ಬಿಜೆಪಿ ಸರ್ಕಾರದ ಮೀಸಲಾತಿ ಹೆಚ್ಚಳ ಚುನಾವಣಾ ತಂತ್ರವಾಗಿದೆ - ಹೆಚ್. ಆಂಜನೇಯ
ರಾಣೆಬೆನ್ನೂರು 15: ಇತ್ತೀಚಿಗೆ ಹಿಂದುತ್ವದ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಆಡಳಿತವು ಸಂಪೂರ್ಣ ವಿಫಲವಾಗಿದೆ. ಮೀಸಲಾತಿ ಹೆಚ್ಚಳ ಹೇಳಿಕೆ ಕೇವಲ ಚುನಾವಣಾ ತಂತ್ರವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್. ಆಂಜನೇಯ ಆರೋಪಿಸಿದರು.
ಅವರು ಬುಧವಾರ ತಾಲೂಕಿನ ಬೆನಕನಕೊಂಡ ಗ್ರಾಮದ ಶ್ರೀ ಮಾತಂಗೇಶ್ವರಿ ದೇವಸ್ಥಾನ ಆವರಣದಲ್ಲಿ ನಡೆದ ಡಾ.ಅಂಬೇಡ್ಕರ್ ಅವರ ಶಿಲಾಮೂರ್ತಿ ಪ್ರತಿಷ್ಠಾಪನೆ ಮತ್ತು ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಬೇಡ್ಕರ ಅವರು ಕೇವಲ ಸಮುದಾಯಕ್ಕೆ ಮಾತ್ರ ಸಂವಿಧಾನ ಬರೇದಿಲ್ಲ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಮತ್ತು ರಾಜಕೀಯವಾಗಿ ಅತೀ ಹಿಂದುಳಿದವರಿಗೆ, ಸಮಾನತೆ ಸಾಧಿಸುವುದಕ್ಕಾಗಿ ಬರೆದಿದ್ದಾರೆ. ಅಂಬೇಡ್ಕರವರನ್ನು ಕೇವಲ ದಲಿತ ಸಮುದಾಯಕ್ಕೆ ಮಾತ್ರ ಹಿಡಿದಿಟ್ಟುಕೊಳ್ಳಬೇಡಿ. ಅವರೊಬ್ಬ ವಿಶ್ವಮಾನವ, ತತ್ವಜ್ಞಾನಿ, ಮಹಾ ಮಾನವತಾವಾದಿ, ಶೋಷಿತರ ಧ್ವನಿಯಾಗಿ ಎಲ್ಲರೂ ಸಮಾನತೆ ಸಾಧಿಸಲು ಮೂಲ ಕಾರಣಿಕರ್ತರಾಗಿದ್ದಾರೆ ಎಂದರು. ಇತಿಹಾಸದ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ,
ಅಂದಿನ ರಾಜಕಾರಣ ಬಹು ಸಮಾನತೆಗಾಗಿ ಆದರೆ ಇಂದಿನ ರಾಜಕಾರಣ, ತಮ್ಮ ಸ್ವಾರ್ಥತೆಗಾಗಿ ಎನ್ನುವುದನ್ನು ಜನಸಾಮಾನ್ಯರೇ ಮಾತನಾಡಿಕೊಳ್ಳುತ್ತಿದ್ದಾರೆ ಹೀಗಿರುವಾಗ ಸಮಾನತೆಯ ಬೆಲೆ ಎಲ್ಲಿದೆ ಎಂದು ಬಲವಾಗಿ ಪ್ರಶ್ನಿಸಿದ ಆಂಜನೇಯ ಅವರು, ರಾಜಕಾರಣ ನಿಂತ ನೀರಲ್ಲ, ಚಲಿಸುವ ಮೋಡ ಇದ್ದಹಾಗೆ. ಭವಿಷ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಯಾವುದೇ ಸಂಶಯ ಬೇಡ ಎಂದು ತಮ್ಮ ಅಚಲ ವಿಶ್ವಾಸ ವ್ಯಕ್ತಪಡಿಸಿದರು. ಶಿಕ್ಷಣವಂತರಾಗಬೇಕು ಅವರ ಮೂಲಕ ಪ್ರತಿಯೊಬ್ಬರೂ ಸಮಾನತೆ ಸಾಡಿಸಬೇಕು. ಸಮುದಾಯದ ಮಕ್ಕಳಿಗೆ ಶಿಕ್ಷಣವೊಂದೇ ತಾರಕ ಮಂತ್ರವಾಗಿದೆ ಎಂದರು. ಇದೇ ಸಂದರ್ಭದಲ್ಲಿ ನೇಪಾಳದಲ್ಲಿ ನಡೆದ ಕ್ರೀಡಾಕೂಟದಲ್ಲಿ ಅಪ್ರತಿಮ ಸಾಧನೆ ಮಾಡಿದ, ಗ್ರಾಮದ ಪ್ರಫುಲ್ ನೀಲಪ್ಪ ಪೂಜಾರ್ ಅವರನ್ನು ಮಾಜಿ ಸಚಿವ ಎಚ್ ಆಂಜನೇಯ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಜೈವಿಕ ಇಂಧನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಎಸ್. ಆರ್.ಪಾಟೀಲ್ ಅವರು, ಮೀಸಲಾತಿ ಪಡೆದ ಎಲ್ಲ ಸಮುದಾಯದವರು ಸರ್ಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ, ಆದರೆ ಈ ಸಮುದಾಯ ಸರಿಯಾಗಿ ಪಡೆದುಕೊಳ್ಳದೆ, ವಂಚಿತರಾಗಿದ್ದಾರೆ. ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಿ, ಎಲ್ಲ ಸಮುದಾಯದೊಂದಿಗೆ ಬೆರೆತು ಸಾಮಾಜಿಕ ನ್ಯಾಯದ ಅಡಿಯಲ್ಲಿ ಪ್ರತಿಯೊಬ್ಬರು ಶಿಕ್ಷಣವಂತರಾಗಿ ಆರ್ಥಿಕ ಸಬಲತೆ ಹೊಂದಿ, ಆರ್ಥಿಕ ಚೈತನ್ಯವಂತರಾಗಬೇಕು ಎಂದು ಕರೆ ನೀಡಿದರು.
ತಾ. ಪಂ ಮಾಜಿ ಅಧ್ಯಕ್ಷರಾದ, ನೀಲಕಂಠಪ್ಪ ಕುಸುಗೂರು, ರವೀಂದ್ರ ಗೌಡ ಪಾಟೀಲ್, ನಗರಸಭಾ ಸದಸ್ಯರಾದ ಪಿ.ಜೆ.ಮರಿಯಮ್ಮನವರ್, ಪ್ರಕಾಶ್ ಪೂಜಾರ್, ನ್ಯಾಯವಾದಿ ಶಿವಣ್ಣ ಅಂಬಲಿ, ಮೊದಲಾದವರು ಸಮಾನತೆ ಕುರಿತು ಮಾತನಾಡಿದರು. ದಿವ್ಯ ಸಾನಿಧ್ಯ ವಹಿಸಿದ್ದ, ಹಂಪಿ ಮಾತಂಗ ಪರ್ವತ ಶ್ರೀ ಮಠದ ಪೂರ್ಣಾನಂದ ಭಾರತಿ ಮಹಾಸ್ವಾಮಿಗಳವರು, ಧರ್ಮ ಮತ್ತು ಸಂಸ್ಕೃತಿ ಸಮುದಾಯದ ಪರಂಪರೆಯಾಗಿದೆ. ಭಾವೈಕ್ಯತೆಯ ಭಾರತದಲ್ಲಿ ಎಲ್ಲರೂ ಸರಿ ಸಮಾನವಾಗಿ ಬಾಳುವುದೇ ನಿಜವಾದ ಮಾನವ ಧರ್ಮವಾಗಿದೆ ಎಂದ ಅವರು ಹಿಂದುಳಿದ ಸಮಾಜ, ಸಂವಿಧಾನ ಶಿಲ್ಪಿಗಳು ನೀಡಿದ ಸಮಾನತೆಯ ಮೀಸಲಾತಿ ಪಡೆದು, ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ, ಅಭಿವೃದ್ಧಿ ಸಾಧಿಸಬೇಕು ಎಂದು ಅವರು ಸೇರಿದ ಸಹಸ್ರಾರು ನಾಗರಿಕರಿಗೆ ಕರೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ, ಮಂಜುಳಾ ಅಸುಂಡಿ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ, ಚನ್ನಬಸಪ್ಪ ಬೀದರಿ, ಚಂದ್ರಣ್ಣ ಬೇಡರ,ಸಿದ್ದಪ್ಪ ಪೂಜಾರ್, ನರಸಿಂಹರಾಜ್, ಪ್ರಕಾಶ್ ಚಿತ್ರದುರ್ಗ, ಮಾಲತೇಶ ಕಡತಿ, ಗುಂಡಪ್ಪ ದೇಸಾಯಿ, ಗುತ್ಯಪ್ಪ ಹಳೆಮನಿ, ಮಹಾದೇವಪ್ಪ, ಸುರೇಶ ಕೊಲೇರ್, ವಿಜಯ್ ಓಲೆಕಾರ್, ಭರಮಪ್ಪ ದೊಡ್ಡಮನಿ, ಹನುಮಂತಪ್ಪ ಕಬ್ಬಾರ್, ಪ್ರಭು ಕಿವುಡಣ್ಣನವರ್ ಸುರೇಶಪ್ಪ ಗರಡಿಮನಿ, ಡಾ: ವೆಂಕಟೇಶ್ ಹೆಚ್. ಸೇರಿದಂತೆ ಸಮಾಜದ ಮತ್ತಿತರ ಗಣ್ಯರು, ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು