ಆ.17ರಂದು ವಿವಿಧ ಧಾರ್ಮಿಕ ಆಚರಣೆಗಳಿಗೆ ಚಾಲನೆ
ಮಲ್ಲನಗೌಡ ಪಾಟೀಲ.
ಉಗರಗೋಳ: ಏಳುಕೊಳ್ಳದ ನಾಡು ಯಲ್ಲಮ್ಮನಗುಡ್ಡದಲ್ಲೀಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಶ್ರಾವಣ ಮಾಸದ ಆಚರಣೆಗಾಗಿ ಸಿದ್ಧತೆ ಭರದಿಂದ ಸಾಗಿವೆ. ಆ.17ರಂದು ವಿವಿಧ ಧಾರ್ಮಿಕ ಆಚರಣೆಗಳಿಗೆ ಚಾಲನೆ ಸಿಗಲಿದ್ದು, ತಿಂಗಳಿಡೀ ಭಕ್ತಿಯ ಹೊಳೆಯೇ ಹರಿಯಲಿದೆ.
ಇತ್ತೀಚಿನ ವರ್ಷಗಳಲ್ಲಿ ಯಲ್ಲಮ್ಮನಗುಡ್ಡಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ರಾಜ್ಯ ಸರ್ಕಾರ "ಶಕ್ತಿ" ಯೋಜನೆ ಜಾರಿಗೊಳಿಸಿದ ನಂತರ ಮಹಿಳಾ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ. ಶ್ರಾವಣ ಮಾಸದಲ್ಲಂತೂ ಭಕ್ತರಿಂದ ಯಲ್ಲಮ್ಮನಗುಡ್ಡ ತುಂಬಿ ತುಳುಕಲಿದೆ.
ಬೆಳಿಗ್ಗೆ 4ರಿಂದಲೇ ದೇವಿ ದರ್ಶನ: ಸಾಮಾನ್ಯ ದಿನಗಳಲ್ಲಿ ಯಲ್ಲಮ್ಮ ದೇವಸ್ಥಾನದಲ್ಲಿ ಬೆಳಿಗ್ಗೆ 6 ಗಂಟೆಯ ನಂತರವೇ ಯಲ್ಲಮ್ಮ ದೇವಿ ದರ್ಶನಕ್ಕೆ ಅವಕಾಶ ಕೊಡಲಾಗುತ್ತದೆ. ಆದರೆ, ಶ್ರಾವಣ ಮಾಸದಲ್ಲಿ ರಾತ್ರಿ 2 ಗಂಟೆಗೆ ಪೂಜೆ ಆರಂಭಗೊಳ್ಳುತ್ತದೆ. 4 ಗಂಟೆಗೆ ಪೂಜೆ ಮುಗಿದ ನಂತರ ಭಕ್ತರು ದೇವಿ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.
ಯಲ್ಲಮ್ಮನಗುಡ್ಡದ ಸುತ್ತಲಿನಲ್ಲಿರುವ ಸವದತ್ತಿ ಪಟ್ಟಣ, ಉಗರಗೋಳ, ಹಿರೇಕುಂಬಿ, ಹರ್ಲಾಪುರ, ಚಿಕ್ಕುಂಬಿ, ಕುರವಿನಕೊಪ್ಪ, ಹೂಲಿ, ಯಡ್ರಾವಿ, ಬೆಡಸೂರಿನಿಂದ ಪ್ರತಿದಿನವೂ ಸಾವಿರಾರು ಭಕ್ತರು ಕಾಲ್ನಡಿಗೆ ಮೂಲಕವೇ ನಸುಕಿನ ಜಾವ ಯಲ್ಲಮ್ಮನ ಸಾನ್ನಿಧ್ಯಕ್ಕೆ ಬಂದು ದರ್ಶನ ಪಡೆಯುತ್ತಾರೆ. ದೂರದೂರಿನವರು ಬಸ್, ವಾಹನಗಳಲ್ಲಿ ಬರುತ್ತಾರೆ. ನಸುಕಿನ ಜಾವದಿಂದ ಸಂಜೆಯ ಪೂಜೆಯವರೆಗೆ ಸಾವಿರಾರು ಜನರು ದೇವಿ ದರ್ಶನ ಪಡೆಯುತ್ತಾರೆ.
ಈ ಮಾಸದಲ್ಲಿ ಬಗೆಬಗೆಯ ಪುಷ್ಪಗಳನ್ನು ಬಳಸಿ, ದೇವಿ ಮೂರ್ತಿಗೆ ಅಲಂಕಾರ ಮಾಡಲಾಗುತ್ತದೆ. ದೇವಿ ದರ್ಶನ ಪಡೆದು ಮರಳುವವರಿಗೆ ಪ್ರಸಾದ ವಿತರಿಸಲಾಗುತ್ತದೆ. ಸಂಜೆ ಎಂದಿನಂತೆ ಪೂಜಾ ಕೈಂಕರ್ಯ ನೆರವೇರಿಸಿ, ಮತ್ತೆ ದರ್ಶನಕ್ಕೆ ಅವಕಾಶ ಕೊಡಲಾಗುತ್ತದೆ.
ದೇಶದ ವಿವಿಧೆಡೆ ನೆಲೆಸಿದ ಯಲ್ಲಮ್ಮನ ಭಕ್ತರು, ಶ್ರಾವಣ ಮಾಸದಲ್ಲಿ ತಪ್ಪದೆ ಯಲ್ಲಮ್ಮನಗುಡ್ಡಕ್ಕೆ ಬಂದು ದೇವಿ ದರ್ಶನ ಪಡೆಯುವುದು ವಾಡಿಕೆ. ಅದನ್ನು ಬಹುತೇಕರು ತಪ್ಪದೆ ಪಾಲಿಸುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿದ್ದರಿಂದ ಹಲವರು ವಿವಿಧ ಕಾಣಿಕೆಗಳನ್ನು ಅಪರ್ಿಸುತ್ತಾರೆ. ಗುಡ್ಡದ ವಿಶಾಲವಾದ ಪರಿಸರದಲ್ಲಿ ಒಲೆ ಹೂಡಿ ಅಡುಗೆ ಮಾಡಿ, ಪರಡಿ ತುಂಬಿ ನೈವೇದ್ಯ ಅಪರ್ಿಸುತ್ತಾರೆ.
ಭಕ್ತರಿಗೆ ಸೌಕರ್ಯ ಒದಗಿಸುತ್ತೇವೆ: ಶ್ರಾವಣ ಮಾಸದಲ್ಲಿ ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತರಿಗೆ ಎಲ್ಲ ಮೂಲಸೌಕರ್ಯ ಒದಗಿಸುತ್ತೇವೆ. ಪ್ರತಿದಿನ ದಾಸೋಹದಲ್ಲಿ ಮಹಾಪ್ರಸಾದವ್ಯವಸ್ಥೆ ಇರುತ್ತದೆ. ಈ ತಿಂಗಳಿಡೀ ದಾಸೋಹದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ, ಭಕ್ತರಿಗೆ ಊಟದ ವ್ಯವಸ್ಥೆ ಮಾಡುತ್ತೇವೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ ತಿಸಿಸಿದರು.
ಶ್ರಾವಣ ಮಾಸದಲ್ಲಿ ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತರಿಗೆ ಹುಣ್ಣಿಮೆ ದಿನದಂದು ಭಕ್ತರಿಂದಲೇ ಧಾನ್ಯಗಳು ಹಾಗೂ ಹಣ ಸಂಗ್ರಹಿಸಿ, ಸಾಮೂಹಿಕವಾಗಿ ಪರಡಿ ತುಂಬುವ ಯೋಜನೆ ಹಾಕಿಕೊಂಡಿದ್ದೇವೆ" ಎಂದು ಯಲ್ಲಮ್ಮ ದೇವಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ ಹೇಳಿದರು.
ಶ್ರಾವಣ ಮಾಸದಲ್ಲಿ ಹೆಚ್ಚಿನ ಭಕ್ತರು ಯಲ್ಲಮ್ಮನಗುಡ್ಡಕ್ಕೆ ಹೋಗುತ್ತಾರೆ. ಬೇಡಿಕೆಯಂತೆ ಅವರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ ಹೇಳಿದರು.
**ಶ್ರಾವಣ ಮಾಸದಲ್ಲಿ ಯಲ್ಲಮ್ಮನಗುಡ್ಡದಲ್ಲಿ ಹೆಚ್ಚಿನ ಭದ್ರತೆಗೆ ಒತ್ತು ಕೊಡಲಾಗುವುದು. ಭಕ್ತರ ಚಲನ-ವಲನಗಳ ಮೇಲೆ ನಿಗಾ ಇಡಲಾಗುವುದು
-ಜೆ.ಕರುಣೇಶಗೌಡ, ಸಿಪಿಐ, ಸವದತ್ತಿ
**ಪವಿತ್ರ ಶ್ರಾವಣ ಮಾಸದಲ್ಲಿ ಯಲ್ಲಮ್ಮ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳನ್ನು ಕಣ್ತುಂಬಿಕೊಳ್ಳುವುದೇ ಹಬ್ಬ. ನಾಡಿನ ವಿವಿಧೆಡೆಯಿಂದ ತಂಡೋಪತಂಡವಾಗಿ ಭಕ್ತರು ಬಂದು ಅಮ್ಮನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. 11 ಮಾಸಗಳಲ್ಲಿ ಬೆಳಿಗ್ಗೆ 6ರ ನಂತರ ದೇವಿ ದರ್ಶನ ಪಡೆಯುವುದಕ್ಕೆ ಅವಕಾಶವಿರುತ್ತದೆ. ಆದರೆ, ಈ ಮಾಸದಲ್ಲಷ್ಟೇ ಭ್ರಮ್ಮಿ ಮಹೋರ್ತವದಲ್ಲಿ ದೇವಿ ದರ್ಶನ ಪಡೆಯುವ ಭಾಗ್ಯ ಭಕ್ತರದ್ದು.
-ಏಕನಗೌಡ ಮುದ್ದನಗೌಡ್ರ,
ಯಲ್ಲಮ್ಮ ದೇವಸ್ಥಾನದ ಅರ್ಚಕ.