2028 ರಲ್ಲಿಯೂ ರಾಜು ಕಾಗೆ ಅವರೇ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ; ಇದರಲ್ಲಿ ಗೊಂದಲ ಬೇಡ: ಬಸನಗೌಡಾ ಪಾಟೀಲ (ಬೊಮ್ಮನಾಳ) ಸ್ಪಷ್ಟನೆ..!
ಕಾಗವಾಡ 13: ವಿಧಾನಸಭಾ ಮತಕ್ಷೇತ್ರದಿಂದ 2028 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ರಾಜು ಕಾಗೆಯವರೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ಖಚಿತ. ಶಾಸಕರಾಗಿ ಆಯ್ಕೆಯಾಗುವುದೂ ಕೂಡಾ ನಿಶ್ಚಿತ. ಇದರಲ್ಲಿ ಯಾವುದೇ ಗೊಂದಲ ಬೇಡ. ಪಂಚಮಸಾಲಿ ಸಮಾಜ ಅವರೊಂದಿಗೆ ಇದೆ ಎಂದು ಪಂಚಮಸಾಲಿ ಮುಖಂಡ ಬಸನಗೌಡ ಪಾಟೀಲ (ಬೊಮ್ಮನಾಳ) ತಿಳಿಸಿದ್ದಾರೆ. ಅವರು ಗುರುವಾರ ದಿ.13 ರಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಈ ಕುರಿತು ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಈಡಾಗಿದ್ದು, ಮುಂದಿನ ಚುನಾವಣೆಯಲ್ಲಿ ರಾಜು ಕಾಗೆ ಸ್ಪರ್ಧಿಸುವುದಿಲ್ಲ. ಬೇರೆಯವರು ಇಲ್ಲಿ ಅಭ್ಯರ್ಥಿಗಳಾಗಲಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಇಲ್ಲಸಲ್ಲದ ಕಪೊಲಕಲ್ಪಿತ ಸುದ್ದಿಗಳು ಹರಿದಾಡುತ್ತಿರುವುದು ಸತ್ಯಕ್ಕೆ ದೂರವಾಗಿದೆ.
2028 ರಲ್ಲಿಯೂ ಕೂಡಾ ಕಾಗವಾಡ ಕ್ಷೇತ್ರದಿಂದ ರಾಜು ಕಾಗೆಯವರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಂತಹ ಊಹಾಪೋಹಗಳಿಗೆ ಕಿವಿಗೊಡಬಾರದು. ರಾಜು ಕಾಗೆ ಅವರು ಈಗಾಗಲೇ ಐದು ಬಾರಿ ಕಾಗವಾಡ ಕ್ಷೇತ್ರದ ಶಾಸಕರಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದಾರೆ. ಇದರಿಂದ ಅವರಿಗೆ ದಿನದಿಂದ ದಿನಕ್ಕೆ ಜನ ಬೆಂಬಲ ಹೆಚ್ಚಾಗುತ್ತಿದೆ. ಮುಂದಿನ ದಿನಮಾನಗಳಲ್ಲಿ ಅವರು ಶಾಸಕರಾಗುವ ಮೂಲಕ ಅಭಿವೃದ್ಧಿಯ ಪರ್ವವನ್ನು ಮುಂದೆವರಿಸಿಕೊಂಡು ಹೋಗಲಿದ್ದಾರೆ. ಕ್ಷೇತ್ರದ ಮತದಾರರು, ಪಂಚಮಸಾಲಿ ಸಮುದಾಯ ಅವರೊಂದಿಗಿದೆ. ಯಾರೂ ಕೂಡಾ ಕ್ಷೇತ್ರದ ಜನರಲ್ಲಿ ಗೊಂದಲು ಸೃಷ್ಟಿಸಬೇಡಿ. ಮುಂದಿನ ಬಾರಿಗೂ ರಾಜು ಕಾಗೆ ಅವರೇ 6 ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುವುದ ಖಚಿತ ಎಂದು ಸ್ಪಷ್ಟ ಪಡಿಸಿದ್ದಾರೆ.