ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಉದ್ಯೋಗ: ರೈತ ಸಂಘದ ಆಗ್ರಹ
ಪಾಲಬಾವಿ 12: ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ, ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಉದ್ಯೋಗ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಆಗ್ರಹಿಸಿದರು.
ಹಂದಿಗುಂದ ಗ್ರಾಮದಲ್ಲಿ ನಡೆದ ಶ್ರೀ ಇಲಿಜಾರು ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಉಳಿವಿಗಾಗಿ ರೈತ ಸಂಘ ಹಾಗೂ ಹಸಿರುಸೇನೆ ನಿರಂತರ ಹೋರಾಟ ನಡೆಸಲಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಕಬ್ಬು ಹಾಗೂ ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗಳ ಕುರಿತು ಧರಣಿ ಸತ್ಯಾಗ್ರಹ ನಡೆಸಲಾಗುವುದು. ಕಾರ್ಖಾನೆ ಮಾಲೀಕರು ಒಂದು ಟನ್ ಕಬ್ಬಿಗೆ ?5,500 ದರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪಾಲಬಾವಿ ಹಾಗೂ ಗುಳೂರು ಕ್ರಾಸ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಸೇರಿಸಿ ಹೋರಾಟ ನಡೆಸುವ ಕುರಿತು ಪೂರ್ವತಯಾರಿ ನಡೆಯುತ್ತಿದೆ. ರೈತರಿಗೆ ಸಂಪೂರ್ಣ ಬೆಂಬಲ ನೀಡುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕರೆ ನೀಡಿದೆ.
ಕಾರ್ಯಕ್ರಮದಲ್ಲಿ ರೈತ ಸಂಘದ ವಿವಿಧ ಪದಾಧಿಕಾರಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ, ರಾಯಬಾಗ ತಾಲೂಕು ಅಧ್ಯಕ್ಷ ರಮೇಶ ಕಲ್ಯಾಣ, ಮುಧೋಳ ತಾಲೂಕು ಅಧ್ಯಕ್ಷ ಮಹಾಲಿಂಗ ತೇಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.