ಬೆಳಗಾವಿ

ರೈತರಿಗಾಗಿ 6.16 ಕೋಟಿ ಸಾಲ ವಿತರಣೆ: ಸಂಘಕ್ಕೆ 36.57 ಲಕ್ಷ ಲಾಭ

ರೈತರಿಗಾಗಿ 6.16 ಕೋಟಿ ಸಾಲ ವಿತರಣೆ: ಸಂಘಕ್ಕೆ 36.57 ಲಕ್ಷ ಲಾಭ
₹6.16 crore in loans disbursed to farmers; Society posts ₹36.57 lakh profit

ಲೋಕದರ್ಶನ ವರದಿ 

ಬೆಳಗಾವಿ 03 : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 112ನೇ ವಾರ್ಷಿಕ ಸರ್ವಸಾಧಾರಣ ಸಭೆ ನೂತನವಾಗಿ ನಿರ್ಮಿಸಲಾದ ಸಭಾ ಮಂಟಪದಲ್ಲಿ ಸಂಘದ ಅಧ್ಯಕ್ಷ ಶಿವಪುತ್ರ ಅಪ್ಪಾಸಾಹೇಬ ಶಿರಕೋಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2025-26ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಹಾಗೂ ಜಮಾ-ಖರ್ಚು ಅಡಾವೆ ಪತ್ರಿಕೆಗಳನ್ನು ಮುಖ್ಯ ಕಾರ್ಯನಿರ್ವಾಹಕ ರಮೇಶ ಭರಮಣ್ಣವರ ಮಂಡಿಸಿದರು. ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಚರ್ಚೆಗೆ ಒಳಪಟ್ಟ ವಿಷಯಗಳಿಗೆ ಸರ್ವಾನುಮತದ ಒಪ್ಪಿಗೆ ನೀಡಿದರು. ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ ಮಾತನಾಡಿ, ಸಂಘವು 2025-26ನೇ ಸಾಲಿನಲ್ಲಿ 36,57,920.66 ಲಾಭ ಗಳಿಸಿದ್ದು, ಡಿಸಿಸಿ ಬ್ಯಾಂಕ್ ಮೂಲಕ 806 ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ 6,16,99,000 ಸಾಲ ವಿತರಿಸಲಾಗಿದೆ. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಿದ ರೈತರಿಗೆ ಅಭಿನಂದನೆ ಸಲ್ಲಿಸಿದರು.

ಸರ್ಕಾರದ ಯಶಸ್ವಿನಿ ಯೋಜನೆಯಡಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸೆಗೆ 5 ಲಕ್ಷದವರೆಗೆ ಸೌಲಭ್ಯ ದೊರೆಯುತ್ತಿದ್ದು, ಸಂಘದ ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಅಲ್ಲದೆ, ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಆಭರಣಗಳ ಮೇಲಿನ ಸಾಲ ಸೌಲಭ್ಯವೂ ಲಭ್ಯವಿದೆ ಎಂದು ತಿಳಿಸಿದರು. ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಯ ಸಹಕಾರದಿಂದ ಸಂಘವು ಉತ್ತಮವಾಗಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಮಾದರಿ ಸಹಕಾರಿ ಸಂಘವಾಗಿ ಬೆಳೆಸುವ ಸಂಕಲ್ಪವಿದೆ ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಮಲ್ಲಗೌಡ ಅ. ಪಾಟೀಲ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕ ರಮೇಶ ಶಂ. ಭರಮಣ್ಣವರ, ಲೆಕ್ಕಪರಿಶೋಧಕ ವಿರೂಪಾಕ್ಷಿ ಚಂ. ಹತ್ತಿರೋಣಿ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. 


ಸುದ್ದಿ ಓದಿ