ತಾಳಿಕೋಟಿ

ಧರಣಿ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ: ನಡಹಳ್ಳಿ

ಧರಣಿ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ: ನಡಹಳ್ಳಿ


ತಾಳಿಕೋಟಿ 16: ಮುದ್ದೇಬಿಹಾಳ, ತಾಳಿಕೋಟಿ ಹಾಗೂ ದೇವರಹಿಪ್ಪರಗಿ ತಾಲೂಕುಗಳು ಸೇರಿದಂತೆ ಇಡೀ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಸೆ.17ರಿಂದ ಮೂರು ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಲು ಹಾಗೂ ಸೆ.21ರಂದು ತಾಳಿಕೋಟಿ ಸಂಪೂರ್ಣ ಬಂದ್ ಆಚರಿಸಲು ನಿರ್ಧರಿಸಲಾಗಿದೆ. ಈ ಹೋರಾಟದ ಯಶಸ್ಸಿಗೆ ಎಲ್ಲ ರೈತರು ಸಹಕರಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು. ಮಂಗಳವಾರ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಜಂಟಿ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಮುದ್ದೇಬಿಹಾಳ ಮತಕ್ಷೇತ್ರದ ಎರಡು ತಾಲೂಕುಗಳು ಹಾಗೂ ದೇವರಹಿಪ್ಪರಗಿ ತಾಲೂಕು ಬರದಿಂದ ಹೆಚ್ಚು ಬಾಧಿತವಾಗಿವೆ. ಸರ್ಕಾರ ಇದುವರೆಗೆ ಬರ ಘೋಷಣೆ ಮಾಡದಿರುವುದು ರೈತರಿಗೆ ಅನ್ಯಾಯವಾಗಿದೆ. ಸರ್ಕಾರದ ಧೋರಣೆ ಖಂಡಿಸಿ ಅನಿವಾರ್ಯವಾಗಿ ಹೋರಾಟ ನಡೆಸಬೇಕಾಗಿದೆ ಎಂದರು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಜಂಟಿ ನೇತೃತ್ವದಲ್ಲಿ ರೈತಪರ ಸಂಘಟನೆಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸೆ.17ರಿಂದ ತಾಳಿಕೋಟಿ ಎಪಿಎಂಸಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು. 


ಸುದ್ದಿ ಓದಿ