ಹೆಚ್‌.ಡಿ.ಪಿ. ಶಾಲಾ ವಿದ್ಯಾರ್ಥಿಗಳ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ

ಹೆಚ್‌.ಡಿ.ಪಿ. ಶಾಲಾ ವಿದ್ಯಾರ್ಥಿಗಳ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ  Appreciation for the social work of H.D.P. School students.

ಲೋಕದರ್ಶನ ವರದಿ 

ಆಸರೆ ವೃದ್ಧಾಶ್ರಮದ ಹಿರಿಯರೊಂದಿಗೆ ಸಮಯ ಕಳೆದು ಸಿಹಿ ಹಂಚಿದ ವಿದ್ಯಾರ್ಥಿಗಳು  

ಯಮಕನಮರಡಿ 20: ಹಿಡಕಲ್ ಡ್ಯಾಂನಲ್ಲಿರುವ ಯಮಕನಮರಡಿ ವಿದ್ಯಾವರ್ಧಕ ಸಂಘದ ಹೆಚ್‌.ಡಿ.ಪಿ. ಶಾಲೆಯ ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿ ಹಾಗೂ ಹಿರಿಯ ನಾಗರಿಕರ ಬಗ್ಗೆ ಪ್ರೀತಿ, ಗೌರವ ಮತ್ತು ಕಾಳಜಿ ಮೂಡಿಸುವ ಉದ್ದೇಶದಿಂದ ಮಹಿಳಾ ಕಲ್ಯಾಣ ಸಂಸ್ಥೆಯ ಆಸರೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಿರಿಯ ನಾಗರಿಕರೊಂದಿಗೆ ಆತ್ಮೀಯವಾಗಿ ಸಮಯ ಕಳೆದು ಮಾದರಿ ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಂಡರು.  

ವೃದ್ಧಾಶ್ರಮಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಅಲ್ಲಿನ ಹಿರಿಯ ನಾಗರಿಕರೊಂದಿಗೆ ಮಾತನಾಡಿ, ಅವರ ಆರೋಗ್ಯ ಹಾಗೂ ಯೋಗಕ್ಷೇಮ ವಿಚಾರಿಸಿದರು. ಹಿರಿಯರ ಜೀವನಾನುಭವಗಳು, ನೆನಪುಗಳು ಮತ್ತು ಅವರ ಬದುಕಿನ ಕಥೆಗಳನ್ನು ಆಲಿಸುವ ಮೂಲಕ ಅವರೊಂದಿಗೆ ಆತ್ಮೀಯವಾಗಿ ಬೆರೆತರು. ಹಿರಿಯ ನಾಗರಿಕರಿಗೆ ಸಿಹಿ ಹಂಚಿ ಅವರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವ ಮೂಲಕ ವೃದ್ಧಾಶ್ರಮದಲ್ಲಿ ಸಂಭ್ರಮದ ವಾತಾವರಣ ನಿರ್ಮಿಸಿದರು.  

ಶಿಕ್ಷಕ ಜಗನ್ನಾಥ್ ಎಸ್ ಕರೆನ್ನವರ್ ಮಾತನಾಡಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳು ಹಾಗೂ ಹಿರಿಯರನ್ನು ಗೌರವಿಸುವ ಸಂಸ್ಕಾರ ಬೆಳೆಸುವುದು ಅಗತ್ಯ. ವೃದ್ಧಾಶ್ರಮಗಳಿಗೆ ಭೇಟಿ ನೀಡುವುದರಿಂದ ಹಿರಿಯರ ಜೀವನಾನುಭವವನ್ನು ತಿಳಿದುಕೊಳ್ಳಲು ಹಾಗೂ ಸಮಾಜದ ಬಗ್ಗೆ ಸಂವೇದನಾಶೀಲತೆ ಬೆಳೆಸಿಕೊಳ್ಳಲು ಸಾಧ್ಯ ಎಂದು ಹೇಳಿದರು. ಇನ್ನೋರ್ವ ಶಿಕ್ಷಕ ಏಕನಾಥ್ ಪಿ ಮಾಸ್ತಿ ಉಪಸ್ಥಿತರಿದ್ದರು.  

ಮಹಿಳಾ ಕಲ್ಯಾಣ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಆಸರೆ ವೃದ್ಧಾಶ್ರಮದ ಉದ್ದೇಶ ಹಾಗೂ ಹಿರಿಯ ನಾಗರಿಕರ ಆರೈಕೆಯ ಮಹತ್ವದ ಕುರಿತು ಮಾಹಿತಿ ನೀಡಲಾಯಿತು.  

ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರದ ಸಲಹೆಗಾರರಾದ ಪೂಜಾ, ಹೇಮಲತಾ ಹಾಗೂ ಮಂದಾಕಿನಿ ಹಟ್ಟಿ, ಹೆಚ್‌.ಡಿ.ಪಿ. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಆಸರೆ ವೃದ್ಧಾಶ್ರಮದ ಹಿರಿಯ ನಾಗರಿಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.