ತಾಲೂಕಾಡಳಿತದಿಂದ ಕನಕದಾಸರ ಜಯಂತಿ ಆಚರಣೆ
ತಾಲೂಕಾಡಳಿತದಿಂದ ಕನಕದಾಸರ ಜಯಂತಿ ಆಚರಣೆ
ಸಿಂದಗಿ 19: ಸಾಮಾಜಿಕ ಹಾಗೂ ಧಾರ್ಮಿಕ ಸಾಮರಸ್ಯ ಬೆಳೆಸಲು ಶ್ರಮಿಸಿದ ಮಹಾನ ಪುರುಷ ಕನಕದಾಸರು ಎಂದು ಸ್ಥಳಿಯ ಎಚ್.ಜಿ. ಪಿಯು ಕಾಲೇಜಿನ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ಸೋಮವಾರ ತಾಲೂಕಾ ಆಡಳಿತದಿಂದ ಹಮ್ಮಿಕೊಂಡ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಕನಕದಾಸರ ಕುರಿತು ಉಪನ್ಯಾಸ ನೀಡಿದರು.
ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದ ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂದು ಹಾಡಿ ಜಾತ್ಯತೀತ ದಾರ್ಶನಿಕರಾಗಿ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರನ್ನು ಕೇವಲ ಒಂದು ಜಾತಿಗೆ ಸೀಮಿತವಾಗಿ ಮಾಡದೇ ಮನುಕುಲದ ಉದ್ಧಾರಕ ಎಂದು ಭಾವಿಸಬೇಕು ಎಂದು ಹೇಳಿದರು.
ತಹಶೀಲ್ದಾರ ಡಾ.ಪ್ರದೀಪಕುಮಾರ ಹಿರೇಮಠ, ಸರ್ಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಅಶೋಕ ತೆಲ್ಲೂರ, ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಕ್ಷೇತ್ರಶಿಕ್ಷಣಾಧಿಕಾರಿ ಎಂ.ಬಿ. ಯಡ್ರಾಮಿ, ಹಾಲುಮತ ಸಮಾಜದ ತಾಲೂಕಾ ಅಧ್ಯಕ್ಷ ನಿಂಗಣ್ಣ ಬಿರಾದಾರ, ಗ್ರೇಡ್-2 ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ, ತಾಪಂ ಅಧಿಕಾರಿ ನಿತ್ಯಾನಂದ ಯಲಗೋಡ, ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ ವೇದಿಕೆ ಮೇಲೆ ಇದ್ದರು.
ಕಸಾಪ ತಾಲೂಕಾ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಾಯ್. ಸಿಂಗೆಗೋಳ, ಸುನಂದಾ ಯಂಪೂರೆ ಸೇರಿದಂತೆ ತಹಶೀಲ್ದಾರ ಕಚೇರಿ ಸಿಬ್ಬಂದಿ ವರ್ಗ, ಹಾಲುಮತ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.