ಉಪಚುನಾವಣೆ: ಶಾಂತಿಯುತ ಮತದಾನ
ಕಂಪ್ಲಿ04: ತಾಲೂಕಿನಾದ್ಯಂತ ಲೋಕಸಭಾ ಉಪ ಚುನಾವಣೆಯ ಮತದಾನವು ಶನಿವಾರ ಶಾಂತಿಯುತವಾಗಿ ಜರುಗಿತು.
ಬೆಳಗಿನ ಸಮಯದಲ್ಲಿ ಬಹಳಷ್ಟು ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಹುಮ್ಮಸ್ಸು ತೋರಿದರು. ಆದರೆ, ಸೂರ್ಯನ ಕಿರಣಗಳು ಬಿದ್ದ ನಂತರ ಮತದಾನ ಪ್ರಮಾಣಿ ಇಳಿಮುಖವಾಗಿದೆ. ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯ ಗ್ರಾಮದ ಮತಗಟ್ಟೆಗಳಲ್ಲಿ ಮತದಾರರು ಮತ ಚಲಾಯಿಸಿದರು. ಉಪ ಚುನಾವಣೆ ಹಿನ್ನಲೆ ಸಣಾಪುರದಲ್ಲಿ ಅಂಗವಿಕಲರನ್ನು ಮತಗಟ್ಟೆಗೆ ಕರೆ ತರಲು ಜಿಲ್ಲಾಡಳಿತದಿಂದ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿನ ಷಾಮಿಯಾಚಂದ್ ಕಾಲೇಜಿನ ಮತ ಕೇಂದ್ರದ ಬಳಿಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಅವರು ಮತ ಚೀಟಿಯೊಂದಿಗೆ ಮತ ಚಲಾಯಿಸಲು ಬಂದಾಗ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳು ಗುರುತಿನ ಚೀಟಿ ಇದ್ದರೆ ಮಾತ್ರ ಮತಗಟ್ಟೆ ಒಳಗಡೆ ಬಿಡದೆದಿದ್ದರಿಂದ ಕೆಲ ಕಾಲ ವಾಗ್ವಾದ ನಡೆಯಿತು. ನಂತರ ಸ್ಥಳೀಯ ಪೊಲೀಸರು ಬಂದು, ಕೆ.ಎಂ.ಹೇಮಯ್ಯಸ್ವಾಮಿ ಅವರಿಗೆ ಒಳಗಡೆ ಹೋಗುವಂತೆ ಸೂಚಿಸಿದರಿಂದ ಸಮಸ್ಯೆ ತಣ್ಣಗಾಯಿತು. ಕೊಟ್ಟಾಲ್ ಗ್ರಾಮದ ಗೋಪಾಲಪುರಂನ ಮತಗಟ್ಟೆ ಸಂಖ್ಯೆ 79ರ ಕೇಂದ್ರದಲ್ಲಿ ಪುರಸಭೆ ಅಧ್ಯಕ್ಷ ಎಂ.ಸುಧೀರ್ ಹಾಗೂ ದಂಪತಿ ನಂದಿನಿ ಇವರು ಮತ ಚಲಾಯಿಸಿದರು. ಇಲ್ಲಿನ ಕೇಂದ್ರದಲ್ಲಿ ಆಹಾರ ವ್ಯತ್ಯಾಸದಿಂದ ಮಹಿಳಾ ಸಿಬ್ಬಂದಿಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿದರಿಂದ ಮಹಿಳಾ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಈ ಮತಗಟ್ಟೆಯಲ್ಲಿ 1355 ಮತಗಳಿಂದ ಎರಡು ಮತ ಕೇಂದ್ರದ ಅವಶ್ಯಕತೆಯಿದೆ ಎಂದು ಮತದಾರರು ಒತ್ತಾಯಿಸಿದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಸಿ.ಶ್ರೀಧರ್ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಶೇ.65.54ರಷ್ಟು ಮತದಾನವಾಗಿದೆ. ಯಾವುದೇ ಅಡೆಗಡೆಯಿಲ್ಲದೆ ಶಾಂತಿಯುತವಾಗಿ ಮತದಾನ ಜರುಗಿದೆ ಎಂದರು. ಮತದಾನ ಕೇಂದ್ರಗಳಲ್ಲಿ ಸಿಪಿಐ ಎನ್.ನಂಜಪ್ಪ, ಪಿಎಸ್ಐ ಕೆ.ಬಿ.ವಾಸುಕುಮಾರ್ ಅವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.