ರೈತರಿಗೆ ಬಿತ್ತನೆ ಬೀಜ ವಿತರಣೆ
ಸವದತ್ತಿ: ಜೂನ್ ಮೊದಲ ವಾರದಲ್ಲಿ ಮುಂಗಾರಿ ಮಳೆಯಾಗುವ ಉತ್ತಮ ಮುನ್ಸೂಚನೆ ಇರುವದರಿಂದ ತಾಲೂಕಿನಾದ್ಯಂತ ಬಿತ್ತನೆ ಕಾರ್ಯ ಹೆಚ್ಚಾಗುವ ಸಾಧ್ಯತೆಗಳಿದ್ದು, ಈ ಸಮಯದಲ್ಲಿ ರೈತರಿಗೆ ಸರಿಯಾಗಿ ಬೀಜ ವಿತರಣೆಯಾಗುವಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸ್ಥಳೀಯ ಟಿ.ಎ.ಪಿ.ಸಿ.ಎಮ್.ಎಸ್ ಸೊಸೈಟಿಯಲ್ಲಿ ಮುಂಗಾರು ಹಂಗಾಮಿಗೆ ಸರಕಾರದ ಸಹಾಯಧನದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಿ ಅವರು ಮಾತನಾಡಿದರು.
ಸರಕಾರದಿಂದ ರೈತರಿಗೆ ಸಾಕಷ್ಟು ಸೌಲಭ್ಯತೆಗಳನ್ನು ನೀಡಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಈಗಾಗಲೆ ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು, ಸರಕಾರದ ಮಾರ್ಗ ಸೂಚಿಯಂತೆ ರೈತರು ತಮಗೆ ಅವಶ್ಯಕತೆಗನುಗುಣವಾಗಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬೇಕೆಂದರು.
ಸಹಾಯಕ ಕೃಷಿ ನಿರ್ದೇಶಕ ಶಿವಪ್ರಸಾದ ಪಾಟೀಲ ಮಾತನಾಡಿ, ಬೀಜ ವಿತರಣೆಯನ್ನು ಡಿಜಿಟಲೀಕರಣದ ಮೂಲಕ ಮಾಡಲಾಗುತ್ತಿದ್ದು, ರೈತರ ಆಧಾರ ನಂಬರನ್ನು ಕಿಸಾನ್ ಪೋರ್ಟನಲ್ಲಿ ದಾಖಲಿಸಿಕೊಂಡು ಬೀಜದ ಪಾಕೀಟ್ ಮೇಲಿನ ಕೋಡನ್ನು ಸ್ಕ್ಯಾನ್ ಮಾಡುವ ಮೂಲಕ ಬೀಜ ವಿತರಣೆ ಮಾಡಲಾಗುತ್ತಿದೆ ಎಂದರು. ಒಬ್ಬ ರೈತರಿಗೆ 1 ಎಕರೆಗೆ ಒಂದು ಪಾಕೀಟದಂತೆ ಗರಿಷ್ಠ 5 ಎಕರೆಗೆ 5 ಪಾಕೀಟ ಬೀಜದ ಪಾಕೀಟಗಳನ್ನು ಸರಕಾರದ ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದರು. ಯಾವ ರೈತರಿಗೂ ಬಿತ್ತನೆ ಬೀಜದ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಟಿಎಪಿಸಿಎಮ್ಎಸ್ ವ್ಯವಸ್ಥಾಪಕ ಪ್ರಕಾಶ ಯಲಿಗಾರ ಮಾತನಾಡಿ, ನಮ್ಮಲ್ಲಿ 2370 ಕೆ.ಜಿ. ಹೆಸರು ಬೀಜ ಹಾಗೂ 300 ಕೆ.ಜಿ ಉದ್ದಿನ ಬೀಜಗಳ ಸಂಗ್ರಹವಿದ್ದು, ರೈತರಿಗೆ ಅನುಕೂಲವಾಗುವಂತೆ ಎಲ್ಲ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು ಎಂದರು.
ಟಿಎಪಿಸಿಎಮ್ಎಸ್ ಅಧ್ಯಕ್ಷ ರವೀಂದ್ರ ಯಲಿಗಾರ ಅಧ್ಯಕ್ಷತೆವಹಿಸಿದ್ದರು.
ಮುನವಳ್ಳಿಯ ವರ್ತಕರಾದ ಸಿ.ಪಿ.ಬಾಳಿ, ಮಹಾರಾಜಗೌಡ ಪಾಟೀಲ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪುರದಗುಡಿ, ನಾಗಪ್ಪ ಯಲಿಗಾರ, ಬಸವರಾಜ ಬಸಲಿಗುಂದಿ ಹಾಗೂ ರೈತರು ಉಪಸ್ಥಿತರಿದ್ದರು.ಬಸವರಾಜ ಬಿರುಕಲ್ಲ ನಿರೂಪಿಸಿ ವಂದಿಸಿದರು.