ರಾಷ್ಟ್ರೀಯ

ಕಳೆದ ಡಿಸೆಂಬರ್ ನಲ್ಲಿ ಭಾರತೀಯ ರೈಲ್ವೆಯ ಸರಕು ಸಾಗಣೆ ಆದಾಯ ಶೇ 6.7ರಷ್ಟು ವೃದ್ಧಿ

ಕಳೆದ ಡಿಸೆಂಬರ್ ನಲ್ಲಿ ಭಾರತೀಯ ರೈಲ್ವೆಯ ಸರಕು ಸಾಗಣೆ ಆದಾಯ ಶೇ 6.7ರಷ್ಟು ವೃದ್ಧಿ

ನವದೆಹಲಿ, ಜ 2 : ಭಾರತೀಯ ರೈಲ್ವೆ, ಸರಕು ಸಾಗಣೆಯಿಂದ ಕಳೆದ ಡಿಸೆಂಬರ್ ನಲ್ಲಿ 2019ರ ಇದೇ ಅವಧಿಗೆ ಹೋಲಿಸಿದರೆ ಶೇ 6.7 ರಷ್ಟು ಹೆಚ್ಚು ಆದಾಯ ಗಳಿಸಿದೆ.2020 ರ ಡಿಸೆಂಬರ್ ತಿಂಗಳಲ್ಲಿ ಭಾರತೀಯ ರೈಲ್ವೆ, 118.13 ದಶಲಕ್ಷ ಟನ್ ಸರಕು ಸಾಗಣೆ ಮಾಡಿದ್ದು, 2019ರ ಇದೇ ಅವಧಿಯಲ್ಲಿ 108.84 ದಶಲಕ್ಷ ಟನ್ ಸರಕು ಸಾಗಣೆ ಮಾಡಲಾಗಿತ್ತು.  ಅಂದರೆ, ಸಾಗಣೆ ಪ್ರಮಾಣದಲ್ಲಿ ಶೇ 8.54 ರಷ್ಟು ಹೆಚ್ಚಾಗಿದೆ.

ಸರಕು ಸಾಗಣೆಯಿಂದ ರೈಲ್ವೆ, ಕಳೆದ ಡಿಸೆಂಬರ್ ನಲ್ಲಿ 11788.11 ಕೋಟಿ ರೂ ಆದಾಯ ಗಳಿಸಿದೆ. 2019ರ ಡಿಸೆಂಬರ್ ನ ಇದೇ ಅವಧಿಯಲ್ಲಿ 11030.37 ಕೋಟಿ ರೂ ಆದಾಯ ಗಳಿಸಲಾಗಿತ್ತು. 2020 ರ ಡಿಸೆಂಬರ್ ತಿಂಗಳಲ್ಲಿ ಭಾರತೀಯ ರೈಲ್ವೆ ಸಾಗಣೆ ಮಾಡಿದ 118.13 ಟನ್ ಸರಕು ಪೈಕಿ,  50.67 ದಶಲಕ್ಷ ಟನ್ ಕಲ್ಲಿದ್ದಲು, 15.31 ದಶಲಕ್ಷ ಟನ್ ಕಬ್ಬಿಣದ ಅದಿರು, 6.13 ದಶಲಕ್ಷ ಟನ್ ಆಹಾರ ಧಾನ್ಯಗಳು, 5.23 ದಶಲಕ್ಷ ಟನ್ ರಸಗೊಬ್ಬರ, 4.3 ದಶಲಕ್ಷ ಟನ್ ಖನಿಜ ತೈಲ ಮತ್ತು 7.46 ದಶಲಕ್ಷ ಟನ್ ಸಿಮೆಂಟ್ ಸೇರಿವೆ. ರಸ್ತೆ ಸಾರಿಗೆಗಿಂತ ರೈಲ್ವೆ ಸರಕು ಸಾಗಣೆಯನ್ನು ಹೆಚ್ಚು ಆಕರ್ಷಕವಾಗಿಸಲು  ಭಾರತೀಯ ರೈಲ್ವೆ ಅನೇಕ ವಿನಾಯಿತಿ ಮತ್ತು ರಿಯಾಯಿತಿಗಳನ್ನು ನೀಡಿದೆ.

  


ಸುದ್ದಿ ಓದಿ