"ಮಾನವೀಯತೆಯೇ ನಿಜವಾದ ವಿಶ್ವ ಪರಿವರ್ತನೆಯ ಮಾರ್ಗ"
ನಮ್ಮ ಜೀವನವನ್ನು ರೂಪಿಸುವ ಪ್ರಮುಖ ಅಂಶಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಯೋಚಿಸಿದಾಗ, ನಮ್ಮ ಮನಸ್ಸಿಗೆ ಮೊದಲಿಗೆ ನಮ್ಮ ನಮ್ಮ ಮೌಲ್ಯಗಳು ಮತ್ತು ನಮ್ಮ ಹೊಣೆಗಾರಿಕೆಗಳು ಬಂದು ಸೇರುತ್ತವೆ. ಮನುಷ್ಯನಿಗೆ ಮಾತು ಹೇಳುವುದು ಸುಲಭ, ಆದರೆ ಆ ಮಾತನ್ನು ಕೃತಿಯಾಗಿ ಪಾಲಿಸುವುದು ಮಾತ್ರ ಅಷ್ಟೇ ಕಷ್ಟ. ಇದೇ ಕಾರಣಕ್ಕಾಗಿ ಹಿರಿಯರು “ಮಾತಿಗಿಂತ ಕೃತಿ ಮುಖ್ಯ” ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಇಂದು ನಾವು ಬದುಕುತ್ತಿರುವ ಸಮಾಜವು ವೇಗವಾಗಿ ಬದಲಾಗುತ್ತಿರುವ ಜಗತ್ತು. ವಿಜ್ಞಾನ, ತಂತ್ರಜ್ಞಾನ, ಮುಂದುವರಿದಿವೆ. ಆದರೆ ಈ ಪ್ರಗತಿಯ ನಡುವೆಯೇ ಮನುಷ್ಯನ ಮೌಲ್ಯಬೋಧನೆ ಕುಗ್ಗುತ್ತಿರುವುದನ್ನೂ ನಾವು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ “ಮಾತಿಗಿಂತ ಕೃತಿ ಮುಖ್ಯ, ಲಾಭಕ್ಕಿಂತ ಕರ್ತವ್ಯ ಮುಖ್ಯ, ಜಯಕ್ಕಿಂತ ಸಾಧನೆ ಮುಖ್ಯ, ವಿಶ್ವ ಪರಿವರ್ತನೆಗೆ ಮಾನವೀಯತೆಯೇ ಏಕೈಕ ಮಾರ್ಗ” ಎಂಬ ಕಲ್ಪನೆ ಅತ್ಯಂತ ಸಮಕಾಲೀನ ಮತ್ತು ಅಗತ್ಯವಾದ ಸಂದೇಶವಾಗುತ್ತದೆ.
ಮಾತಿಗಿಂತ ಕೃತಿ ಮುಖ್ಯ: ನಮ್ಮ ಸಮಾಜದಲ್ಲಿ ಮಾತುಗಳ ಕೊರತೆಯೇ ಇಲ್ಲ. ಸಲಹೆಗಳನ್ನು ಕೊಡುವವರು ಅನೇಕರು, ಆದರೆ ಆ ಸಲಹೆಗಳನ್ನು ತಮ್ಮ ಜೀವನದಲ್ಲಿ ಜಾರಿಗೊಳಿಸುವವರು ಕೆಲವರು ಮಾತ್ರ. ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ನಡವಳಿಕೆ, ಪರಿಸರದ ಕಾಳಜಿ, ಸತ್ಯ, ಶಿಸ್ತಿನ ಬಗ್ಗೆ ಹೇಳುವುದು ಸುಲಭ. ಆದರೆ ಅದನ್ನು ದೊಡ್ಡವರು ತಮ್ಮ ಜೀವನದಲ್ಲಿ ಪಾಲಿಸದಿದ್ದರೆ ಮಕ್ಕಳಿಗೆ ಅದು ಅರ್ಥವಾಗುವುದಿಲ್ಲ.
ಕೃತಿಯ ಮೂಲಕ ಕೊಡುವ ಸಂದೇಶವು ಮಾತನಾಡುವ ಸಾವಿರ ಮಾತಿಗಿಂತ ಪರಿಣಾಮಕಾರಿ. ಉದಾಹರಣೆಗೆ, ಪರಿಸರ ರಕ್ಷಣೆಯ ಬಗ್ಗೆ ಮಹತ್ವದ ಭಾಷಣಗಳನ್ನು ಮಾಡುವುದಕ್ಕಿಂತ, ಒಂದು ಗಿಡ ನೆಡುವ ಕೃತಿ ಹೆಚ್ಚು ಪ್ರಭಾವ ಬೀರುತ್ತದೆ. ಸಮಾಜದಲ್ಲಿ ಬದಲಾವಣೆಯನ್ನು ತರಬೇಕಾದರೆ ನಮ್ಮ ಮಾತುಗಳಿಗಿಂತ ನಮ್ಮ ಕೈಗಳು ಮತ್ತು ನಮ್ಮ ನಡೆ ಮಾತನಾಡಬೇಕು.
ಲಾಭಕ್ಕಿಂತ ಕರ್ತವ್ಯ ಮುಖ್ಯ: ಇಂದಿನ ಕಾಲದಲ್ಲಿ ಲಾಭ, ಹಣ, ಸ್ಥಾನಮಾನ, ಗುರುತಿನ ಹುಡುಕಾಟ ಹೆಚ್ಚಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಹೆಚ್ಚಿದ್ದು, ಅದರ ಪರಿಣಾಮವಾಗಿ ಲಾಭದ ಕಡೆಗೆ ಓಟ ಮತ್ತಷ್ಟು ವೇಗವಾಗಿದೆ. ಆದರೆ ಮನುಷ್ಯನನ್ನು ಮನುಷ್ಯನಾಗಿಸುವುದು ಅವನ ಲಾಭಾಸಕ್ತಿ ಅಲ್ಲ, ಅವನ ಕರ್ತವ್ಯ ಬೋಧನೆ, ಒಬ್ಬ ಶಿಕ್ಷಕ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ್ದರೆ ಹಲವಾರು ಪೀಳಿಗೆಗಳ ಭವಿಷ್ಯ ರೂಪುಗೊಳ್ಳುತ್ತದೆ. ಒಬ್ಬ ವೈದ್ಯನು ತನ್ನ ಕರ್ತವ್ಯವನ್ನು ಮಾನವೀಯತೆಯಿಂದ ನಿಭಾಯಿಸಿದರೆ ಹಲವು ಜೀವಗಳು ಉಳಿಯುತ್ತವೆ.
ಒಬ್ಬ ರೈತ ತನ್ನ ಕರ್ತವ್ಯವನ್ನು ನೆರವೇರಿಸಿದಾಗ ದೇಶದ ಹೊಟ್ಟೆ ( ಆರ್ಥಿಕ ) ತೃಪ್ತಿಯಾಗುತ್ತದೆ. ಕರ್ತವ್ಯ ಬೋಧನೆ ಇಲ್ಲದೆ ವ್ಯಕ್ತಿ ಯಶಸ್ವಿಯಾಗಲಾರ, ಸಮಾಜ ಸಬಲವಾಗಲಾರ, ರಾಷ್ಟ್ರ ಸಮೃದ್ಧಿಯಾಗಲಾರ. ಕರ್ತವ್ಯವನ್ನು ಮೀರಿದ ಲಾಭ ಯಾವತ್ತೂ ಶಾಶ್ವತ ಸುಖ ಕೊಡದು.
ಜಯಕ್ಕಿಂತ ಸಾಧನೆ ಮುಖ್ಯ: ಜಯ ಮತ್ತು ಸಾಧನೆ ಎರಡೂ ಮಹತ್ವದ ಪದಗಳು. ಆದರೆ ಜಗತ್ತಿನ ಇತಿಹಾಸ ನೋಡಿದರೆ ಜಯ ಗಳಿಸಿದವರಿಗಿಂತ ಸಾಧನೆ ಮಾಡಿದವರ ಹೆಸರು ಶಾಶ್ವತವಾಗಿದೆ. ಜಯವು ಕ್ಷಣಿಕ, ಸಾಧನೆ ಶಾಶ್ವತ. ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆಯುವುದು ಜಯ, ಆದರೆ ಪಡೆದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸುವುದು ಸಾಧನೆ. ಒಬ್ಬ ಕ್ರೀಡಾಪಟು ಸ್ಪರ್ಧೆಯಲ್ಲಿ ಗೆಲ್ಲಬಹುದು ಅದು ಜಯ, ಆದರೆ ತನ್ನ ನಿಷ್ಠೆ, ಶ್ರಮ, ಶಿಸ್ತು ಮತ್ತು ಆತ್ಮವಿಶ್ವಾಸದಿಂದ ಜಗತ್ತಿಗೆ ಪ್ರೇರಣೆ ನೀಡುವುದು ಅವನ ಸಾಧನೆ. ಜೀವನದ ಪ್ರತಿಯೊಂದು ಹಾದಿಯಲ್ಲೂ ಜಯವನ್ನು ಹಿಂದೆಟ್ಟುವ ಮೊದಲು ಸಾಧನೆಯ ಮೌಲ್ಯವನ್ನು ಅರಿತರೆ ವ್ಯಕ್ತಿಯ ಬೆಳವಣಿಗೆ ಹೆಚ್ಚು ಗಾಢವಾಗುತ್ತದೆ. ಜಯವು ಬೇರೆಯವರ ಮೇಲೆ, ಸಾಧನೆ ಸ್ವತಃ ತನ್ನ ಮೇಲೆ. ವಿಶ್ವ ಪರಿವರ್ತನೆಗೆ
ಮಾನವೀಯತೆಯೇ ಏಕೈಕ ಮಾರ್ಗ : ಇತ್ತೀಚಿನ ದಿನಗಳಲ್ಲಿ ಜಗತ್ತು ತಂತ್ರಜ್ಞಾನದಲ್ಲಿ ಎಷ್ಟೇ ಮುನ್ನಡೆದಿದ್ದರೂ, ಮಾನವೀಯತೆಯ ಕೊರತೆ ಕಾಣಿಸುತ್ತಿರುವುದು ವಿಷಾದನೀಯ. ಒಬ್ಬನು ಇನ್ನೊಬ್ಬರ ನೋವನ್ನು ಅರ್ಥಮಾಡಿಕೊಳ್ಳದೆ, ಪರಸ್ಪರ ವಿಶ್ವಾಸ ಕುಸಿದಾಗ, ಸಮಾಜ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಅದು ಅಪೂರ್ಣ, ಮಾನವೀಯತೆ ಎಂದರೆ ಕೇವಲ ದಯೆ ಅಥವಾ ಸಹಾನುಭೂತಿ ಅಲ್ಲ, ಇದು ಒಂದು ಜೀವನದ ಧೋರಣೆ, ಪರರ ನೋವನ್ನು ಅರ್ಥೈಸುವುದು, ಅನ್ಯಾಯದ ವಿರುದ್ಧ ಧೈರ್ಯವಾಗಿ ನಿಲ್ಲುವುದು, ಸಹಾಯ ಮಾಡುವ ಮನಸ್ಸು ಹೊಂದಿರುವುದು, ಮಾನವ ಮೌಲ್ಯಗಳನ್ನು ಕಾಪಾಡುವುದು ಇದೇ ನಿಜವಾದ ಮಾನವೀಯತೆ.
ಮಾನವೀಯತೆಯಿಲ್ಲದೆ ಪ್ರಗತಿ, ಶಾಂತಿ, ಸಮತೆ ಯಾವುದೂ ಸಾಧ್ಯವಿಲ್ಲ, ವಿಶ್ವದ ರಾಜಕೀಯ ಬಿಕ್ಕಟ್ಟುಗಳು, ಸಮಾಜದಲ್ಲಿ ಕಾಣುವ ವೈಷಮ್ಯಗಳು, ಕುಟುಂಬಗಳಲ್ಲಿ ಮೂಡುವ ಅಸಮಾಧಾನ ಇವೆಲ್ಲದರ ಬೇರು ಮಾನವೀಯತೆಯಲಿರುವ ಕುಗ್ಗುವಿಕೆಯಲ್ಲಿ ಇರುವುದನ್ನು ಗಮನಿಸುವಷ್ಟು ಕಣ್ಣು ಬೇಕು. ಮಾನವೀಯತೆ ಎಂದರೆ ಮನುಷ್ಯನ ಹೃದಯವನ್ನು ಮನುಷ್ಯನೊಂದಿಗೆ ಜೋಡಿಸುವ ಸೇತುವೆ. ಇದು ಧರ್ಮಕ್ಕೂ, ಜಾತಿಗೂ, ಭಾಷೆಗೂ ಮೀರಿದ ಮೌಲ್ಯ,
ಗಾಂಧೀಜಿ ಅಹಿಂಸೆಯನ್ನು ಆಶ್ರಯಿಸಿ ವಿಶ್ವವನ್ನು ಬದಲಾಯಿಸಲು ಪ್ರಯತ್ನಿಸಿದರು; ಅಂಬೇಡ್ಕರರು ಸಮಾನತೆಯನ್ನು ಪ್ರತಿಪಾದಿಸಿ ಸಮಾಜ ಪರಿವರ್ತನೆಗೆ ದುಡಿದರು; ಮದರ್ ತೇರೆಸಾ ಕರುಣೆಯ ಮೂಲಕ ಲಕ್ಷಾಂತರ ಜನರ ಬದುಕಿನಲ್ಲಿ ಮಿಂಚಿನಂತೆ ಬೆಳಕು ತಂದರು. ಇವರ ಸಾಧನೆಗಳ ಹಿಂದೆ ಒಂದೇ ಶಕ್ತಿ ಮಾನವೀಯತೆ, ಸಮಾಜ ಬದಲಾವಣೆ ಕೊಟ್ಟ ಮಾತುಗಳಿಂದಲ್ಲ, ಕೃತಿಯಿಂದ ಒಬ್ಬರ ಕೃತಿಯೇ ಮತ್ತೊಬ್ಬರನ್ನು ಬದಲಾವಣೆ ಕಡೆ ದಾರಿ ತೋರಿಸುತ್ತದೆ. ಉದಾಹರಣೆಗೆ, ರಸ್ತೆ ಮೇಲೆ ಕಸ ಹಾಕಬೇಡಿ ಎಂದು ಹೇಳುವುದಕ್ಕಿಂತ, ಕಸ ಎತ್ತಿ ಸರಿಯಾದ ಸ್ಥಳದಲ್ಲಿ ಹಾಕುವ ಕೃತಿಯೇ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಮಕ್ಕಳಿಗೆ ಓದು, ಮೌಲ್ಯ, ಸಂಸ್ಕಾರ ಬೋಧಿಸುವುದಕ್ಕಿಂತ, ಅದನ್ನು ದೊಡ್ಡವರು ತಮ್ಮ ಜೀವನದಲ್ಲಿ ತೋರಿಸಿದರೆ ಮಕ್ಕಳ ಮನಸ್ಸಿನ ಮೇಲೆ ಅದು ಗಾಢವಾದ ಪರಿಣಾಮ ಬೀರುತ್ತದೆ.
ಸಮಾಜ ಪ್ರಗತಿ ಹೊಂದುತ್ತಿದ್ದರೂ ಮನುಷ್ಯತ್ವ ಕಡಿಮೆಯಾದರೆ ಅದು ನಿಜವಾದ ಪ್ರಗತಿ ಅಲ್ಲ. ಅದ್ದರಿಂದಲೇ ಮಾತಿಗಿಂತ ಕೃತಿ, ಲಾಭಕ್ಕಿಂತ ಕರ್ತವ್ಯ, ಜಯಕ್ಕಿಂತ ಸಾಧನೆ ಮತ್ತು ಅಂತಿಮವಾಗಿ ಮಾನವೀಯತೆ ಇವುಗಳು ಮಾನವನ ಬದುಕಿನ ನಾಲ್ಕು ಸ್ತಂಭಗಳು, ನಾವು ಮಾಡಬೇಕಾದ ಕರ್ತವ್ಯ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕೆಲವೊಂದು ಸರಳ ಮಾರ್ಾಡುಗಳನ್ನು ಮಾಡಿದರೆ ಮಾನವೀಯತೆ ಮತ್ತೆ ಸಮಾಜದ ಮಜಲಿಗೆ ಬರಬಹುದು. ಹಿರಿಯರಿಗೆ ಗೌರವ, ಮಕ್ಕಳಿಗೆ ಸ್ನೇಹ, ಪ್ರಕೃತಿಗೆ ಪ್ರೀತಿ, ಪರಿಸರ ಸಂರಕ್ಷಣೆಗೆ ಬದ್ಧತೆ, ಪರರನ್ನು ಅರ್ಥಮಾಡಿಕೊಳ್ಳುವ ಮನಸ್ಸು, ಅಗತ್ಯವಿರುವವರಿಗೆ ನೆರವು, ನಿಜವಾದ ಮತ್ತು ಸತ್ಯವಾದ ಮಾತು, ಇವು ಚಿಕ್ಕದಾಗಿಯೇ ತೋರುವುದಾದರೂ, ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ.
ಜೀವನದ ಗುರಿ ಕೇವಲ ಗೆಲ್ಲುವುದು, ಸಂಪಾದಿಸುವುದು ಅಥವಾ ಹೆಸರು ಮಾಡುವುದು ಅಲ್ಲ. ನಾವೆಷ್ಟು ಮನುಷ್ಯತ್ವವನ್ನು ಕಾಪಾಡಿಕೊಂಡೆವು ಎಂಬುದೇ ನಮ್ಮ ಬದುಕಿನ ನಿಜವಾದ ಮೌಲ್ಯ. ಮಾತು ಹೇಳುವುದು ಸುಲಭ, ಆದರೆ ಅದನ್ನು ಕೃತಿಯಾಗಿ ರೂಪಿಸುವುದೇ ಮನುಷ್ಯನ ಮಹತ್ವ, ಲಾಭ ತಾತ್ಕಾಲಿಕ, ಕರ್ತವ್ಯ ಶಾಶ್ವತ. ಜಯ ಕ್ಷಣಿಕ, ಸಾಧನೆ ಪ್ರೇರಣಾದಾಯಕ ಮತ್ತು ವಿಶ್ವ ಪರಿವರ್ತನೆಗೆ ಮಾನವೀಯತೆಯೇ ಏಕೈಕ ಮಾರ್ಗ, ಮಾತಿಗಿಂತ ಕೃತಿ, ಲಾಭಕ್ಕಿಂತ ಕರ್ತವ್ಯ, ಜಯಕ್ಕಿಂತ ಸಾಧನೆ, ಸಮಾಜ ಬದಲಾವಣೆ ಆರಂಭವಾಗುವುದು ನಮ್ಮಿಂದಲೇ. ನಾವು ಪ್ರತಿಯೊಬ್ಬರೂ ಕೇವಲ ಮಾತಿನಲ್ಲಿ ಅಲ್ಲ, ಕೃತಿಯಲ್ಲಿ ಮಾನವೀಯತೆಯನ್ನು ಬದುಕಿಸಿದರೆ, ಈ ಜಗತ್ತು ಇನ್ನಷ್ಟು ಸುಂದರವಾಗುತ್ತದೆ.