ಸೆ. 30 ವರೆಗೂ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧ
ನವದೆಹಲಿ, ಆಗಸ್ಟ್ 31: ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಕೇಂದ್ರ ಆದೇಶ ಹೊರಡಿಸಲಾಗಿದೆ.
ಈ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೋಮವಾರ ತಿಳಿಸಿದೆ. ಈ ಹಿಂದೆಯೇ ಸರ್ಕಾರದ ವಂದೇ ಭಾರತ್ ಮಿಷನ್ ಮೂಲಕ ಹಾರಾಟ ನಡೆಸುತ್ತಿದ್ದ ವಿಮಾನಗಳು ಎಂದಿನಂತೆ ಸಂಚಾರ ಮಾಡಲಿವೆ.
ಕೊರೊನಾ ಸೋಂಕಿನಿಂದಾಗಿ ಮಾರ್ಚ್ 23ರಂದು ಅಂತಾರಾಷ್ಟ್ರೀಯವ ವಿಮಾನಗಳ ಹಾರಾಟ ನಿಷೇಧಿಸಲಾಗಿತ್ತು.ಈ ಆದೇಶ ಸರಕು ವಿಮಾನಗಳು ಮತ್ತು ವಿಶೇಷ ಅನುಮತಿ ಪಡೆದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
ಮಾರ್ಚ್ 23ರಂದು ಕೊರೋನಾ ಸೋಂಕು ನಿಯಂತ್ಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ನಂತರ ಎಲ್ಲಾ ದೇಶಿಯ ಮತ್ತು ಅಂತಾ ರಾಷ್ಟ್ರೀಯ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು.ಮೇ 25ರಿಂದ ದೇಶಿಯ ವಿಮಾನ ಹಾರಾಟ ಆರಂಭವಾಗಿದೆ. ಆದರೆ ಅಂತಾರಾಷ್ಟ್ರೀಯ ವಿಮಾನ ಹಾರಾಟದ ಮೇಲಿನ ನಿರ್ಬಂಧ ಮುಂದುವರೆದಿದೆ.