ಮಂಗಸೂಳಿ, ಶೇಡಬಾಳದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ; ಮಂತ್ರಿ ಸ್ಥಾನ ಕೊಟ್ಟರೇ ನಿಭಾಯಿಸಬಲ್ಲೆ: ರಾಜು ಕಾಗೆ..!!
ಕಾಗವಾಡ 25 : ನಾನು ಕಾಗವಾಡ ಮತಕ್ಷೇತ್ರದಿಂದ ಐದು ಬಾರಿ ಶಾಸಕನಾಗಿದ್ದೇನೆ. ಹಿರಿಯ ಮತ್ತು ಅಪಾರ ಅನುಭವ ಹೊಂದಿದ ನನಗೆ ಮಂತ್ರಿ ಸ್ಥಾನ ಕೊಟ್ಟರೇ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದ್ದಾರೆ. ಅವರು ಬುಧವಾರ ದಿ. 25 ರಂದು ತಾಲೂಕಿನ ಮಂಗಸೂಳಿಯಲ್ಲಿ ಫರೀದಖಾನವಾಡಿ ರಸ್ತೆ ಹಾಗೂ ಶೇಡಬಾಳ ಪಟ್ಟಣದಲ್ಲಿ ಮುಖ್ಯಮಂತ್ರಿ ಅಮೃತಯೋಜನೆಯಲ್ಲಿ ಪಟ್ಟಣದ ನಾಲ್ಕು ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ಮಂತ್ರಿಗಿರಿಗಾಗಿ ಸಹಿ ಸಂಗ್ರಹದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಬೇಕಾದರೂ ಮಂತ್ರಿ ಪಟ್ಟಕ್ಕಾಗಿ ಬೇಡಿಕೆ ಇಡಬಹುದು. ಮೊದಲನೇ ಸಲ ಆಯ್ಕೆಯಾದವರು, ಅವರಲ್ಲಿ ಮಂತ್ರಿ ಸ್ಥಾನ ನಿಭಾಯಿಸುವ ಶಕ್ತಿ ಇದ್ದರೇ ಅವರಿಗೂ ಮಂತ್ರಿಸ್ಥಾನ ಕೊಡಬಹುದು. ಅದರಲ್ಲಿ ತಪ್ಪೇನಿದೆ..
ರಾಜ್ಯದಲ್ಲಿ ಅತ್ಯಂತ ಹಿರಿಯ ಶಾಸಕರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ. ಸಾಕಷ್ಟು ಅನುಭವ ಹೊಂದಿದ್ದೇನೆ. ನನಗೂ ಮಂತ್ರಿ ಸ್ಥಾನ ನೀಡಿದರೇ ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತೇನೆ. ನಮ್ಮ ಕ್ಷೇತ್ರದ ಮೂಲಭೂತ ಸಮಸ್ಯೆಯಾದ ಬಸವೇಶ್ವರ ಯಾತ ನೀರಾವರಿ ಯೋಜನೆ ಮುಗಿಯುವ ಹಂತದಲ್ಲಿದೆ. ಅದಕ್ಕೆ ಹೆಚ್ಚಿನ ಅನುದಾನ ತಂದು, ಬರುವ ದಿನಗಳಲ್ಲಿ ಪೂರ್ಣಗೊಳಿಸುತ್ತೇನೆ. ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತೇನೆ ಎಂದರು. ಈ ವೇಳೆ ಅಭಿಯಂತರದ ಮಲ್ಲಿಕಾರ್ಜುನ ಮಗದುಮ್ಮ ಶೇಡಬಾಳ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಮಂಗಸೂಳಿ ಗ್ರಾ.ಪಂ. ಅಧ್ಯಕ್ಷ ಬಾಳು ಭಜಂತ್ರಿ, ಶೇಡಬಾಳ ಪ.ಪಂ. ಅಧ್ಯಕ್ಷ ಉತ್ಕರ್ಷ ಪಾಟೀಲ, ಮಾಜಿ ಜಿ.ಪಂ. ಸದಸ್ಯ ರವಿ ಪೂಜಾರಿ, ದಸಂಸ ಜಿಲ್ಲಾ ಸಂಚಾಲಕ ಸಂಜಯ ತಳವಲ್ಕರ್, ಪ್ರಕಾಶ ಪಾಟೀಲ, ವಿನೋದ ಬರಗಾಲೆ, ಅನೀಲ ಅರವಾಡಿ, ರಮೇಶ ಬಾಡ್ಕರ, ರವಿ ನಾಂದ್ರೆ, ಕುಮಾರ ಪಾಟೀಲ, ಸಂಜು ಪಾಟೀಲ, ಫಾರುಖ್ ಅಲಾಸ್ಕರ್, ಮಲ್ಲಿಕಾರ್ಜುನ್ ಇಸರಗೊಂಡ, ಗುತ್ತಿಗೆದಾರರಾದ ಬಸವ ಪ್ರಸಾದ್ ಪಾಟೀಲ, ಬಸವರಾಜ ಮಗದುಮ್ಮ, ಮಲ್ಲಿಕಾರ್ಜುನ ಬಡಕಂಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.