ಗದಗ

ಮಹಾತ್ಮರ ಜೀವನ ದರ್ಶನ ಪ್ರವಚನ ಪ್ರಾರಂಭೋತ್ಸವ

ಮಹಾತ್ಮರ ಜೀವನ ದರ್ಶನ ಪ್ರವಚನ ಪ್ರಾರಂಭೋತ್ಸವ

ಗದಗ 19: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರಶರಣರ 28ನೇ ಪುಣ್ಯ ಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಶರಣರ ಮಠದಲ್ಲಿ ಮಹಾತ್ಮರ ಜೀವನ ದರ್ಶನ ಪ್ರವಚನ ಪ್ರಾರಂಭೋತ್ಸವ ಜರುಗಿತು.

 ಸನ್ನಿಧಾನ ವಹಿಸಿದ್ದ ಗದಗ-ರಾಜೂರು-ಅಡ್ನೂರಿನ ಬ್ರಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸಿ ಪ್ರವಚನಕ್ಕೆ ಚಾಲನೆ ನೀಡಿ ಮನುಷ್ಯ ಪ್ರವಚನ ಕೇಳುವುದರ ಮೂಲಕ ಮಹಾತ್ಮರ ಜೀವನದ ಮೌಲಿಕ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಜೀವನದ ಸಾರ್ಥಕತೆ ಹೆಚ್ಚಿಸಿಕೊಳ್ಳಬೇಕು. ನಿಷ್ಕಲ್ಮಷ ಭಕ್ತಿಯನ್ನು ಹೊಂದಿ ಸೇವಾ ಮನೋಭಾವ ಬೆಳೆಸಿಕೊಂಡು ಜೀವನಮಟ್ಟವನ್ನು ಎತ್ತರಿಸಿಕೊಳ್ಳಬೇಕು. ಆ ದಿಸೆಯಲ್ಲಿ ಮಹಾತ್ಮರ ಜೀವನ ದರ್ಶನದ ಸಂದೇಶಗಳು ಪೂರಕವಾಗಿವೆ ಎಂದು ಆಶೀರ್ವಚನ ನೀಡಿದರು. 

ನೇತೃತ್ವ ವಹಿಸಿದ ಶಿವಶಾಂತವೀರಶರಣರು ಆಶೀರ್ವಚನ ನೀಡಿ ಮನುಷ್ಯನ ಜೀವನ ಹಸನಾಗಿಸಲು ಶರಣ, ಶರಣಿಯರ, ಜೀವನದ ಆದರ್ಶ ಜೀವನ ದರ್ಶನ ವಾಗಬೇಕು ಅವರು ನಡೆದ ದಾರಿಯಲ್ಲಿ ನಡೆದು ನಮ್ಮ ಜೀವನವನ್ನು ಹಸನಾಗಿಸಿಕೊಳ್ಳಬೇಕು. ಶ್ರದ್ಧೆ, ನಂಬಿಕೆ ವಿಶ್ವಾಸ, ನಿಷ್ಠೆ, ಏಕತೆ, ಶಾಂತತೆ, ಹೊಂದುವುದರ ಮೂಲಕ ವ್ಯಕ್ತಿತ್ವವನ್ನು ವಿಕಸನಗೊಳಿಸಕೊಳ್ಳಬೇಕು. ಗುರುವಿನ ಉಪದೇಶ, ಶರಣರ, ಸಂತರ, ಅನುಭವವು ಬಾಳಿನ ಬುತ್ತಿಯಾಗಿ ಬೆಳಕಾಗಿ, ಹೊರಹೊಮ್ಮುವುದು. ಯುವಪೀಳಿಗೆ, ಇಂದು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ದೇಶಿ ಸಂಸ್ಕೃತಿಯನ್ನು ಉಳಿಸುವ, ಬೆಳೆಸುವ, ಪ್ರಯತ್ನವನ್ನು ಮಾಡಬೇಕೆಂದು ಮಲ್ಲಾಪೂರ ಗ್ರಾಮದಿಂದ ಆಗಮಿಸಿದ ಶರಣಬುತ್ತಿ ಒಂದು ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ ಎಂದರು. 

ಮುಧೋಳ ರನ್ನಬೆಳಗಲಿಯ ಸಿದ್ಧಾರೂಢಮಠ ಶಿವಯೋಗ ಆಶ್ರಮದ  ಸಿದ್ಧರಾಮ ಶಿವಯೋಗಿ ಸ್ವಾಮಿಗಳಿಂದ ಮಹಾತ್ಮರ ಜೀವನ ದರ್ಶನ ಪ್ರವಚನ ಜರುಗಿತು. ಅವರು ದೊಡ್ಡವರ ಜೀವನದಂತೆ ಅವರು ಹಾಕಿದ ಮಾರ್ಗದಂತೆ ನಡೆಯುವುದು ನಮ್ಮ ಕರ್ತವ್ಯವಾಗಬೇಕು ಎಂದರು. ಮಹಾತ್ಮರ ಬದುಕಿನ ಹೆಜ್ಜೆ ಗುರುತುಗಳು ನಮ್ಮ ಜೀವನದ ಮೈಲುಗಲ್ಲಾಗಳಾಗಬೇಕೆಂದು ಪ್ರವಚನ ನೀಡಿದರು. 

ಹರಳಹಳ್ಳಿ ರಾಜೇಶ್ವರಿಮಠದ ಶ್ರೀ ಶರಣ ಬಸವದೇವರು ಸಮ್ಮುಖ ವಹಿಸಿದ್ದರು. ಅಂಕಲಗಿಯ ಬಸವಲಿಂಗಯ್ಯ ಹಿರೇಮಠ ಅವರಿಂದ ಸಂಗೀತ ಸೇವೆ ಚೌಡಾಪೂರದ ಸುಭಾಸ ತೇಲಿ ಅವರಿಂದ ತಬಲಾಸಾಥ ಜರುಗಿತು. ಮಲ್ಲಾಪೂರ ಗ್ರಾಮದ ಸದ್ಭಕ್ತರಿಂದ ಶಿವಶಾಂತವೀರ ಶರಣರ ತುಲಾಭಾರದ ಭಕ್ತಿ ಸೇವೆ ಜರುಗಿತು. ಬಸವಲಿಂಗಯ್ಯ ಹಿರೇಮಠ ಪ್ರಾರ್ಥಿಸಿದರು, ಎನ್.ಎಸ್.ಕುಂಬಾರ ಸ್ವಾಗತಿಸಿದರು. ಬಿ. ವಾಯ್. ಡೊಳ್ಳಿನ ಕಾರ್ಯಕ್ರಮ ನಿರೂಪಿಸಿದರು. ಶಿವಲಿಂಗಶಾಸ್ತ್ರಿ ಸಿದ್ದಾಪೂರ ವಂದಿಸಿದರು 

ಸುದ್ದಿ ಓದಿ