ಹೆಡಿಯಾಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ರಾಣೆಬೆನ್ನೂರು 16: ಮನೆಯಲ್ಲಿ ತಂದೆ ತಾಯಿಗಳಿಂದ, ಶಾಲೆಯಲ್ಲಿ ಶಿಕ್ಷಕರಿಂದ, ಸಮಾಜದಲ್ಲಿ ಗುರು ಹಿರಿಯರಿಂದ ಉತ್ತಮ ಮಾರ್ಗದರ್ಶನ ಮಕ್ಕಳಿಗೆ ಸಿಕ್ಕರೆ, ಸಂಸ್ಕಾರವಂತರಾಗಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದು ಎಂದು ತಾಲೂಕಿನ ಹೆಡಿಯಾಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ, ಶಾಲಾ ಸಂಸತ್ತು ಪ್ರಧಾನ ಮಂತ್ರಿ ಪಲ್ಲವಿ ಬೀರಪ್ಪ ಮುರಡೆಪ್ಪನವರ ಹೇಳಿದರು.
ಸೋಮವಾರ ಶಾಲಾ ಭವನದಲ್ಲಿ ನಡೆದ, ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ ಸಮಗ್ರ ಶಿಕ್ಷಣಕ್ಕಾಗಿ ಸರಕಾರ ಎಲ್ಲ ರೀತಿಯ ಸಹಾಯ ಸಹಕಾರಗಳು ನೀಡುತ್ತಲಿವೆ. ವಿದ್ಯಾರ್ಥಿಗಳಾದ ನಾವುಗಳು ಅವುಗಳ ಪ್ರಯೋಜನವನ್ನು ಪಡೆದುಕೊಂಡು ತಂದೆ ತಾಯಿಗಳಿಗೆ, ಕಲಿಸಿದ ಗುರುಗಳಿಗೆ, ಸಹಕಾರ ನೀಡಿದ ಸರಕಾರಗಳಿಗೆ ರುಣಿಗಳಾಗಬೇಕು ಎಂದರು.
ಶಾಲಾ ಮುಖೋಪಾಧ್ಯಾಯ ಬಿ.ಪಿ. ಶಿಡೆನೂರ್ ಮಾತನಾಡುತ್ತಾ ಮಕ್ಕಳಲ್ಲಿ ಕ್ರಿಯಾತ್ಮಕ ಚಟುವಟಿಕೆಗಳನ್ನು, ಮತ್ತು ಕ್ರಿಯಾಶೀಲತೆಯನ್ನು ಬೆಳೆಸಲು ಶಿಕ್ಷಣದ ಜೊತೆಗೆ, ಅವರಿಗೆ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಆಟ ಪಾಠಗಳನ್ನು ಅಳವಡಿಸಿಕೊಳ್ಳಲು ಸದಾಕಾಲ ಪ್ರೋತ್ಸಾಹಿಸುತ್ತಲ್ಲಿದ್ದೇವೆ ಎಂದರು.
ವೇದಿಕೆಯಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ನಾಗರಾಜ ಅರಳಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಚಿನ್ನಪ್ಪ ಕುದರಿಹಾಳ, ಡಾಟಾ ಆಪರೇಟರ್ ವೀರನಗೌಡ ಪಾಟೀಲ್, ವಿದ್ಯಾರ್ಥಿ ಗಳಾದ ಚಂದನ ಮಾರೇರ್, ಸಂಜನಾ ಬಂಗಾರಿ ಸಿಂಧು ಅರ್ಕಿಚಾರಿ, ಸಿಂಚನ ಮಾರೇರ್, ನಂದ ಹುಡೇದ್, ಉಷಾ ಹುಲಿಹಳ್ಳಿ, ಸಹನಾ ಬಚ್ಚನಾಯಕರ, ಹೇಮಾವತಿ ಮಳವಳ್ಳಿ, ರೋಹಿತ್ ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು. ಮಕ್ಕಳ ದಿನಾಚರಣೆ ನಿಮಿತ್ತ ಎಲ್ಲವೂ ಮಕ್ಕಳಿಂದಲೇ ಕಾರ್ಯಕ್ರಮ ನಡೆದಿದ್ದು, ಪಾಲಕರ ಗಮನ ಸೆಳೆಯಿತು. ಕವಿತಾ ಸಂಗಡಿಗರು ಪ್ರಾರ್ಥಿಸಿದರು. ಪ್ರಜ್ವಲ್ ಮಾರೇರ ಸ್ವಾಗತಿಸಿದರು. ಕೃತಿಕಾ ಚಳಗೇರಿ ನಿರೂಪಿಸಿದರು. ತೇಜಸ್ವಿನಿ ಪಾಟೀಲ್ ವಂದಿಸಿದರು. ನಂತರ ನಡೆದ ಶಾಲಾ ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲಕರ ಗಮನ ಸೆಳೆದವು