ರಾಷ್ಟ್ರೀಯ

ಇಂದು ರಕ್ಷಾಬಂಧನ್ : ರಾಷ್ಟ್ರಪತಿ, ಉಪ ರಾಷ್ಟ್ರಪತಿ ಶುಭ ಹಾರೈಕೆ

ಇಂದು ರಕ್ಷಾಬಂಧನ್ : ರಾಷ್ಟ್ರಪತಿ, ಉಪ ರಾಷ್ಟ್ರಪತಿ ಶುಭ ಹಾರೈಕೆ

  ನವದೆಹಲಿ, ಆಗಸ್ಟ್ 3: ಇಂದು ರಕ್ಷಾ ಬಂಧನ. ಸಹೋದರ, ಸಹೋದರಿಯರ ಬಾಂಧವ್ಯ ಬೆಸೆಯುವ ಮಹತ್ವದ ದಿನ.  

 ಈ ದಿನದಂದು ಸಹೋದರಿಯರು ಪವಿತ್ರ ಪ್ರೀತಿ, ನಂಬಿಕೆಯ ಸಂಕೇತವಾದ ರಕ್ಷಾ ಮಣಿಕಟ್ಟನ್ನು ತನ್ನ ಸಹೋದರರ ಕೈಗಳಿಗೆ ಕಟ್ಟುವುದು ವಾಡಿಕೆ. ಸಹೋದರನನ್ನು ರಕ್ಷಿಸುವ ಸಂಕೇತವಾಗಿ ರಾಖಿ ಕಟ್ಟಿ ಶುಭ ಹಾರೈಸುವುದು ಈ ಹಬ್ಬದ ವಿಶೇಷವಾಗಿದೆ. 

 ಸ್ತ್ರೀಯರನ್ನು  ಗೌರವಿಸುವುದು ಅವರ ಭಾವನೆಗಳನ್ನು ಬಲಗೊಳಿಸುವುದು ಈ ಹಬ್ಬದ ವೈಶಿಷ್ಟ್ಯವಾಗಿದ್ದು, ಸಹೋದರ, ಸಹೋದರಿಯರು ಕೋವಿಡ್ 19 ಸಂದರ್ಭದಲ್ಲಿ ಪರಸ್ಪರ ರಕ್ಷಣೆಗಾಗಿ ಶುಭ ಕೋರಿ ಹಾರೈಸುತ್ತಿರುವುದು ಈ ಬಾರಿಯ ರಕ್ಷಾಬಂಧನ್ ವಿಶೇಷತೆಗಳಲ್ಲಿ ಒಂದಾಗಿದೆ. 

 ಛತ್ತೀಸ್‌ಗಢ ರಾಜ್ಯಪಾಲರಾದ ಅನುಸೂಯ ಉಯಿಕೆ ಅವರು ರಾಜ್ಯದ ಬುಡಕಟ್ಟು ಹಾಗೂ ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಿದ ರಾಖಿಗಳನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗು ಪ್ರಧಾನಮಂತ್ರಿ ಅವರಿಗೆ ರಕ್ಷಾಬಂಧನದ ಅಂಗವಾಗಿ ಕಳುಹಿಸಿಕೊಟ್ಟಿದ್ದಾರೆ. 

 ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಟ್ವೀಟ್ ನಲ್ಲಿ ಮಹಿಳೆಯರ ಘನತೆಯನ್ನು ಗೌರವಿಸಲು ಎಲ್ಲರೂ ಪ್ರತಿಜ್ಞೆ ಸ್ವೀಕರಿಸಬೇಕು. ಇದರಿಂದ   ರಾಷ್ಟ್ರ ಹಾಗೂ ಸಮಾಜಕ್ಕೆ  ಮಹಿಳೆಯರ  ಕೊಡುಗೆ ಇನ್ನಷ್ಟು ಉತ್ತಮವಾಗಿರುತ್ತದೆ ಎಂದು  ಹಾರೈಸಿದ್ದಾರೆ.

  ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಭಾರತ ಸೇರಿದಂತೆ ವಿಶ್ವದಾದ್ಯಂತ  ಸಹೋದರರು ಹಾಗೂ ಸಹೋದರಿಯರ ನಡುವಿನ ಪ್ರೀತಿ  ವಾತ್ಸಲ್ಯವನ್ನು ರಕ್ಷಾಬಂಧನ ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಹೇಳಿದ್ದಾರೆ.

  ಈ ಶುಭದಿನದಂದು  ಸಮಾಜದಲ್ಲಿ ಮಹಿಳೆಯರಿಗೆ ನೀಡಲಾಗುವ ಸಾಂಪ್ರದಾಯಿಕ ಗೌರವವನ್ನು ಎತ್ತಿಹಿಡಿಯೋಣ, ಇದರಿಂದ ಮಹಿಳೆಯರ ನಿಜವಾದ ಸಾಮರ್ಥ್ಯವನ್ನು ತಲುಪಲು ಸಹಕಾರಿಯಾಗಲಿದೆ ಎಂದು ಕರೆ ನೀಡಿರುವ ವೆಂಕಯ್ಯನಾಯ್ಡು ಈ ಹಬ್ಬ ದೇಶಕ್ಕೆ ಶಾಂತಿ, ಅಭಿವೃದ್ಧಿ ತರಲಿ ಎಂದು ಶುಭಾಶಯ ಕೋರಿದ್ದಾರೆ.


ಸುದ್ದಿ ಓದಿ