ನಿಪ್ಪಾಣಿಯಲ್ಲಿ ಭೂದಾಖಲೆ ಸಹಾಯಕ ನಿರ್ದೇಶಕರ ಕಚೇರಿ ಶೀಘ್ರದಲ್ಲೇ: ಶಾಸಕಿ ಶಶಿಕಲಾ ಜೊಲ್ಲೆ ಒತ್ತಾಯ:ಸಚಿವರು ಭರವಸೆ
ಚಿಕ್ಕೋಡಿ 13: ಗಡಿ ತಾಲೂಕು ಕೇಂದ್ರವಾದ ನೂತನ ನಿಪ್ಪಾಣಿ ತಾಲೂಕಿನಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಸ್ಥಾಪಿಸಬೇಕೆಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಧೀವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಭೂಮಾಪಕರ ಕೊರತೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ತ್ವರಿತವಾಗಿ ಹುದ್ದೆಗಳನ್ನು ಭರ್ತಿ ಮಾಡಿ, ಸಾರ್ವಜನಿಕರ ಕೆಲಸಕ್ಕೆ ಅಡಚಣೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಅವರು ವಿಧಾನಸಭಾ ಅಧಿವೇಶನದಲ್ಲಿ ಒತ್ತಾಯಿಸಿದರು.
ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು, ರಾಜ್ಯದಲ್ಲಿ ಒಟ್ಟು 4,020 ಭೂಮಾಪಕರ ಹುದ್ದೆಗಳಿದ್ದು, 3,049 ಹುದ್ದೆಗಳು ಭರ್ತಿಯಾಗಿದ್ದು, 970 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು. ನೇರ ನೇಮಕಾತಿ ಮೂಲಕ 253 ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮನವಿ ಮಾಡಲಾಗಿದ್ದರೂ, 29.03.2025ರ ಸುತ್ತೋಲೆಯನ್ವಯ ಪ್ರಕ್ರಿಯೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಇದೇ ವೇಳೆ, ಹೆಚ್ಚುವರಿಯಾಗಿ 1,000 ಪರವಾನಗಿ ಭೂಮಾಪಕರನ್ನು ನೇಮಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ನಿಪ್ಪಾಣಿ ತಾಲ್ಲೂಕಿನಲ್ಲಿ ಹೊಸ ಸಹಾಯಕ ಭೂದಾಖಲೆಗಳ ನಿರ್ದೇಶಕರ ಕಚೇರಿ ಸ್ಥಾಪನೆ ಕುರಿತು ಪ್ರಶ್ನೆಗೆ ಸಚಿವರು, ಹೊಸ ತಾಲ್ಲೂಕುಗಳಲ್ಲಿ ಕಚೇರಿಗಳನ್ನು ಪ್ರಾರಂಭಿಸಲು ಆರ್ಥಿಕ ಇಲಾಖೆಯ ಅನುಮೋದನೆ ಬಾಕಿಯಿದೆ. ಅನುಮೋದನೆ ಸಿಕ್ಕ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.