ಲೇಖನಗಳು

ಲೈನ್‌ಮನ್ ಹುದ್ದೆಗಳು; ಬೀದಿಗೆ ಬಿದ್ದ ಐಟಿಐ ಅಭ್ಯರ್ಥಿಗಳು

ಲೈನ್‌ಮನ್ ಹುದ್ದೆಗಳು; ಬೀದಿಗೆ ಬಿದ್ದ ಐಟಿಐ ಅಭ್ಯರ್ಥಿಗಳು

        ಸರ್ಕಾರದ ಕೆಲಸ, ಕಾರ್ಯಗಳು ಸುಗಮವಾಗಿ  ನೆರವೇರಲು ಸೂಕ್ತವಾದ ವಿದ್ಯೆ ಪಡೆದ ಅಭ್ಯರ್ಥಿಗಳನ್ನು ಇಲಾಖೆಗಳು ಆಯ್ಕೆ ಮಾಡುವುದು ಬಹುಕಾಲದಿಂದಲೂ ಬಂದಿರುವ ಪದ್ದತಿಯಾಗಿದ್ದು ಇದು ಉದ್ಯೋಗದಾತನ ಬುದ್ದಿವಂತಿಕೆಯೂ ಹೌದು ಹಾಗೂ ಅರ್ಹ ಅಭ್ಯರ್ಥಿಗಳಿಗೆ  ನೀಡುವ ನ್ಯಾಯವೂ ಹೌದು ಎನ್ನಬಹುದು.  ದೇಶಕ್ಕೆ ಸ್ವಾತಂತ್ರ್ಯ ಬಂದ ತರುವಾಯ ನಾಡಿನ ಅಭಿವೃದ್ದಿಗಾಗಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲವನ್ನು  ತೊಡಗಿಸಲು ಸರ್ಕಾರಗಳು ಸಾಂಪ್ರದಾಯಕ ಶಿಕ್ಷಣದೊಂದಿಗೆ ಹಲವಾರು ತಾಂತ್ರಿಕ, ವೈದ್ಯಕೀಯ ವೃತ್ತಿಪರ ಕೋರ್ಸುಗಳನ್ನು ಜಾರಿಗೆ ತಂದು ಉದ್ಯೋಗಗಳನ್ನು ನೀಡುತ್ತ ಬಂದಿವೆ. ಜತೆಗೆ ಪ್ರತಿಯೊಂದು ಹುದ್ದೆಗೂ ಒಂದೊಂದು ವಿದ್ಯೆಯನ್ನು ನಿಗದಿಪಡಿಸಿವೆ; ಕಾಲಕಾಲಕ್ಕೆ ಹುದ್ದೆಗಳ ವಿದ್ಯಾಮಟ್ಟವನ್ನು ಹೆಚ್ಚಿಸುತ್ತ ಬಂದಿವೆ. ಅದರಂತೆ ಈಗ  ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ  ಹಿಂದಿನ ಎಸ್ಸೆಸ್ಸೆಲ್ಸಿ ಬದಲಿಗೆ  ಪಿಯುಸಿಯನ್ನು ನಿಗದಿ ಮಾಡಲಾಗಿದೆ.  ಪ್ರಸ್ತುತ ದೇಶದ ತುಂಬೆಲ್ಲ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳಿಗೆ 'ಡಿ' ದರ್ಜೆ ಹುದ್ದೆಗಳನ್ನು ಕೊಡಲಾಗುತ್ತಿದ್ದರೂ ಕೆಪಿಟಿಸಿಎಲ್ ಮಾತ್ರ ಜ್ಯೂನಿಯರ್ ಪವರ್‌ಮ್ಯಾನ್(ಜೆಪಿಎಂ) ಹಾಗೂ ಜ್ಯೂನಿಯರ್ ಸ್ಟೇಷನ್ ಅಟೆಂಡೆಂಟ್(ಜೆಎಸ್‌ಎ) ಎಂಬ "ಸಿ" ದರ್ಜೆ ಹುದ್ದೆಗಳನ್ನು ನೀಡುತ್ತಿರುವುದು ವಿಪರ್ಯಾಸವಾಗಿದೆ.  

      ರಾಜ್ಯ ವಿದ್ಯುತ್ ನಿಗಮಗಳ ಈ ಕ್ರಮ ಐಟಿಐ, ಐಟಿಸಿ ಅಭ್ಯರ್ಥಿಗಳನ್ನು ಚಿಂತಾಕ್ರಾಂತರನ್ನಾಗಿಸಿದೆ.   ಅಲ್ಲದೇ ವೃತ್ತಿಪರ ಐಟಿಐ ಶಿಕ್ಷಣದ ಧ್ಯೇಯೋದ್ದೇಶಗಳನ್ನು ಅಣಕಿಸುವಂತಿದೆ. ಏಕೆಂದರೆ  2006ರಲ್ಲಿ ಅಸಿಷ್ಟಂಟ್ ಲೈನ್‌ಮನ್ ಹಾಗೂ ಅಸಿಷ್ಟಂಟ್ ಸ್ಟೇಶನ್ ಅಟೆಂಡೆಂಟ್ ಎನ್ನುವ ಹುದ್ದೆಗಳನ್ನು ಐಟಿಐ ಅಭ್ಯರ್ಥಿಗಳಿಗೆ ನೀಡಲು ನೇಮಕಾತಿ ನಿಯಮಗಳನ್ನು ರೂಪಿಸಲಾಯಿತು. ತದನಂತರ ಅಧಿಸೂಚನೆ ಹೊರಡಿಸಿ 2007 ರಿಂದ 2015ರವರೆಗೂ ಇವರ ನೇಮಕಾತಿಗಳನ್ನು ಎಡಬಿಡದೇ ನಡೆಸಲಾಯಿತು.  ಅಭ್ಯರ್ಥಿಗಳ ಆಯ್ಕೆಗೆ ಪ್ರಮುಖವಾಗಿ ಐಟಿಐ ಅಂಕಗಳ ಜೇಷ್ಠತೆಯೇ ಮಾನದಂಡವಾಗಿತ್ತು. ಹಾಗಾಗಿ ಇದುವೇ ಮುಂದೆ ಅನಾರೋಗ್ಯಕರ ಪೈಪೋಟಿಗೆ ಕಾರಣವಾಯಿತು.  ಪರಿಣಾಮವಾಗಿ 2014ರ ನೇಮಕಾತಿ ಪಟ್ಟಿ ನೋಡಿದರೆ ಕೆಲವೇ ಕೆಲವು ಜಿಲ್ಲೆಗಳ ಅಭ್ಯರ್ಥಿಗಳು ಆಯ್ಕೆಯಾಗಿದ್ದರು!  ಅದು ಅಂದಿನ ಇಂಧನ ಸಚಿವರಾದ ಡಿ.ಕೆ.ಶಿವಕುಮಾರರವರ ಕೆಂಗಣ್ಣಿಗೂ ಗುರಿಯಾಯಿತು. ಇದು ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಿದೆ ಎಂದು ಸಚಿವರು ತಮ್ಮ ಅಸಮಾಧಾನ ಹೊರಹಾಕಿದರು. ಆದರೆ ಸಚಿವರ ಕೋಪ ಶಮನ ಮಾಡುವಂಥ ಆಧುನಿಕ ಸ್ಪರ್ಧಾತ್ಮಕ  ಪರೀಕ್ಷೆಯ ಎಂಬ ಸುಧಾರಣೆ ಮಾರ್ಗವಿದ್ದರೂ ಅದನ್ನು ಕೈಬಿಟ್ಟು ಸಮಾಧಿ ಮಾರ್ಗ ಹಿಡಿದಿರುವುದು ದುರದೃಷ್ಟಕರವಾಗಿದೆ!  

               ಹೇಗೆಂದರೆ ರಾಜ್ಯ ಸರಕಾರ 2015ರ ನವಂಬರ್‌ನಲ್ಲಿ ವಿವಿಧ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿದಂತೆ ಡಾ, ಪಿ.ಸಿ.ಹೋಟಾ ಸಮಿತಿ ವರದಿಯನ್ನು ಜಾರಿಗೆ ತಂದಿತ್ತು. ಅದರಂತೆ ಅಂದಿನ ಇಂಧನ ಇಲಾಖೆ ಸಚಿವರು ಕ್ರಮ ಕೈಗೊಂಡಿದ್ದರೆ, ಸರ್ಕಾರಿ ಹಾಗೂ ಖಾಸಗಿ ಐಟಿಐ ಅಭ್ಯರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತಿತ್ತು. ಅಲ್ಲದೇ ಐಟಿಐ ಅಭ್ಯರ್ಥಿಗಳ ನೇಮಕಾತಿಗಳು ಸುಗಮವಾಗಿ ಮುಂದುವರೆಯುತ್ತಿದ್ದವು. ಈ ನಡುವೆ ರಾಜ್ಯ ಸಾರಿಗೆ ಇಲಾಖೆಯು ಇಂಧನ ಇಲಾಖೆಗೆ ಮಾದರಿ ಅನ್ನುವಂತೆ ಅದೇ ವರ್ಷದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಐಟಿಐ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವುದನ್ನು ಮುಂದುವರೆಸಿತು.  ಕಳೆದ 5ದಶಕದಿಂದ ಇಲ್ಲಿ ತಾಂತ್ರಿಕ ಸಹಾಯಕ ಎಂಬ ಹುದ್ದೆಗಳಿದ್ದು ಅವುಗಳ ನೇಮಕಾತಿಗೆ ಮೊದಲು   ಐಟಿಐ  ಅಂಕಗಳನ್ನು ಮತ್ತು ಸಂದರ್ಶನ ಸಮಿತಿ ನೀಡುವ ಅಂಕಗಳನ್ನು ಸೇರಿಸಿ ನೇಮಕಾತಿ ಮಾಡಲಾಗುತ್ತಿತ್ತು. ಆದರೆ ಹೂಟಾ ಸಮಿತಿ ವರದಿಯಂತೆ  2015ರ ನಂತರದಲ್ಲಿ ಸಂದರ್ಶನ ಸಮಿತಿ ಅಂಕಗಳಿಗೆ ಬ್ರೇಕ್ ಹಾಕಿ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ  ಪಡೆಯುವ ಅಂಕಗಳ ಮೇರೆಗೆ ನೇಮಕಾತಿಗಳನ್ನು ಚಾಲ್ತಿಗೆ ತಂದಿತು.         

                  ಆದರೆ ಅಂದಿನ ಇಂಧನ ಸಚಿವರಾದ ಡಿ.ಕೆ.ಶಿವಕುಮಾರ ರವರ ಅಣತಿಯಂತೆ ಕೆಪಿಟಿಸಿಎಲ್ ಜ್ಯೂನಿಯರ್ ಲೈನ್‌ಮನ್ ಹಾಗೂ ಜ್ಯೂನಿಯರ್ ಸ್ಟೇಷನ್ ಅಟೆಂಡೆಂಟ್ ಎಂಬ ಹೊಸ ಹುದ್ದೆಗಳನ್ನು ಸೃಜಿಸಿ ಎಸ್ಸ್ಸೆಸ್ಸೆಲ್ಸಿ ವಿದ್ಯೆಯನ್ನೇ ಅರ್ಹತೆಯೆಂದು ನಿರ್ಧರಿಸಿ ನೇಮಕಾತಿ ನಿಯಮಗಳನ್ನು ರೂಪಿಸಿತು. 2015 ರಿಂದ 2018ರವರೆಗೆ ಈ ಹುದ್ದೆಗಳಿಗೆ 5-6ಬಾರಿ ಅರ್ಜಿ ಕರೆದು 3ವರ್ಷದ ತರಬೇತಿ ಕರಾರಿನ ಮೇಲೆ ಎಸ್ಸೆಸ್ಸೆಲ್ಸಿ  ಅಭ್ಯರ್ಥಿಗಳನ್ನು ಸಾವಿರಾರು ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡು ಐಟಿಐ ಅಭ್ಯರ್ಥಿಗಳನ್ನು ಮೂಲೆಗುಂಪು ಮಾಡಿತು. ಇನ್ನು ಈ ಹುದ್ದೆಗಳ ಕೆಲಸ, ಕಾರ್ಯಗಳನ್ನು ನೋಡಿ ಹೇಳುವುದಾದರೆ, ಇವುಗಳು ಕೂಡ ತಾಂತ್ರಿಕ ಹುದ್ದೆಗಳಾಗಿದ್ದು, ಇವುಗಳಿಗೆ ಕೂಡ ಅಭ್ಯರ್ಥಿಗಳು ವೃತ್ತಿಪರ ಜ್ಞಾನ ಹಾಗೂ ಕೌಶಲ್ಯವನ್ನು ಹೊಂದಿರಬೇಕಾಗುತ್ತದೆ.  ಆದಾಗ್ಯೂ ಹೈವೋಲ್ಟೇಜ್‌ನಿಂದ ಕೂಡಿದ ಪ್ರಾಣಾಪಾಯದ ವಿದ್ಯುತ್ ಜಾಲಗಳ ನಿರ್ವಹಣೆಗೆ ಎಸ್ಸೆಸ್ಸೆಲ್ಸಿ  ಅಭ್ಯರ್ಥಿಗಳನ್ನು ಕಳಿಸುವುದು ಸರಿಯಲ್ಲವೆಂದು ಯಾರಿಗೂ ಅನ್ನಿಸಲೇ ಇಲ್ಲ.  ಅದೆಷ್ಟೋ ಅಭ್ಯರ್ಥಿಗಳು ಕೆಲಸಕ್ಕೆ ಸೇರಿ ಜೀವ ಕಳೆದುಕೊಂಡರು. ಅನೇಕರು ಅಂಗವಿಕಲರಾದರು. ಅದಕ್ಕೆಲ್ಲ ಕಾರಣ ಅವರಿಗೆ ಸರಿಯಾದ ತರಬೇತಿ ನೀಡದೇ ನೇರವಾಗಿ ವಿದ್ಯುತ್ ಕೆಲಸ ಕಾರ್ಯಗಳಲ್ಲಿ ತೊಡಗಿಸಿರುವುದೇ ಆಗಿದೆ. ಇನ್ನು ವಿದ್ಯುತ್ ನಿಗಮಗಳೇ 3ವರ್ಷ ತರಬೇತಿ ನೀಡಿ ನೇಮಕಾತಿ ಮಾಡುವುದಾದರೆ, ಸರ್ಕಾರವೇ ತೆರೆದಿರುವ 260 ಐಟಿಐ ಸಂಸ್ಥೆಗಳು, 196 ಅನುದಾನಿತ ಸಂಸ್ಥೆಗಳು ಹಾಗೂ 1030 ಖಾಸಗಿ ಐಟಿಐ ಸಂಸ್ಥೆಗಳು ಯಾಕೆ ಬೇಕು? ಸರ್ಕಾರ ತನ್ನ ಐಟಿಐಗಳಿಗಾಗಿ ಕೋಟ್ಯಾಂತರ ರೂ. ಯಾಕೆ ಖರ್ಚು ಮಾಡಬೇಕು?  ರಾಜ್ಯದ ವಿದ್ಯುತ್ ನಿಗಮಗಳು ಇವುಗಳ ಉಪಯುಕ್ತತೆಯನ್ನು ಪಡೆಯದಿದ್ದರೆ ಹೇಗೆ? ಎಂಬ ಪ್ರಶ್ನೆಗಳಿಗೆ ಸರ್ಕಾರವೇ ಉತ್ತರ ಹೇಳಬೇಕು.  

                      ಇನ್ನು ರಾಜ್ಯದಲ್ಲಿ ಐಟಿಐ ಅಭ್ಯರ್ಥಿಗಳ ಕೊರತೆ ಇದ್ದರೆ, ಈ ನಿಗಮಗಳು ಯಾರನ್ನಾದರೂ ನೇಮಕ ಮಾಡಿಕೊಳ್ಳಲಿ. ಈ ನಿಗಮಗಳಿಗೆ ಬೇಕಾಗುವ ಐಟಿಐ ಇಲೇಕ್ಟ್ರೀಷಿಯನ್ ಅಭ್ಯರ್ಥಿಗಳು ಪ್ರತಿವರ್ಷ ಸರಾಸರಿ 18ಸಾವಿರದಂತೆ ರಾಜ್ಯದ ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಕೌಶಲ್ಯ ತರಬೇತಿ ಯೋಜನೆಯ (ಸಿಟಿಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹೊರಬರುತ್ತಾರೆ. ಕಳೆದ 10ವರ್ಷದಲ್ಲಿ ಇವರ ಸಂಖ್ಯೆ ಸುಮಾರು 1.86ಲಕ್ಷವನ್ನೂ ದಾಟಿದೆ.  ಆದರೆ ಇದೇ ಅವಧಿಯಲ್ಲಿ  ಸುಮಾರು 18ಸಾವಿರ ಜೆಪಿಎ, ಜೆಎಸ್‌ಎ ಹುದ್ದೆಗಳಿಗಾಗಿ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ! ಇದೇ ಅವಧಿಯಲ್ಲಿ ಐಟಿಐ ಅಭ್ಯರ್ಥಿಗಳಿಗೆ ಒಂದು ಬಾರಿಯೂ ಅರ್ಜಿಯನ್ನೇ ಕರೆದಿರುವದಿಲ್ಲ!  ಯಾರಾದರೂ ಈ ಬಗ್ಗೆ ಕೇಳಿದರೆ, ಹುದ್ದೆಗಳು ಸದ್ಯಕ್ಕೆ ಖಾಲಿಯಿಲ್ಲವೆಂದು ಸಬೂಬು ಹೇಳುವುದು ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಇನ್ನು ಇದೇ ರೀತಿ ಕೆಇಬಿ/ಕೆಪಿಟಿಸಿಎಲ್‌ದಿಂದ  3ವರ್ಷಗಳ ಲೈನ್‌ಮನ್‌/ಇಲೇಕ್ಟ್ರೀಷಿಯನ್ ವೃತ್ತಿಯಲ್ಲಿ ತರಬೇತಿ ಪಡೆದು ಎಟಿಎಸ್ ಪರೀಕ್ಷೆ ಪಾಸಾಗಿರುವ ಸುಮಾರು 3ಸಾವಿರದಷ್ಟು ಅಭ್ಯರ್ಥಿಗಳು ಇದ್ದು ಇವರನ್ನೂ ಕಳೆದ 10ವರ್ಷದಿಂದ ನೇಮಕಾತಿ ಮಾಡಿಕೊಳ್ಳದೇ ನಿರುದ್ಯೋಗಿಯಾಗಿ ಕೂಡ್ರಿಸಲಾಗಿದೆ.  

                     ಇನ್ನು ಲೈನ್‌ಮನ್ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳು ಅರ್ಹರಲ್ಲವೆಂದು ಜನಸಾಮಾನ್ಯರಿಗೂ ಅರ್ಥವಾಗುತ್ತದೆ.  ಆದರೆ ಕೆಪಿಟಿಸಿಎಲ್‌ಗೆ ಇದು ಅರ್ಥವಾಗದಿರುವುದು ಆತ್ಮವಂಚನೆಯೇ ಸರಿ ಎನ್ನಬಹುದು. ಏಕೆಂದರೆ ಎಸ್ಸೆಸ್ಸೆಲ್ಸಿ ಶಿಕ್ಷಣವು ಸಾಮಾನ್ಯ ಶಿಕ್ಷಣವಾಗಿದ್ದು ಎಲ್ಲರೂ ಓದಿರುವಂಥದ್ದಾಗಿದೆ. ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ನಂತರ ಯುವಕರು ಪಿಯುಸಿ, ಡಿಗ್ರೀ, ಪಿಜಿಡಿಗ್ರೀ, ಪಿಎಚ್‌ಡಿ ಅಂತ ಮುಂದೆ ವ್ಯಾಸಂಗ ಮಾಡುವವರೇ ಹೆಚ್ಚು.  ಆದರೆ ಐಟಿಐ ಅಭ್ಯರ್ಥಿಗಳು ಹಾಗಲ್ಲ. ಇವರು ತರಬೇತಿ ಪೂರೈಸಿದ ನಂತರದಲ್ಲಿ  ಉದ್ಯೋಗ ಹಿಡಿಯುವವರೇ ಹೆಚ್ಚು. ಹೀಗಿದ್ದೂ ತಯಾರಿ ಇದ್ದ ಐಟಿಐ ಅಭ್ಯರ್ಥಿಗಳನ್ನು ಕಡೆಗಣಿಸಿ ಕೆಪಿಟಿಸಿಎಲ್ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳಿಗೆ ಮಣೆ ಹಾಕುತ್ತಿರುವುದು ವಿಪರ್ಯಾಸವಾಗಿದೆ. ಇಂಥ ಅಸಂಬಂಧ ನೇಮಕಾತಿಗಳು ನಡೆಯುತ್ತಿದ್ದರೂ  ಇಂಧನ ಸಚಿವ ಕೆ.ಜೆ ಜಾರ್ಜ್‌,  ಕೌಶಲ್ಯಾಭಿವೃದ್ದಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಇವೆಲ್ಲ ತಮಗೆ ಸಂಬಂಧವೇ ಇಲ್ಲದಂತೆ ಕರುಡರಾಗಿ ಇದ್ದಾರೆ.   ಇಂಧನ ಸಚಿವರ ದೃಷ್ಟಿಯಲ್ಲಿ ಈ ಲೈನ್‌ಮನ್ ಹುದ್ದೆಗಳು  "ಡಿ" ಗ್ರೂಫ್ ಹುದ್ದೆಗಳಂತೆ, ಅವುಗಳಿಗೆ ಐಟಿಐ ತರಬೇತಿಯ ಅವಶ್ಯಕತೆಯೇ ಇಲ್ಲವೆಂದು ಹೇಳಿಕೆ ನೀಡಿದ್ದಾರೆ. ಆದರೆ ಆಶ್ಚರ್ಯವೆಂದರೆ ದೇಶದ ಉಳಿದ ಯಾವ ರಾಜ್ಯದಲ್ಲಿಯೂ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳನ್ನು ಲೈನ್‌ಮನ್ ಹುದ್ದೆಗೆ ತೆಗೆದುಕೊಳ್ಳುತ್ತಿಲ್ಲ. ಉದಾಹರಣೆಯಾಗಿ ತೆಲಂಗಾಣ, ಆಂದ್ರ​‍್ರದೇಶ, ಕೇರಳ, ಮಹಾರಾಷ್ಟ್ರ, ಪಂಜಾಬ,  ಓಡಿಸ್ಸಾ ಮಂತಾದ ರಾಜ್ಯಗಳಲ್ಲಿ 2ವರ್ಷದ ಐಟಿಐ ಇಲೇಕ್ಟ್ರೀಷಿಯನ್‌/ವೈರ್‌ಮ್ಯಾನ್ ಟ್ರೇಡ್‌ನ ಅಭ್ಯರ್ಥಿಗಳನ್ನು ಅರ್ಹರೆಂದು ಪರಿಗಣಿಸಿ ನೇಮಕಾತಿ ಮಾಡಲಾಗುತ್ತಿದೆ.

                      ಇದನ್ನೆಲ್ಲ ನೋಡಿದರೆ ಕೆಪಿಟಿಸಿಎಲ್ ಹಾಗೂ ಎಸ್ಕಾಂಗಳು ನಡೆಸುವ ಈ ಜೆಪಿಎಂ, ಜೆಎಸ್‌ಎ ಹುದ್ದೆಗಳ ನೇಮಕಾತಿಗಳಲ್ಲಿ  ಏನೋ ಷಡ್ಯಂತ್ರ ಇದ್ದಂತೆ ಭಾಸವಾಗುತ್ತದೆ; ಅದೇನೆಂದರೆ, ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳು ನಿವೃತ್ತಿ ವಯಸ್ಸಲ್ಲಿ ಮೀಟರ್‌ರೀಡರ್ ತನಕ ಬಂದು ನಿವೃತ್ತಿಯಾದರೆ, ಐಟಿಐದವರು ಜೆಇ, ಎಇ ತನಕ ಬಂದು ನಿವೃತ್ತಿಯಾಗುವರು ಎಂದು  ಹೇಳಲಾಗುತ್ತಿದೆ. ಹಾಗಾಗಿ ಕೆಲವು ಇಂಜನೀಯರ್‌ಗಳ ಹುನ್ನಾರ ಏನೆಂದರೆ, ತಮ್ಮ ಬಡ್ತಿಗೆ ಅಡ್ಡಿಯಾಗುತ್ತಾರೆಂದು,  ಐಟಿಐದವರ ಕೈಕೆಳಗೆ ಕೆಲಸ ಮಾಡುವ ಪ್ರಸಂಗಗಳು ಬರಬಾರದೆಂದು ಇವರ ನೇಮಕಾತಿಗಳನ್ನೇ ಸ್ಥಗಿತಗೊಳಿಸಿದ್ದಾರೆ. ಜತೆಗೆ ನೇಮಕಾತಿ ನಿಯಮಗಳಿಗೆ 2022ರಲ್ಲಿ ತಿದ್ದುಪಡಿ ತಂದು ಶೇ. 50ರಷ್ಟಿದ್ದ ಇವರ ಹುದ್ದೆಗಳ ಪ್ರಮಾಣವನ್ನು ಶೇ.20ಕ್ಕೆ ಇಳಿಸಿದ್ದಾರೆ. ಇನ್ನು ಈ ಜೆಎಲ್‌ಎಂ, ಜೆಎಸ್‌ಎ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೇ ಬರೀ ಅಂಕಗಳ ಮೇಲೆ ನೇಮಕಾತಿಗಳು ನಡೆಸುತ್ತಿರುವುದರಿಂದ  ಈ ನಿಗಮಗಳ ಕೆಲವು ಅಧಿಕಾರಿಗಳು ತಮ್ಮ ಪ್ರಭಾವ ಬೀರಿ  ಉನ್ನತ ಶಿಕ್ಷಣ ಪಡೆದ ತಮ್ಮ ಮಕ್ಕಳನ್ನು, ಸಂಬಂಧಿಗಳನ್ನು ಸಲೀಸಾಗಿ ನೇಮಕಗೊಳಿಸಲು ಇದನ್ನೊಂದು ಉದ್ಯೋಗ ಖಾತ್ರಿ ಯೋಜನೆಯಂತೆ ಬಳಸುತ್ತಿದ್ದಾರೆಂದು ಹೇಳಲಾಗುತ್ತದೆ. ಅಲ್ಲದೇ ನೇಮಕಗೊಂಡ ಅಭ್ಯರ್ಥಿಗಳು 8-10 ವರ್ಷದಲ್ಲಿಯೇ ತಮ್ಮ ಉನ್ನತ ವ್ಯಾಸಂಗದ ಪ್ರಮಾಣ ಪತ್ರಗಳನ್ನು ಹಾಜರುಪಡಿಸಿ ಎಸ್‌.ಓ, ಎಓ, ಎಇ ಇತ್ಯಾದಿ ಹುದ್ದೆಗಳನ್ನು ಪ್ರಭಾರಿಯಾಗಿ ಅಲಂಕರಿಸಿದವರು ಇಲ್ಲಿದ್ದಾರೆ.  

                  ಒಟ್ಟಾರೆಯಾಗಿ ಕೆಪಿಟಿಸಿಎಲ್ ನೇಮಕಾತಿ  ನಿಯಮಗಳು ಐಟಿಐದವರ ಪಾಲಿಗೆ ಘೋರ ಅನ್ಯಾಯದಿಂದ ಕೂಡಿವೆಯೆಂದು  ಘಂಟಾಘೋಷವಾಗಿ ಹೇಳಬಹುದು. ಹೇಗೆಂದರೆ ಈ ಜೆಎಲ್‌ಎಂ, ಜೆಎಸ್‌ಎ ಹುದ್ದೆಗಳಿಗೆ ಈ ಎಸ್ಸೆಸ್ಸೆಲ್ಸೀ ಅಭ್ಯರ್ಥಿಗಳು 3ವರ್ಷ ತರಬೇತಿ ಪಡೆದರೂ ಅರ್ಹರಾಗುವುದಿಲ್ಲ. ಏನಿದ್ದರೂ 2ವರ್ಷದ ಐಟಿಐ ಇಲೇಕ್ಟ್ರೀಷಿಯನ್‌/ಲೈನ್‌ಮನ್‌/ವೈರ್‌ಮನ್ ಅಭ್ಯರ್ಥಿಗಳು  ಅರ್ಹರಾಗುವರು. ಹಾಗೆ ನೋಡಿದರೆ,  ಎಎಲ್‌ಎಂ, ಎಎಸ್‌ಎ ಹುದ್ದೆಗಳಿಗೆ 2ವರ್ಷದ ಐಟಿಐ ಅಭ್ಯರ್ಥಿಗಳು ಸಹ  ಸೂಕ್ತರಲ್ಲ. ಇವರ ಬದಲಿಗೆ 3ವರ್ಷದ ಇಲೇಕ್ಟ್ರೀಷಿಯನ್‌/ಲೈನ್‌ಮನ್‌/ವೈರ್‌ಮನ್  ವೃತ್ತಿ ತರಬೇತಿಯ ಅಪ್ರೇಂಟಿಸ್ ಅಭ್ಯರ್ಥಿಗಳು ಮಾತ್ರ ಅರ್ಹರಾಗುವರು. ಆದರೆ  ಆಘಾತಕಾರಿ ಸಂಗತಿಯೆಂದರೆ,  ಕೆಪಿಟಿಸಿಎಲ್ ಇದುವರೆಗೂ ತನ್ನ ನಿಗಮಗಳನ್ನು ಹೊರತುಪಡಿಸಿ ಬೇರೆ ಕಡೆಗೆ ಇಲೇಕ್ಟ್ರೀಕಲ್‌ನಲ್ಲಿ  ಅಪ್ರೇಂಟಿಸ್ ಪಾಸಾದ ಅಭ್ಯರ್ಥಿಗಳನ್ನು ಎಪಿಎಂ ಮತ್ತು ಎಎಸ್‌ಎ ಹುದ್ದೆಗಳಿಗೆ ನೇಮಕಾತಿ  ಮಾಡಿಕೊಂಡಿರುವದಿಲ್ಲ. ಏಕೆಂದರೆ ಇವರಿಗೆ ನೇಮಕಾತಿ ನಿಯಮಗಳನ್ನೇ ರೂಪಿಸಿರುವದಿಲ್ಲ! ಕಳೆದ 2ದಶಕದಿಂದ ಇವರು ವಿದ್ಯುತ್ ನಿಗಮಗಳ ಎಎಲ್‌ಎಂ ಹಾಗೂ ಎಎಸ್‌ಎ ಹುದ್ದೆಗಳಿಂದ ವಂಚಿತರಾಗಿದ್ದಾರೆ! ಕೆಪಿಟಿಸಿಎಲ್‌ನಲ್ಲಿ ಇವರನ್ನು ಹೊರತುಪಡಿಸಿ ಉಳಿದೆಲ್ಲ ತಾಂತ್ರಿಕ ಶಿಕ್ಷಣ ಪಡೆದ ಐಟಿಐ, ಡಿಪ್ಲೋಮಾ, ಬಿಇ ಅಭ್ಯರ್ಥಿಗಳಿಗೆ ಅವರ ವಿದ್ಯೆಗನುಸಾರವಾಗಿ ವಿವಿಧ ತಾಂತ್ರಿಕ ಹುದ್ದೆಗಳನ್ನು ನೀಡಲಾಗಿದೆ.

                     ಆದರೆ ಇವರಿಗೆ ಮಾತ್ರ ಹುದ್ದೆ ನೀಡಿರುವುದಿಲ್ಲ. ಹಾಗಾಗಿ ಇವರಿಗಾದ ಅನ್ಯಾಯವನ್ನು ತುರ್ತಾಗಿ ಸರಿಪಡಿಸಬೇಕಿದೆ. ಇದಕ್ಕೆ ಮಾದರಿ ಎಂಬಂತೆ ನಮ್ಮ ನೆರೆಹೊರೆ ರಾಜ್ಯಗಳಂತೆ ಜ್ಯೂನಿಯರ್ ಲೈನ್‌ಮನ್ ಹುದ್ದೆಗಳಿಗೆ, ಐಟಿಐ ಇಲೇಕ್ಟ್ರೀಷಿಯನ್‌/ವೈರಮ್ಯಾನ್ ಅಭ್ಯರ್ಥಿಗಳನ್ನು ಹಾಗೂ ಅಸಿಷ್ಟಂಟ್ ಲೈನ್‌ಮನ್ ಹುದ್ದೆಗಳಿಗೆ ಇಲೇಕ್ಟ್ರೀಕಲ್ ಅಪ್ರೇಂಟಿಸ್ ಅಭ್ಯರ್ಥಿಗಳನ್ನು ನೇಮಕ ಮಾಡುವುದು ಸೂಕ್ತ. ಇದಕ್ಕೆ ಕೇಂದ್ರ ಸರ್ಕಾರದ ಪಾವರ್‌ಗ್ರೀಡ್ ಕೂಡ ಹೊರತಾಗಿಲ್ಲ. ಇನ್ನು ಮುಖ್ಯವಾಗಿ ಎಲ್ಲ ರಾಜ್ಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿಯೇ ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುತ್ತಿದೆ.  ಅದೇ ಮಾದರಿಯನ್ನು ರಾಜ್ಯದಲ್ಲಿ ಅನುಸರಿಸುವ ತುಂಬಾ ಅವಶ್ಯಕತೆಯಿದೆ. ಹಾಗಾಗಿ ಇನ್ನಾದರೂ ಮುಖ್ಯಮಂತ್ರಿಗಳು ಕೆಪಿಟಿಸಿಎಲ್ ನೇಮಕಗಳ ಅವಾಂತರ ಕುರಿತು ಖುದ್ದಾಗಿ ಗಮನಹರಿಸಿ ಐಟಿಐ ಅಭ್ಯರ್ಥಿಗಳ ಉದ್ಯೋಗದ ಹಕ್ಕನ್ನು ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ.  

                                     - ಲೇಖಕರು ಎಸ್‌.ಎಂ.ನೆರಬೆಂಚಿ ರಾಜ್ಯ ಖಾಸಗಿ ಐಟಿಐಗಳ ಸಂಘದ ಅಧ್ಯಕ್ಷರು 

ವಿಳಾಸ: ಎಸ್‌.ಎಂ.ನೆರಬೆಂಚಿ ಅಧ್ಯಕ್ಷರು,  ಕರ್ನಾಟಕ ರಾಜ್ಯ ಖಾಸಗಿ ಐಟಿಐಗಳ ಸಂಘ (ರಿ), ಹುಬ್ಬಳ್ಳಿ.  

 ವಿಳಾಸ: ಬಸವ ನಿವಾಸ, ವಿದ್ಯಾನಗರ, ಮುದ್ದೇಬಿಹಾಳ-586212 .ಜಿಲ್ಲೆ: ವಿಜಯಪುರ. ಮೋ: 9449612431, 9036075431. 


ಸುದ್ದಿ ಓದಿ