‘ಗ್ರಾಮೀಣರಿಗೆ ಯೋಗ್ಯ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ದೊರೆಯಲಿ’
ಮಾಂಜರಿ 30: ಅನ್ನಭಾಗ್ಯ, ಆಶ್ರಯ ಭಾಗ್ಯ ಗೃಹ ಜ್ಯೋತಿ ಭಾಗ್ಯಲಕ್ಷ್ಮಿ ಎಂದು ಸರಕಾರ ಬಡವರಿಗೆ ಹಲವು ಸವಲತ್ತು ನೀಡಿರುವಾಗ ಗ್ರಾಮೀಣ ಭಾಗದಲ್ಲಿ ಹಸಿವೆಯಿಂದ ಸಾಯುವವರು ಕಡಿಮೆಯಾಗಿದ್ದಾರೆ. ಆದರೆ ಸಮರ್ಕ ಆರೋಗ್ಯ ಸೇವೆ ಕೈಗೆಟುಕದೇ ಸಾವಿಗೆ ಶರಣಾಗುವವರ ಸಂಖ್ಯೆ ಹೆಚ್ಚುತ್ತಿದೆ. ಮಾನವೀಯತೆ, ಸಮಾಜದ ಬಗ್ಗೆ ಒಂದಿಷ್ಟು ಕಳಕಳಿ ಹೊಂದಿ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಸೇವೆ ನೀಡಿದರೆ ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಯೋಗ್ಯ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ದೊರೆಯುವಂತಾಗಬೇಕು ಎಂದು ನವ ದೆಹಲಿಯ ಆಯುಷ್ ಮಂತ್ರಾಲಯದ ಸಿ ಸಿ ಆರ್ ಎ ಎಸ್ ನಿರ್ದೇಶಕ ಡಾ. ರಬ್ಬಿನಾರಾಯಣ ಆಚಾರ್ಯ ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೋಮ್ಮಟೇಶ್ ಶಿಕ್ಷಣ ಸಂಸ್ಥೆಯ ಡಾ ಎನ್ ಎ ಮಗದುಮ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನ ಘಟಕದ ನಾಲ್ಕನೆಯ ವರ್ಷದ ಬಿಎಎಂಎಸ್ ಪದವಿಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎ ನ್.ಎ. ಮಗುದುಮ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಬೆಂಗಳೂರಿನ ರಾಜೀವ್ ಗಾಂಧಿ ವೈದ್ಯಕೀಯ ಸಂಸ್ಥೆಯ ರಿಜಿಸ್ಟರ್ರಾದ ಡಾ ತನ್ವೀರ್ ನಾಯಕೋಡಿ ಲಲಿತಾ ಮಗದುಮ್ ಸುರೇಶ್ ಚೌಗುಲಾ ಹಜರತಅಲಿ ಪಾಣಾರಿ ಪ್ರಾಚಾರ್ಯ ಪ್ರಸನ್ನ ಸಾವನೂರ್ ಉಪಪ್ರಾಚಾರ್ಯ ರಾಮನಗೌಡ ಪಾಟೀಲ್ ಹಾಜರಿದ್ದರು.
ಡಾ ತನ್ವೀರ್ ನಾಯಕೋಡಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಆರೋಗ್ಯ ಜಾಗೃತಿಗೆ ಸ್ವಯಂ ಸೇವಾ ಸಂಸ್ಥೆಗಳು, ಸಮಾಜಮುಖಿ ಕಾರ್ಯಕರ್ತರು, ಮಾಧ್ಯಮಗಳು ಪ್ರಯತ್ನಿಸುತ್ತಲೇ ಇದ್ದಾರೆ.
ಶುಚಿತ್ವ ಮತ್ತು ಆರೋಗ್ಯ ಬಗ್ಗೆ ಗ್ರಾಮೀಣರಿಗೆ ತಿಳಿವಳಿಕೆ ನೀಡುವ ಕೆಲಸ ಆಗಬೇಕು. ವೈದ್ಯರು, ಆರೋಗ್ಯಸೇವೆ ಕ್ಷೇತ್ರದ ವೃತ್ತಿಪರರು ಗ್ರಾಮೀಣ ಜನರಿಗೆ ಯೋಗ್ಯ ದರದಲ್ಲಿ ಆರೋಗ್ಯಸೇವೆ ದೊರೆಯುವಂತೆ ಪ್ರಯತ್ನಿಸಬೇಕಿದೆ ಎಂದರು. ಸಂಸ್ಥೆಯಲ್ಲಿ ಕಲಿತು ವಿದ್ಯಾಭಾಸ ಪೂರ್ಣ ಮಾಡಿದ ಸುಮಾರು 68 ವಿದ್ಯಾರ್ಥಿಗಳಿಗೆ ಬಿ ಎ ಎಂ ಎಸ್ ಪದವಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ಸುರೇಶ್ ಚೌಗುಲಾ ಲಲಿತಾ ಮಗದೂಮ ಹಜರತಅಲಿ ಪಾಣಾರಿ ರಾಮನಗೌಡ ಪಾಟೀಲ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ಗೊಮ್ಮಟೇಶ್ ಸಂಸ್ಥೆಯ ಎಲ್ಲಾ ಅಂಗ ಸಂಸ್ಥೆಯ ಶಿಕ್ಷಕ ವರ್ಗ ವಿದ್ಯಾರ್ಥಿ ಪಾಲಕರು ಮತ್ತು ಗಣ್ಯ ನಾಗರಿಕರು ಹಾಜರಿದ್ದರು. ಪ್ರಾಚಾರ್ಯ ಡಾ ಪ್ರಸನ್ನ ಸಾವನೂರ್ ಸ್ವಾಗತಿಸಿ, ಡಾ ಅಲ್ತಾಫ್ ತಂಬಾಟ್ ನಿರೂಪಿಸಿ, ವಂದಿಸಿದರು.