ಮಹನೀಯರ ಜಯಂತಿಗಳಲ್ಲಿ ಹುಳುಕುಗಳನ್ನು ಹುಡುಕದಿರಿ: ಸಂಸದ ಉಗ್ರಪ್ಪ
ಬಳ್ಳಾರಿ10: ಹಜರತ್ ಟಿಪ್ಪು ಸುಲ್ತಾನ್ ಸೇರಿದಂತೆ ಮಹನೀಯರ ಜಯಂತಿಗಳಲ್ಲಿ ಯಾವುದೋ ಒಂದು ಕಾರಣಕ್ಕೆ ಹುಳುಕುಗಳನ್ನು ಹುಡುಕುವುದನ್ನು ಬಿಟ್ಟು ಆ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮತ್ತು ನಾಡಿಗೆ ತೋರಿಸಿಕೊಡುವ ನಿಟ್ಟಿನಲ್ಲಿ ಸಹಕರಿಸುವ ಕೆಲಸ ಮಾಡಬೇಕು ಎಂದು ಬಳ್ಳಾರಿ ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪ ಅವರು ಹೇಳಿದರು.
ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ಅವರ ಜಯಂತಿಯನ್ನು ರಾಜಕಾರಣ ಸೇರಿದಂತೆ ಕೆಲ ಕಾರಣಗಳಿಂದ ಕೆಲದುಷ್ಟ ಶಕ್ತಿಗಳು ಸಮಾಜವನ್ನು ಒಡೆದು ಆಳಲು ಪ್ರಯತ್ನಿಸುತ್ತಿದ್ದು,ಇಂತವುಗಳಿಗೆಲ್ಲ ಅಸ್ಪದ ನೀಡದೇ ರಾಷ್ಟ್ರಪ್ರೇಮಿ, ಎಲ್ಲ ಜನಾಂಗಗಳ ಜನರನ್ನು ಪ್ರೀತಿಯಿಂದ ಕಂಡ, ಸರ್ವಧರ್ಮ ಸಮನ್ವಯಕಾರ ಟಿಪ್ಪು ಅವರ ಜಯಂತಿಯನ್ನು ಮನುಕುಲದ ಆಚರಣೆಯನ್ನಾಗಿ ಮಾಡಬೇಕು ಎಂದರು.
ಯಾರು ಕೂಡ ಇದೇ ಜಾತಿ,ಧರ್ಮದಲ್ಲಿ ಹುಟ್ಟಬೇಕು ಎಂದು ಅಜರ್ಿ ಹಾಕಿ ಹುಟ್ಟಿಬರಲ್ಲ ಎಂಬುದನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದ ಉಗ್ರಪ್ಪ ಅವರು, ಜಯಂತಿಗಳನ್ನು ಜಾತಿ,ಧರ್ಮದ ಆಧಾರದಲ್ಲಿ ವಿಂಗಡಿಸದೇ ಮನುಕುಲದ ಅಭಿವೃದ್ಧಿಗಾಗಿ ಮಾಡಬೇಕು ಎಂದರು.
ನನ್ನನ್ನು ಬಳ್ಳಾರಿ ಕ್ಷೇತ್ರದ ಮತದಾರರು ಅಪಾರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದು,ನನ್ನ ಉಸಿರಿರುವವರೆಗೆ ತಮ್ಮ ಸೇವಕನಾಗಿ ಕೆಲಸ ಮಾಡುವುದಾಗಿ ಭಾವುಕರಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿದರು.
ಹಂದ್ಯಾಳು ಸರಕಾರಿ ಪ್ರೌಢಶಾಲೆ ಸಹಶಿಕ್ಷಕ ಸೈಯದ್ ಮೊಹಿನುದೀನ್ ಖಾದ್ರಿ ಅವರು ವಿಶೇಷ ಉಪನ್ಯಾಸ ನೀಡಿದರು.