಿದರು. ರಾಮಾನುಜ, ಮಾದ್ವವರು ಧರ್ಮದ ಬೆಳಕನ್ನ ತೋರಿದರೇ, ಮಾದೇಶ್ವರರು ಮತ್ತು ಸಿದ್ದಪ್ಪಾಜಿ ಇವರೆಲ್ಲರೂ ಈ ಸಮಾಜದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಸತತ ಪ್ರಯತ್ನವನ್ನು ನಡೆಸಿದರು.

ಅಂತಹ ಸಾಧಕರ ಪಟ್ಟಿಯಲ್ಲಿ ಸಂತ ಸೇವಾಲಾಲರೂ ಒಬ್ಬರು. ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದ ಸೇವಾಲಾಲರು ತಮ್ಮ ಸಾಧನೆಯಿಂದಲೇ ದೈವತ್ವಕೇರಿದ್ದರು. ಅವರ ತತ್ವ ಬೋಧನೆಗಳು, ತಿಳುವಳಿಕೆಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಅದು ಸಮಸ್ತ ಮನುಕುಲಕ್ಕೆ ದಾರಿ ದೀಪವಾಗಿತ್ತು. ಸೇವಾಲಾಲರ ಮೂಲ:- ಜಾನಪದ ಸಾಹಿತ್ಯ ಮತ್ತು ಪುರಾಣ, ಇತಿಹಾಸದ ಪ್ರಕಾರ, ರಾಜಸ್ಥಾನದ ರಜಪೂತ ಮನೆತನದಲ್ಲಿ ’ಬೆಂಗನ್‌’ ಎಂಬ ವ್ಯಕ್ತಿಗೆ, ಪೇಸಾ, ಮಾರಾ, ಸಾಳಾ, ಕಿಮಡಾ, ಮತ್ತು ಮಾಳ ಎಂಬ ಐದುಜನ ಗಂಡು ಮಕ್ಕಳಿದ್ದರು.

ಇದರಲ್ಲಿ ’ಮಾಳಾ’ ಎಂಬುವವ ಮಾತ್ರ ಮದುವೆಯಾಗದೆ ಹಾಗೇ ಬ್ರಹ್ಮಚಾರಿಯಾಗಿದ್ದ. ಈ ನಾಲ್ಕು ಜನ ಸಹೋದರರು ಮದುವೆಯಾದ ನಂತರ ಬೇರೆ ಜೀವನ ನಡೆಸಲು ನಿರ್ಧರಿಸಿದಾಗ ತಂದೆ ಬೆಂಗನ್ ಈ ಐದು ಜನ ಮಕ್ಕಳಿಗೆ ತನ್ನಲ್ಲಿದ್ದ ಒಂದೊಂದು ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಕಳುಹಿಸುತ್ತಾನೆ. ಪಾಲಿಗೆ ಬಂದಿದ್ದನ್ನು ತೆಗೆದುಕೊಂಡು ಪ್ರತ್ಯೇಕ ಜೀವನ ಆರಂಭಿಸಲು ಬೇರೆ ಬೇರೆ ಊರುಗಳತ್ತ ತೆರಳುತ್ತಾರೆ. ಮದುವೆಯಾಗದ ಮಾಳಾ ಎಲ್ಲಿಯೂ ಹೋಗದೆ ಅಲ್ಲೇ ಉಳಿಯುತ್ತಾನೆ. ಪೇಸಾ ಎನ್ನುವವನು ಹೊಲಗದ್ದೆ ಕೆಲಸ ಮಾಡುತ್ತಾ ’ಪೇಸಾಡಿ’ ಆದ. ಮಾರ ಎಂಬಾತನೇ ’ಮಾರ್ವಾಡಿ’ ಆದ. ಸಾಳಾ ಎನ್ನುವವನು ಡೊಮರು ಬಾರಿಸುವನಾದ. ಕಿಮ್ಮಡ ಎಂಬಾತ ’ಮೇಲುಕಾಶಿ’ (ಬೇಟೆಗಾರ) ಆಗುತ್ತಾನೆ. ಇನ್ನು ಅಲ್ಲೇ ಉಳಿದಿದ್ದ ’ಮಾಳಾ’ ಮಾತ್ರ ಹಸುಗಳನ್ನು ಮೇಯಿಸುತ್ತಾ ಒಬ್ಬ ಸಂತನಾಗುತ್ತಾನೆ.

ಈತನೇ ಲಂಬಾಣಿಗರ ಮೂಲಪುರುಷ. ಮಾಳಾನು ನಿತ್ಯ ಆಕಳುಗಳನ್ನು ಮೇಯಿಸುತ್ತಿರುವ ಸಂದರ್ಭದಲ್ಲೊಮ್ಮೆ ಶ್ರೀ ಕೃಷ್ಣನ ಪರಿಚಯವಾಗಿ ಸ್ನೇಹವಾಗುತ್ತದೆ. ಬಳಿಕ ಶ್ರೀ ಕೃಷ್ಣನು ತನ್ನ ಬಳಿ ಇದ್ದ ಗೋವುಗಳನ್ನು ಮೇಯಿಸಲು ಮಾಳಾನನ್ನೇ ನೇಮಿಸುತ್ತಾನೆ. ಅತ್ಯಂತ ಶ್ರದ್ಧೆ ಪ್ರಾಮಾಣಿಕತೆಯಿಂದ ಈ ಕಾರ್ಯ ಮಾಡುತ್ತಾ ಒಳ್ಳೆಯ ಗೋ ರಕ್ಷಕ ಎಂಬ ಅಭಿದಾನಕ್ಕೆ ಅರ್ಹತೆಯನ್ನು ಪಡೆಯುವ ಮೂಲಕ ಶ್ರೀ ಕೃಷ್ಣನ ಪ್ರೀತಿಗೆ ಪಾತ್ರನಾಗುತ್ತಾನೆ. ಒಮ್ಮೆ ದನ ಮೇಯಿಸುತ್ತಿರುವ ಸಂದರ್ಭದಲ್ಲಿ ಓರ್ವ ಗುರುಗಳ ದರ್ಶನವಾಗುತ್ತದೆ. ಈತನ ಕೈಂಕರ್ಯವನ್ನು ಮೆಚ್ಚಿದ ಗುರುಗಳು ಮಾಳಾನಿಗೆ ರಾವಘಡ, ಪಾವಘಡ ಮತ್ತು ಚಾವುಂಡಗಘಡದ ರಾಜನನ್ನು ಭೇಟಿಯಾಗಲು ಸಲಹೆ ನೀಡುತ್ತಾರೆ.

ಗುರುಗಳ ಆ ಸಲಹೆಯಂತೆ ಅವರನ್ನು ಭೇಟಿ ಮಾಡಿದ ಮಾಳನು ಆ ರಾಜ್ಯಗಳಲ್ಲೇ ನೆಲೆಸುತ್ತಾನೆ. ಅಲ್ಲಿ ಪ್ರತಿನಿತ್ಯ ನೃತ್ಯ ಮಾಡುತ್ತಾ ರಾಜರ ಮನ ಗೆಲ್ಲುತ್ತಾನೆ. ನಂತರ ಆ ಮೂರು ರಾಜರು ಮಾಳನಿಗೆ ವರನೀಡಲು ನಿರ್ಧರಿಸಿದರು. ಆಗ ಮಾಳನು ’ನನಗೆ ವರ ಬೇಡ, ಮೂರೂ ಜನ ರಾಜರು ನಿಮ್ಮ ಒಬ್ಬೊಬ್ಬ ಗಂಡು ಮಕ್ಕಳನ್ನು ನನಗೆ ದತ್ತಪುತ್ರರನ್ನಾಗಿ ನೀಡಿ ಎಂದು ಕೇಳುತ್ತಾನೆ. ಅದರಂತೆ, ಆ ಮೂರು ರಾಜರಿಂದ ಮೂರು ಜನ ಕಂಡು ಮಕ್ಕಳನ್ನು ದತ್ತು ಪಡೆಯುತ್ತಾನೆ. 

ಸುದ್ದಿ ಓದಿ