ಇ-ಶ್ರಮ್ ನೊಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ನೀಡಲು ಅವಕಾಶ
ಇ-ಶ್ರಮ್ ನೊಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ನೀಡಲು ಅವಕಾಶ
ಹೊಸಪೇಟೆ 06: ಇ-ಶ್ರಮ್ ಯೋಜನೆಯ ನೊಂದಾಯಿತ ಕಾರ್ಮಿಕರಿಗೆ ಆದ್ಯತಾ ಮೇರೆಗೆ ಪಡಿತರ ಕಾರ್ಡ್ ನೀಡಲು ಅಹಾರ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಭಾಗವಹಿಸಿ ಬಳಿಕ ಅವರು ಅಧಿಕಾರಿಗಳೊಂದಿಗೆ ಮಾತನಾಡಿದರು. ಅಸಂಘಟಿತ ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತೆ ಓದಗಿಸುವ ಇ-ಶ್ರಮ್ ಯೋಜನೆಯ ನೊಂದಾಯಿತರು ಒಟ್ಟು ಜಿಲ್ಲೆಯಲ್ಲಿ 77290 ಕಾರ್ಮಿಕರು ಇದ್ದಾರೆ. ಇವುಗಳಲ್ಲಿ 420 ಕಾರ್ಮಿಕರಿಗೆ ಪಡಿತರ ಕಾರ್ಡ್‌ಗಳು ಲಭ್ಯತೆಯಿಲ್ಲದಿರುವುದನ್ನು ಗುರುತಿಸಲಾಗಿದೆ. ಅಂತಹ 91 ಕಾರ್ಮಿಕರಿಗೆ ಈಗಾಗಲೇ ಪಡಿತರ ಕಾರ್ಡ್‌ಗಳನ್ನು ನೀಡಲಾಗಿದೆ. ಉಳಿದ 329 ಕಾರ್ಮಿಕರಿಗೆ ಪಡಿತರ ಕಾರ್ಡ್ ಸೌಲಭ್ಯ ಪಡೆಯಲು ಆಯಾ ತಾಲೂಕಿನ ತಹಸೀಲ್ದಾರರಿಗೆ ಸೂಚಿಸಲಾಗಿದೆ. ಪಡಿತರವಿಲ್ಲದ ಇ-ಶ್ರಮ್ ನೊಂದಾಯಿತ ಕಾರ್ಮಿಕರು ಕೂಡಲೇ ಸ್ಥಳೀಯ ಅಹಾರ ಇಲಾಖೆಯಲ್ಲಿ ಪಡಿತರ ಸೌಲಭ್ಯವನ್ನು ಪಡೆಯಬೇಕು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಅಹಾರ ಇಲಾಖೆ ಉಪನಿರ್ದೇಶಕರಾದ ರಿಯಾಜ್, ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಪ ಇದ್ದರು.