ಉತ್ಸವ ವಿಶೇಷ

ದೀಪಗಳ ಹಬ್ಬ ದೀಪಾವಳಿ

ದೀಪಗಳ ಹಬ್ಬ ದೀಪಾವಳಿ

- ದೀಪಿಕಾ ಚಾಟೆ

ದೀಪಗಳ ಹಬ್ಬ ದೀಪಾವಳಿ...ಮನೆ ಮನ ಬೆಳಗುವ ಹಬ್ಬ ದೀಪಾವಳಿ....ಕತ್ತಲೆಯನ್ನು ಹೊಡೆದೋಡಿಸುವ ಬೆಳಕಿನ ಹಬ್ಬ ದೀಪಾವಳಿ...ಸಂಬಂಧಗಳನ್ನು ಬೆಸೆದು ಪ್ರೀತಿ ಉಲ್ಲಾಸವನ್ನು ಹರಡುವ ಹಬ್ಬ ದೀಪಾವಳಿ...... 

ದೀಪಾವಳಿ ಬಾಲ್ಯದ ನೆನಪುಗಳನ್ನು ಮೆಲಕು ಹಾಕುವಂತೆ ಮಾಡುತ್ತದೆ.ಹೊಸಬಟ್ಟೆ ,ಪಟಾಕಿಗಳ ಸುರಿಮಳೆ, ವೈವಿಧ್ಯಮಯವಾದ ತಿಂಡಿ ತಿನಿಸುಗಳು, ನೆಂಟರಿಷ್ಟರೊಂದಿಗಿನ ಒಡನಾಟ, ಸಿಹಿ ಹಂಚುವಿಕೆ.....ಮನೆಯ ಮೂಲೆ ಮೂಲೆಯನ್ನು ಝಾಡಿಸುವುದರಿಂದ ಪ್ರಾರಂಭವಾಗುವ ದೀಪಾವಳಿ ಗೋಡೆಗೆ ಬಣ್ಣ ಹಚ್ಚಿ ಶ್ರಂಗರಿಸುವುದು, ಹೊಸಬಟ್ಟೆ ಖರೀದಿಸಿ, ಮನೆಯಲ್ಲೇ ಫರಾಳಗಳನ್ನು ಮಾಡಲು ಪ್ರಾರಂಭಿಸುವುದರಿಂದ ಹಬ್ಬಕ್ಕೆ ಒಳ್ಳೇ  ಕಳೆ ಮೂಡಿದಂತಾಗುವುದು. 

ಧನತ್ರಯೋದಶಿಯಂದು ಬಚ್ಚಲು ಮನೆಯ ಹಂಡೆದೊಲೆಯನ್ನು ಸಾರಿಸಿ ರಂಗೋಲಿ ಹಾಕುವುದು, ತಾಮ್ರದಹಂಡೆಯನ್ನು ಹುಣಸೀಹಣ್ಣು ಉಪ್ಪು ಹಾಕಿ ತಿಕ್ಕಿ ತೊಳೆದು, ಅದಕ್ಕೆ ಕುಂಕುಮ ಗಂಧ ಹಚ್ಚಿ, ಹೂ ಏರಿಸಿ, ತುಪ್ಪದ ದೀಪದಿಂದ ಆರತಿ ಮಾಡುವುದು (ಇತ್ತೀಚೆಗೆ ಬಾಥರೂಂನಲ್ಲಿರುವ ಗೀಜರಕ್ಕೆ ಪೂಜೆ ಮಾಡುವ ಸಂಪ್ರದಾಯ ಪ್ರಾರಂಭವಾಗಿದೆ!) ಹಾಗೇ ನೀರು ತುಂಬಿಡುವ ತೊಟ್ಟಿ, ಬಾವಿಗಳನ್ನೆಲ್ಲ ಪೂಜಿಸಿ ಇಡೀವರ್ಷ ನಮಗೆ ಬಿಸಿ ನೀರು ಕಾಯಿಸಿದ್ದಕ್ಕೆ, ನೀರನ್ನು ಸಂಗ್ರಹಿಸಿಟ್ಟುಕೊಂಡಿದ್ದಕ್ಕೆ ಕೃತಜ್ಞತೆ ಹೇಳುವ ಪರಿ!. 

ನಮ್ಮ ತವರಿನಲ್ಲಿ ದೀಪಾವಳಿ ಹಬ್ಬ ಎಂದರೆ ಒಂದು ಉತ್ಸವ! ಆರತಿ ಮಾಡಿಸಿಕೊಳ್ಳುವ ಹಿಂದಿನ ದಿನ ಎಲ್ಲ ಕಾಕಾಗಳ ಮನೆಗೆ ಹೋಗಿ ಮರುದಿನ ನಸುಕಿನಲ್ಲಿ ಆರತಿ ಮಾಡಿಸಿಕೊಳ್ಳಲು ಬರುವಂತೆ ಕರೆದು ಬರುವ ಕೆಲಸ ನನ್ನದಾಗಿತ್ತು. ನಸುಕಿನಲ್ಲಿ ಬೇಗನೇ ಎದ್ದು ವಿಶಾಲವಾದ ಪಡಸಾಲೆಯಲ್ಲಿ ಹಾಸುಗೆ ಹಾಕಿ, ಹೊಸ ಬಟ್ಟೆ ಧರಿಸಿಸಂಭ್ರಮಿಸುವುದು, ವೇಳೆಗೆ ಬಹು ಮಹತ್ವ ಕೊಡುವ ನಮ್ಮ ತಂದೆಯವರು ತುಂಬ ಶಿಸ್ತಿನವರು. ಎಲ್ಲ ಕಾಕಾ ಹಾಗೂ ಅವರ ಮನೆಯವರು ಬರುವುದು ಐದ್ಹತ್ತು ಮಿನಿಟೂ ವೇಳೆಯಾಗಬಾರದು ಅಷ್ಟು ಕಟ್ಟು ನಿಟ್ಟಿನವರು.ಸರಿಯಾಗಿ ಐದು ವರೆ ಎಂದರೆ ನಮ್ಮ ದೊಡ್ಡ ಕಾಕಾ ಹಾಗೂ ಅವರ ಮಕ್ಕಳು, ರಾವಬಹಾದ್ದೂರ ಕಾಕಾ ಹಾಗೂ ಅವರ ಮಕ್ಕಳು,ಸಣ್ಣ ಕಾಕಾ ಹಾಗೂ ಅವರ ಮಕ್ಕಳು ನಮ್ಮ ಮನೆಯಲ್ಲಿ ಹಾಜರಿರುತ್ತಿದ್ದರು. ನನ್ನ ಮೂರು ಜನ ಅಣ್ಣಂದಿರು, ನಮ್ಮ ತಂದೆ ಹೀಗೆ ಎಲ್ಲರಿಗೂ ಹಣೆಗೆ ಕುಂಕುಮ ಹಚ್ಚಿ, ಆರತಿ ಬೆಳಗುವುದೆಂದರೆ ತುಂಬ ಹರ್ಷದ ಕೆಲಸ. ಅವರೆಲ್ಲ ಧಂಡಿಯಾಗಿ ಆರತಿಯಲ್ಲಿ ದುಡ್ಡೇನೂ ಹಾಕುತ್ತಿರಲಿಲ್ಲ.ಆದರೆ ಅದು ದುಡ್ಡಿನಿಂದ ಅಳೆಯುವ ಕಾಲವಾಗಿರಲಿಲ್ಲ. ಪ್ರೀತಿ ಅಂತಃಕರುಣೆಯನ್ನು ಹಂಚುವ ಕಾಲ ಅದಾಗಿತ್ತು! ಎಲ್ಲರೂ ಸೇರಲು ಒಂದು ನೆಪವಾಗಿತ್ತು!  

ದೀಪಾವಳಿ ಹಬ್ಬ ಬರುವ ತಿಂಗಳು ಮೊದಲೇ ನಮ್ಮ ಸಂಭ್ರಮ ಶುರುವಾಗಿರುತ್ತಿತ್ತು.ಪ್ರತಿಸಲ ಎರಡು ಹೊಸ ಬಟ್ಟೆಗಳು ನಮಗೆ! ಹೊಲಿಯಲು ಹಾಕಿದ ಮೇಲೆ ಪುಕಾಳೆ ಟೇಲರನ ಕಡೆಗೆ  ಮುಂಜಾನೊಮ್ಮೆ ಸಂಜೆಗೊಮ್ಮೆ ಎರಡೆರಡು ಸಲ ಎಡತಾಕುತ್ತಿದ್ದುದ್ದೇ ಎಡತಾಕುತ್ತಿದ್ದದ್ದು!  

            ಫ್ರಾಕಿಗೆ ಎರಡು ಕಡೆ ಕಿಸೆ ಇಡು ಎಂದು ಹೇಳಲಿಕ್ಕೆ, ಕೊರಳು ಈ ಥರ ಬೇಕು,ಮುಂದೆ ಡಿಸೈನ್ ಮಾಡು, ಬಟನ್ ಬೇಡ ಹುಕ್ ಹಚ್ಚು,ಪುಗ್ಗಾ ತೋಳ ಇಡು, ಪ್ಲೇಟ್ ನೀರಿಗೆ ಮಾಡು, ಅಂಬ್ರೆಲ್ಲಾ ತೋಳು ಮಾಡು.....ಹೀಗೇ ಹೋದಾಗೊಮ್ಮೆ ದಿನಾಲೂ ಒಂದೊಂದು ಹೊಸ ಹೊಸ ಪಟ್ಟಿ ಬೆಳೆಯುತ್ತಲೇ ಇರುತ್ತಿತ್ತು! ಆತನಾದರೋ ಶಾಂತಮೂತರ್ಿ! ಹೂಂ ಹೂಂ ಎನ್ನುತ್ತಲೇ ದೀಪಾವಳಿ ಹಿಂದಿನ ದಿನದವವರೆಗೂ ಕೊಡುತ್ತಲೇ ಇರಲಿಲ್ಲ! ಅವತ್ತಂತೂ ನಾವು ಅಂಗಡಿಯಲ್ಲೇ ಠಿಕಾಣಿ ಹೂಡಿ ಫ್ರಾಕುಗಳನ್ನು ತೆಗೆದುಕೊಂಡೇ ಬರುತ್ತಿದ್ದೇವು.ನಮ್ಮ ಅಕ್ಕಂದಿರು ಶಿಸ್ತಾಗಿ ಮನೆಯಲ್ಲೇ ಕುಳಿತಿದ್ದರೂ ಅವರಿಗೆ ಮನೆಗೇ ತಂದು ಕೊಡುತ್ತಿದ್ದ! ಆದರೆ ನಮಗೆ ಅಂಥಾನಂಬಿಕೆ ಅವನ ಮೇಲಿರಲಿಲ್ಲ.ಯಾಕೆಂದರೆ ಒಂದು ಸಲ ನನ್ನ ಫ್ರಾಕಿಗೆ ಎರಡೂ ಕಡೆ ಕಿಸೆ ಹೊಲಿದಿರಲಿಲ್ಲ.ಹೀಗಾಗಿ ಅಲ್ಲೇ ಕುಳಿತೇ ಕಿಸೆ ಹೊಲಿಸಿಕೊಂಡು ಬರಬೇಕಾಯಿತು.ಅವತ್ತಿನಿಂದ ಅವನು ಕೊಡುವವರೆಗೂ ಅವನ ಅಂಗಡಿಯಲ್ಲಿ ಠಾಳಾಯಿಸಿ ಎರಡೂ ಕಡೆಗೆ ಕಿಸಿ ಹೊಲಿದಿದ್ದಾನೋ ಇಲ್ಲವೋ ಚೆಕ್ ಮಾಡಿಯೇ ತೆಗೆದುಕೊಂಡು ಮನೆಗೆ ಬರುತ್ತಿದ್ದೇವು.ಎರಡೂ ಕಡೆಗೆ ಕಿಸೆ ಯಾಕೆಂದರೆ ಒಂದು ತಿಂಗಳಿಗಾಗುವಷ್ಟು ಫರಾಳನ್ನು ಮನೆಯಲ್ಲಿ ಮಾಡಿರುತ್ತಿದ್ದರು.ಎರಡೂ ಕಿಸೆಗಳಲ್ಲಿ ಚಕ್ಕುಲಿ, ಬೇಸನ್ ಲಾಡು, ಶಂಕರಪೋಳೆ, ಚಿರೋಟೆಗಳನ್ನು ತುಂಬಿಕೊಂಡು ಗೆಳತಿಯರಿಗೂ ಹಂಚಿ ತಿನ್ನುವ ಮಜವೇ ಬೇರೆ!  

        ದೀಪಾವಳಿ ಆರತಿಗೆಂದು ನಮ್ಮ ಮನೆಗೆ ಬರುವವರ ಸಂಖ್ಯೆಯೇ ಇಪ್ಪತ್ತು ದಾಟಿರುತ್ತಿತ್ತು.ಆದಿನ ನಮ್ಮ ಮನೆಯಲ್ಲಿಯೇ ಎಲ್ಲರ ಫರಾಳ ಆಗುತ್ತಿತ್ತು.ಅವರೆಲ್ಲ ತಮ್ಮ ಮನೆಗೆ ಹೋಗುತ್ತಿದ್ದದ್ದು ಸಾಯಂಕಾಲವೇ.ಹಾಗೇ ಮರುದಿನ ಇನ್ನೊಬ್ಬ ಕಾಕಾನ ಮನೆಗೆ, ಅದರ ಮರುದಿನ ಮತ್ತೊಬ್ಬ ಕಾಕಾನ ಮನೆಗೆ...ಹೀಗೆ ತುಂಬ ಮಜ, ಉತ್ಸಾಹ, ಹುರುಪು, ಬಾಂಧವ್ಯಗಳನ್ನು ಬಿಗಿಗೊಳಿಸಿ ಅರಳಿಸುವ ಕಾಲವದಾಗಿತ್ತು. ನಮ್ಮಲ್ಲಿ ಯಾವುದೇ ತಾರತಮ್ಯವಿರಲಿಲ್ಲ.ನಮ್ಮ ಅವ್ವನ ಮೇಲೆ ಎಷ್ಟು ಸಲುಗೆ ಇತ್ತೋ ಅಷ್ಟೇ ಸಲುಗೆ ಆ ಕಾಕುಗಳ ಮೇಲೂ ಇತ್ತು.ಅವರ ಮಕ್ಕಳೂ ಅಷ್ಟೇ...ಹಸಿವಾಗಿದ್ದರೆ ಸೀದಾ ಅಡುಗೇ ಮನೆಗೇ ಬಂದು  "ಕಾಕು ಊಟಕ್ಕ ಹಾಕು " ಎಂದು ನಮ್ಮ ಅವ್ವನಿಗೆ ಹೇಳುತ್ತಿದ್ದರು. 

ಮಾತು ಹರಟೆ, ನಗು ಮನೆಯ ಮೂಲೆ ಮೂಲೆಯಲ್ಲೂ ರಿಂಗಣಿಸುತ್ತಿತ್ತು.ಆ ಸಂದರ್ಭದಲ್ಲಿ ಕಲ್ಲೋಳಿಯಿಂದ ಸತ್ಯಕಾಮ ಅವರೂ ಕೂಡ  ನಮ್ಮ ಮನೆಯಲ್ಲೇ ಉಳಿದು ರಾತ್ರಿ ಮೂರು ಗಂಟೆಯವರೆಗೂ ಹರಟೆ ಹೊಡೆಯುತ್ತಿದ್ದರು.ಮಧ್ಯ ಮಧ್ಯ ಚಹಾದ ಸರಬರಾಜು ಇರುತ್ತಿತ್ತು!  ನಮ್ಮ ತಾಯಿಗಂತೂ ಬಿಡುವಿಲ್ಲದ ಕೆಲಸ. ಈಗ ನಿಜವಾಗಿಯೂ ಆಕಾಲ ಎಂಥ ಸಂಭ್ರಮದ ಕಾಲವಾಗಿತ್ತಲ್ಲ ಎಂದೆನಿಸುತ್ತ  ಮನಸ್ಸು ಮೆಲುಕು ಹಾಕುತ್ತಿರುತ್ತದೆ. 

           ಬೆಂಗಳೂರಿನಲ್ಲಿ ಆಕರ್ಿಟೆಕ್ಟ್ ಆಗಿರುವ ನಮ್ಮ ದೊಡ್ಡಾಣ್ಣ ನಂತೂ ಪೆಟ್ಟಿಗೆ ತುಂಬ ಕ್ಯ್ರಾಕರ್ಸ, ಪಟಾಕಿ, ಸರ್ಪದ ಗುಳಿಗೆ, ಸುರಸುರಬತ್ತಿ ಅಂತೆಲ್ಲ ತಂದಿರುತ್ತಿದ್ದ.ಮತ್ತು ಪ್ರತಿ ವರ್ಷ ಆಕಾಶ ಕಂದೀಲನ್ನು ನನ್ನ ಮೂರೂ ಜನ ಅಣ್ಣಂದಿರೂ ತಯಾರಿಸಿ ಆಕಾಶಕ್ಕೆ ಬಿಡುವುದನ್ನು ನೋಡುವುದೇ ಒಂಥರಾ ಸೊಗಸು, ಸಂತಸ,ಕಣ್ಣಿಗೆ ಹಬ್ಬ.ನಾವು ಸಂಭ್ರಮ ಪಟ್ಟ ಆ ಬಾಲ್ಯ ಮತ್ತೆ ಮರುಕಳಿಸುವುದೇ? ಸಮಯ ಎಂಥ ಮಹತ್ವದ್ದು. ಒಮ್ಮೆ ಜಾರಿದರೆ ಮತ್ತೆ ಮರುಕಳಿಸದು! ಆದರೆ ಆನೆನಪುಗಳು ಮಾತ್ರ ಎದೆಯನ್ನು ಅರಳಿಸುವಂಥವು.! 

ಒಂದು ಸಲ ನಮ್ಮ ಅಕ್ಕನ ಮದುವೆಯಾದ ಹೊಸತರಲ್ಲಿ ಮೊದಲದೀಪಾವಳಿ. ಅಳಿಯತನಕ್ಕೆಂದು ಆಕೆಯ ಅತ್ತೆಯ ಮನೆಯವರೆಲ್ಲ ನಮ್ಮ ಮನೆಯಲ್ಲಿ ಜಮಾಯಿಸಿದ್ದರು. ನಮ್ಮ ಮನೆಯ ವಾತಾವರಣ, ಆ ನಗು, ಸಂಭ್ರಮ ಅವರಲ್ಲಿ ಸಂತಸವನ್ನುಂಟು ಮಾಡಿತ್ತು.  ನಮ್ಮ ಅಕ್ಕನಮಾವನವರೂ ನಶ್ಯ ಸೇದುತ್ತಿದ್ದರು. ಸುಮ್ಮನೇ ಒಂದಿಷ್ಟು ಚಿಟಿಕೆ ನಶ್ಯವನ್ನು ಕೈಯಲ್ಲಿ ತೆಗೆದುಕೊಂಡು ಮೂಗಿಗೆ ವಾಸನೆ ತೋರಿಸಿ ಮತ್ತೆಡಬ್ಬಿಯಲ್ಲಿ ಹಾಕಿಡುತ್ತೀದ್ದರು.ಅವರಿರುವವರೆಗೂ ನಮ್ಮ ರಾವಬಹಾದ್ದೂರ  ಕಾಕಾ ದಿನಾಲೂ ಅವರನ್ನು ಗಮನಿಸುತ್ತಿದ್ದರು. ಅವರು ಹೋದ ಮೇಲೆ ಮನೆಗೆ ಬಂದ ನಮ್ಮರಾವಬಹಾದ್ದೂರ  ಕಾಕಾನಮ್ಮ ತಂದೆಯೊಂದಿಗೆ," ನಾಶೀಪುಡಿ ಸೇದೂದು ಅಂದ್ರ ಈ ಥರಾನೂ ಸೇದ್ತಾರಂತ ನಾ ಪೈಲಾ ಸಲ ನೋಡಿದ್ನೋಡು....ಅಕ್ಬರ್ ಬಾದಶಹ ಗುಲಾಬಿ ಮೂಸ ನೋಡಿದ್ಹಂಗ ....ನಾನೂ ನಾಶೀಪುಡಿ ಸೇದ್ತೀನಿ ಒಮ್ಮೆ ಒಂದ ಡಬ್ಬೀನ ಬೇಕಾಗ್ತದ" ಎಂದಾಗ ನಮ್ಮ ಮನೆಯ ತಾರಸಿ ಹಾರಿ ಹೋಗುವಾಂಗ ನಕ್ಕಿದ್ದೇ  ನಕ್ಕೀದ್ದು. 

ದೀಪಾವಳಿಬಂದರೆ ನಮ್ಮ ತಂದೆಯ ವಿಶೇಷ ಮಾತುಗಳು, ನಮ್ಮ ರಾವಬಹಾದ್ದೂರ ಕಾಕಾನ ಹರಟೆಗಳು, ಸತ್ಯಕಾಮ ಅವರ ಪುರಾಣದಲ್ಲಿ ಬರುವ ಪಾತ್ರಗಳ ವಿಶ್ಲೇಷಣೆ....ಒಳ್ಳೇ ಗಮ್ಮತ್ತಾಗಿರುತ್ತಿತ್ತು. ಈಗೀಗಂತೂ ನಮ್ಮ ಹಬ್ಬದ ಸಡಗರ ನಮಗೆ ಸಿಗುವ ರಜದ ಮೇಲೆ ಅವಲಂಬಿತವಾಗಿರುತ್ತದೆ. ಟಿವಿಯಲ್ಲಿ ಬರುವ ಕಾರ್ಯಕ್ರಮ ಗಳು ಯಾರನ್ನು ಭೇಟ್ಟಿಯಾಗದಂತೆ ಟಿವಿಯ ಮುಂದೆ ಪ್ರತಿಷ್ಠಾಪಿಸುವಂತೆ ಮಾಡಿರುತ್ತವೆ. ಹದಿನೈದು ದಿನದಿಂದ ಹಬ್ಬದ ತಯಾರಿ, ಫರಾಳದ ತಯಾರಿ ಮಾಡುತ್ತಿದ್ದ ಅಂದಿನ ದಿನಗಳೆಲ್ಲಿ? ಹಬ್ಬದ ಹಿಂದಿನ ದಿನವೇ ಕೆಲವಷ್ಟು ಫರಾಳಗಳನ್ನು ಪ್ಯಾಕ್ ಮಾಡಿಸಿಕೊಂಡು ಬರುವ ಇಂದಿನ ದಿನದ ಹಬ್ಬ ವೆಲ್ಲಿ? ಬಂಧುಗಳೆಲ್ಲ ಒಂದೆಡೆ ಕಲೆತು ನಕ್ಕು ನಲಿಯುತ್ತ ಮಾಡಿದ ಫರಾಳು ಊಟವನ್ನು ಸವಿಯುತ್ತಿದ್ದ ಆ ದಿನಗಳೆಲ್ಲಿ? ಒಂದಿನ ರಜೆ ಸಿಕ್ಕಿದೆ ಎಂದು ಸಿನೇಮಾ ಹಾಲ್ ಗೋ, ಮಾಲ್ ಗೋ ಭೆಟ್ಟಿ ಕೊಡುತ್ತ ಸಾಗಿ ಸಂಬಂಧಿಕರನ್ನು ಫೋನಿನಲ್ಲೇ ಸಂಭಾಷಿಸಿ ಶುಭಾಶಯ ತಿಳಿಸುವ ಇಂದಿನ ಶುಷ್ಕ ದಿನಗಳೆಲ್ಲಿ ? ನಿಜಕ್ಕೂ ಖೇದವೆನಿಸುತ್ತದೆ.ಕಾಲ ಯಾವ ರೀತಿ ತನ್ನ ಮಹಿಮೆಯನ್ನು ತೋರಿಸುತ್ತದೆ ನೋಡಿ. 

        ಹಿರಿಯರು ಮಾಡಿದ ಹಬ್ಬ ಗಳು ನಮ್ಮ ಸಂಸ್ಕೃತಿ, ಸಂಸ್ಕಾರ ಗಳನ್ನು ಬಿಂಬಿಸಲು.....ನಮ್ಮ ಬಾಂಧವ್ಯಗಳನ್ನು ಮತ್ತಷ್ಟು ಗಟ್ಟಿಗೊಳಿಸಲು .....ಆದರೆ ಸಮಯದ ಅಭಾವವನ್ನು ಸೃಷ್ಟಿಸಿ ದುಡ್ಡಿನ ಹಿಂದೆ ಬಿದ್ದು ಇದ್ದ ಸಂಬಂಧಗಳನ್ನು ಕಡಿತ ಗೊಳಿಸುತ್ತ, ಅವಮಾನ, ಅನುಮಾನಗಳ ಚಾದರಿನಲ್ಲಿ ಒಳಗೋಳಗೇ ಕುಸಿಯುವ ಇಂದಿನ ಯುವ ಜನತೆಯು ಸೃಷ್ಟಿಸುತ್ತಿರುವ ಹಬ್ಬದ ಸಂಸ್ಕೃತಿ ಎಂಥದ್ದು? ನಮ್ಮ ಹಬ್ಬಗಳ ಬಗ್ಗೆ ನಿಜವಾದ ಅರಿವು ಆದರೂ ಇರಬೇಕಲ್ಲವೇ?  

ಆಯಾ ಕಾಲ ಘಟ್ಟದಲ್ಲಿ ಬರುವ ಹಬ್ಬಗಳು ಪ್ರಕೃತಿ ಗನುಗುಣವಾಗಿ ಆಹಾರವನ್ನು ಸವಿಯುವ ಹಾಗೂ ಆ ರೀತಿ ಆರೋಗ್ಯದ ಗುಟ್ಟೂ ಅದರಲ್ಲಡಗಿದೆ.ಹಾಗಾಗಿ ವಿವಿಧ ಹಬ್ಬಗಳಿಗೆ ವಿವಿಧ ಪ್ರಕಾರದ ಊಟ, ತಿನಿಸು ನಮ್ಮಲ್ಲಿ ಹಾಸುಹೊಕ್ಕಾಗಿವೆ. 

ಆದರೆ ಇಂದೇನಾಗಿದೆ? ಇಂದು ನಾವು ಯಾವುದೇ ಕಾಲಕ್ಕೂ ಯಾವುದೇ ಹಬ್ಬವನ್ನೂ ಆಚರಿಸಬಹುದು.ಚಕ್ಕುಲಿ, ಉಂಡೆ, ಚಿರೋಟಿ, ಕಚರ್ಿಕಾಯಿ ಯಾವಾಗಲೂ ವರ್ಷದ  ಹನ್ನೆರಡೂ ತಿಂಗಳೂ ಪೇಟೆಯಲ್ಲಿ ಲಭ್ಯವಿರುತ್ತವೆ.ಹೀಗಾಗಿ ದೀಪಾವಳಿ ಹಬ್ಬಕ್ಕೇ ಇವನ್ನೆಲ್ಲ ಕಷ್ಟಪಟ್ಟು ಮನೆಯಲ್ಲಿತಯಾರಿಸಿ ಹಬ್ಬ ಮಾಡುವ ಜರೂರಿಯಾದರೂ ಎನಿದೆ? ಎಂಬುದು ಇಂದಿನ ಜಾಣ ಮಕ್ಕಳ ಪ್ರಶ್ನೆ. ಅದರೆ ಕಷ್ಟಪಟ್ಟು ಮಾಡಿ ಸಂಬಂಧಿಕರೊಂದಿಗೆ,ಪರಿಚಯದವರೊಂದಿಗೆ ಹಂಚಿಕೊಂಡು ತಿನ್ನುವ ಸುಖವೇ ಬೇರೆ ಅಲ್ಲವೇ? ಒಂದು ಬಾಹ್ಯ ತೃಪ್ತಿಯಾದರೆ ಇನ್ನೊಂದು ಆತ್ಮಿಕ ಸಂತೃಪ್ತಿ!!! 



 

ಸುದ್ದಿ ಓದಿ