ಮಹಲಿಂಗಪುರ

ರಾಜ್ಯೋತ್ಸವ ನಿತ್ಯೋತ್ಸಾಹದ ನಿತ್ಯೋತ್ಸವ ಆಗಬೇಕು: ಡಿ.ವಿ.ಹಿರೇಮಠ

ರಾಜ್ಯೋತ್ಸವ ನಿತ್ಯೋತ್ಸಾಹದ ನಿತ್ಯೋತ್ಸವ ಆಗಬೇಕು: ಡಿ.ವಿ.ಹಿರೇಮಠ


ರಾಜ್ಯೋತ್ಸವ ನಿತ್ಯೋತ್ಸಾಹದ ನಿತ್ಯೋತ್ಸವ ಆಗಬೇಕು: ಡಿ.ವಿ.ಹಿರೇಮಠ 

ಮಹಾಲಿಂಗಪುರ 05: ಕನ್ನಡ ನಾಡು ನುಡಿಯ ಹಬ್ಬವಾದ ರಾಜ್ಯೋತ್ಸವ ಒಂದೇ ದಿನಕ್ಕೆ ಸೀಮಿತವಾಗದೇ ನಿತ್ಯೋತ್ಸಾಹದ ನಿತ್ಯೋತ್ಸವ ಆಗಬೇಕು ಎಂದು ಮಧರಖಂಡಿಯ ಸರಕಾರಿ ಪ್ರೌಢಶಾಲೆಯ ಶಿಕ್ಷಕ, ಕನ್ನಡದ ಕಟ್ಟಾಳು ಡಿ.ವಿ.ಹಿರೇಮಠ ಹೇಳಿದರು.  

ಸ್ಥಳೀಯ ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಕಾಲೇಜಿನ ಕನ್ನಡ ಸಂಘದ ಅಡಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕನ್ನಡ ಭಾಷೆ ಬಲಿಷ್ಠವಾಗುವುದು ಭಾಷೆಯನ್ನು ಬಳಸುವುದರಿಂದ ಹೊರತು ಭಾಷಣದಿಂದಲ್ಲ. ಕರುನಾಡು ಕಟ್ಟಲು ಕಂಕಣ ಕಟ್ಟಿ ಹೋರಾಡಿದ ಮಹನೀಯರನ್ನು, ಕನ್ನಡ ಭಾಷೆ ಶ್ರೀಮಂತಗೊಳಿಸಿದ ಸಾಹಿತಿಗಳನ್ನು ಎಂದಿಗೂ ಮರೆಯಬಾರದು. ಹನುಮಂತ ಎದೆ ಸೀಳಿ ರಾಮನನ್ನು ತೋರಿಸಿದಂತೆ ಕನ್ನಡಿಗರ ಎದೆ ಸೀಳಿದರೆ ಕನ್ನಡಾಂಬೆ ಕಾಣುವಷ್ಟು ಭಾಷಾಭಿಮಾನ ಮೈದಳೆಯಬೇಕು ಎಂದರು. ಮಾತಿನಾರಂಭದಲ್ಲಿ ಹಳೆಗನ್ನಡ ಶ್ಲೋಕ ಮತ್ತು ಮುಕ್ತಾಯದಲ್ಲಿ ಕುವೆಂಪು ಅವರ ಗೀತೆ ಹಾಡಿ ರಂಜಿಸಿದರು.  

ಪ್ರಾಚಾರ್ಯ ಎಸ್‌.ಐ.ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಿಗರ ಓದಾರ್ಯ ಅತಿಯಾಗಿ ಭಾಷೆಯ ಮಾಧುರ್ಯ ಕಡಿಮೆಯಾಗುತ್ತಿದೆ. ಬೇರೆ ರಾಜ್ಯಗಳಷ್ಟು ಭಾಷಾ ಪ್ರೇಮ ನಮ್ಮ ರಾಜ್ಯದಲ್ಲಿ ವಿರಳವಾಗುತ್ತಿರುವುದು ವಿಷಾದಕರ ಸಂಗತಿ. ರಾಜಧಾನಿಯಲ್ಲಿ, ಗಡಿಯಲ್ಲಿ ಕನ್ನಡದ ಕಂಪು ಹೆಚ್ಚಾಗಬೇಕಿದೆ. ನಮ್ಮದು ತಾಂತ್ರಿಕ ಮಹಾವಿದ್ಯಾಲಯವಾದರೂ ಹತ್ತು ದಿನಗಳ ಕಾಲ ಕನ್ನಡಪರ ನಾನಾ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂಭ್ರಮದಿಂದ ಸಮಾರೋಪಗೊಳಿಸುತ್ತಿದ್ದೇವೆ. ನಮ್ಮಲ್ಲಿ ಕನ್ನಡ ಯಾವಾಗಲೂ ಜೀವಂತವಾಗಿದೆ ಎಂದರು.  

ಕಾಲೇಜಿನ ಕನ್ನಡ ಸಂಘದ ಅಧ್ಯಕ್ಷ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಯು.ಡಿ.ಹಾದಿಮನಿ ಪ್ರಾಸ್ತಾವಿಕ ಮಾತನಾಡಿ, ನಾಡು ಕಟ್ಟಿದವರಿಗೆ, ಭಾಷೆ ಬೆಳೆಸಿದವರಿಗೆ ನಾವು ನ್ಯಾಯ ನೀಡಬೇಕೆಂದರೆ ಭಾಷೆಯನ್ನು ಬಳಸಿ, ಉಳಿಸಿ ಬೆಳೆಸಬೇಕು ಎಂದರು.  

ರಾಜ್ಯೋತ್ಸವ ನಿಮಿತ್ತ ಕರ್ನಾಟಕ ನಕ್ಷೆಯಲ್ಲಿ ಐತಿಹಾಸಕ ಸ್ಥಳ ಗುರುತಿಸುವ, ಎಲೆ ಮತ್ತು ಹೂವಿನ ಚಿತ್ತಾರ ಬಿಡಿಸುವ, ಕನ್ನಡ ನಾಡು ನುಡಿ ಬಿಂಬಿಸುವ ನೃತ್ಯ, ರಸಪ್ರಶ್ನೆ, ಕನ್ನಡ ಗಾಯನ ಸ್ಪರ್ಧೆ, ಡೊಳ್ಳು ಬಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರ ಹೆಸರನ್ನು ಸುಮನ್ ಖೋತ್ ಘೋಷಿಸಿದರು.  

ನಾಡದೇವಿ ಭುವನೇಶ್ವರಿ ಭಾಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪವೃಷ್ಠಿ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪ್ರಾಚಾರ್ಯ, ಉಪನ್ಯಾಸಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಾಮೂಹಿಕವಾಗಿ ನಾಡಗೀತೆ ಹಾಡಿದ್ದು ವಿಶೆಷವಾಗಿತ್ತು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಲಕ್ಷ್ಮೀ ಅಂಗಡಿ ಸ್ವಾಗತಿಸಿದರು. ಮಹಾದೇವಿ ಅಂಬಿ ಪರಿಚಯಿಸಿದರು. ನಿರ್ಮಲಾ ಫಕೀರಪುರ ನಿರೂಪಿಸಿದರು. ಅಂಜನಾ ಮಲಾಜ್ ವಂದಿಸಿದರು. ಸುಭಾಸ್ ಮೂಶಿ, ವಂದನಾ ಪಸಾರ, ಸವಿತಾ ಗೊಂದಿ, ಮಂಜುನಾಥ ಅರಕೇರಿ, ಅಮೀತ ಜಾಧವ, ಚೈತ್ರಾ ಹುದ್ದಾರ, ಸವಿತಾ ಬೀಳಗಿ, ವಿಶಾಲ ಮೆಟಗುಡ, ಈಶ್ವರ ಹೂಲಿ, ಗುರುರಾಜ ಅಥಣಿ ಸೇರಿದಂತೆ ಸಿಬ್ಬಂದಿ ಇದ್ದರು. 


ಸುದ್ದಿ ಓದಿ