ಪ್ರವಾಹದ ವೇಳೆ ಸಮಯಪ್ರಜ್ಞೆ ಮೆರೆದ ಯಲ್ಲಮ್ಮನಗುಡ್ಡದ ಗೃಹರಕ್ಷಕ ಸಿಬ್ಬಂದಿಗೆ ಸಾರ್ವಜನಿಕರ ಮೆಚ್ಚುಗೆ
ಸವದತ್ತಿ 27: ರಾಜ್ಯದ ಪ್ರತಿಷ್ಠಿತ ಎ ಶ್ರೇಣಿಯ ಧಾರ್ಮಿಕ ಕ್ಷೇತ್ರವಾದ ಯಲ್ಲಮ್ಮನಗುಡ್ಡದ ಶ್ರೀ ಯಲ್ಲಮ್ಮ ದೇವಸ್ಥಾನದ ಬಳಿ ಭಾರಿ ಮಳೆ ಹಾಗೂ ಪ್ರವಾಹದ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದ ಗೃಹರಕ್ಷಕ ಸಿಬ್ಬಂದಿಯ ಸಾಹಸ ಮತ್ತು ಸೇವಾ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಕ್ಷೇತ್ರಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕಳೆದ ಆಗಸ್ಟ್ 8, 2025ರಂದು ಸಂಜೆ ಸುಮಾರು 4 ಗಂಟೆಗೆ ಸುರಿದ ಭಾರಿ ಮಳೆಯಿಂದ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಏಕಾಏಕಿ ಪ್ರವಾಹ ಉಂಟಾಗಿತ್ತು. ದರ್ಶನ ಮುಗಿಸಿ ಹೊರಬರುತ್ತಿದ್ದ ಭಕ್ತರು ಪ್ರವಾಹದ ನೀರಿನ ನಡುವೆ ಸಿಲುಕಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅಪಾಯದ ಪರಿಸ್ಥಿತಿಯನ್ನು ಅರಿತ ಪ್ರವಾಸಿ ಮಿತ್ರ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಯಾವುದೇ ವಿಳಂಬವಿಲ್ಲದೆ ಕಾರ್ಯಪ್ರವೃತ್ತರಾದರು. ಮಾನವ ಸರಪಳಿ ರಚಿಸಿ ನೀರಿನಲ್ಲಿ ಸಿಲುಕಿದ್ದ ಭಕ್ತರನ್ನು ಸುರಕ್ಷಿತವಾಗಿ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಿದರು. ಅಲ್ಲದೆ, ಸಂಕಷ್ಟದಲ್ಲಿದ್ದವರಿಗೆ ಪ್ರಥಮ ಚಿಕಿತ್ಸೆ ಹಾಗೂ ಅಗತ್ಯ ಓಷಧೋಪಚಾರ ಒದಗಿಸಿ ಮಾನವೀಯತೆ ಮೆರೆದರು.
ಸಿಬ್ಬಂದಿಯ ಸಮಯಪ್ರಜ್ಞೆ, ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕ ಸೇವೆಯನ್ನು ದೇವಸ್ಥಾನದ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಭಕ್ತರು ಶ್ಲಾಘಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಗೃಹರಕ್ಷಕ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳಾದ ಎಂ.ಎಂ. ಕಿತ್ತೂರು, ಶಿವಾಜಿ ಕರಿಮುಖನವರ, ಗದಿಗಯ್ಯ ಕಂಕಣವಾಡಿ, ಮಹಾದೇವ ಹೊಸೂರ, ಯೋಗೇಶ ವಾಡಕರ, ಉಮೇಶ್ ನಂದಗಿ, ನಾಗರಾಜ ಕರಿಮುಖನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.