ನಾವದಗಿ ಗ್ರಾಮಸ್ಥರಿಂದ ಶಾಸಕ ಸೋಮನಗೌಡಗೆ ಸನ್ಮಾನ
ತಾಳಿಕೋಟಿ: ದೇ. ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಾವದಗಿ ಗ್ರಾಮದ ಗ್ರಾಮಸ್ಥರು ಅವರನ್ನು ಸನ್ಮಾನಿಸಿ ಗೌರವಿಸಿದರು. ಮತಕ್ಷೇತ್ರದ ನಾವದಗಿ ಗ್ರಾಮದಲ್ಲಿ ಇತ್ತೀಚಿಗೆ ಸುಮಾರು 9ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ಸಂದರ್ಭದಲ್ಲಿ ಶಾಸಕ ಸೋಮನಗೌಡರಿಗೆ ಈ ಸನ್ಮಾನ ನೀಡಲಾಯಿತು.
ಮುಖಂಡ ಸಂಗನಗೌಡ ಹೆಗರಡ್ಡಿ ಮಾತನಾಡುತ್ತಾ ಶಾಸಕ ಸೋಮನಗೌಡರು ನುಡಿದಂತೆ ನಡೆಯುವ ಶಾಸಕರಾಗಿದ್ದು ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಜನರಿಗೆ ನೀಡಿದ ಭರವಸೆಗಳಲ್ಲಿ ಶೇಕಡಾ ನೂರರಷ್ಟು ಕಾರ್ಯರೂಪಕ್ಕೆ ತಂದಿದ್ದಾರೆ. ಈ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ತರಲು ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ ಇದಕ್ಕೆ ಬೂದಿಹಾಳ-ಪೀರಾಪೂರ ಹಾಗೂ ಮುಳವಾಡ ಏತನೀರಾವರಿ ಹಂತ-3ರ ಯೋಜನೆಗಳೇ ಸಾಕ್ಷಿ. ಸುಮಾರು 2700 ಕೋಟಿ ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ ಅವರೊಬ್ಬ ಅಭಿವೃದ್ಧಿಯ ಹರಿಕಾರರು ಅವರಿಗೆ ಮತ್ತೇ ನಾವೇಲ್ಲರೂ ಸೇರಿ ಆಯ್ಕೆ ಮಾಡಬೇಕಾಗಿದೆ ಎಂದರು.
ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಜಿಲ್ಲೆಯಲ್ಲಿಯೇ ಅತಿಹಿಂದುಳಿದ ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಅನುದಾನ ತಂದು ಕೆಲಸಮಾಡಿದ್ದೇನೆ. ಇದರಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ ನನಗೆ ಕ್ಷೇತ್ರದ ಜನರ ಅಭಿವೃದ್ಧಿ ಮುಖ್ಯವಾಗಿದೆ ನಿಮ್ಮೆಲ್ಲರ ಆಶೀರ್ವಾದ ನನಗೆ ಮತ್ತೇಬೇಕು ಎಂದರು.
ಈ ಸಮಯದಲ್ಲಿ ಮುಖಂಡರಾದ ಪ್ರಶಾಂತ ಹಾವರಗಿ, ರಾಜುಗೌಡ ಇಬ್ರಾಹಿಂಪೂರ(ನಾವದಗಿ), ನಿಂಗನಗೌಡ ಬಿರಾದಾರ(ಗಡಿಸೋಮನಾಳ), ಬಸನಗೌಡ ಬಿರಾದಾರ(ಪೀರಾಪೂರ), ಸಾಹೇಬಗೌಡ ರಾರಡ್ಡಿ, ಸಾಹೇಬಣ್ಣ ಆಲ್ಯಾಳ(ಭಂಟನೂರ), ಶಿವನಗೌಡ ಗೊಟಖಂಡ್ಕಿ, ಸುಭಾಸ ಗುಂಡಕನಾಳ ಮತ್ತಿತರರು ಇದ್ದರು.